ಗಜೇಂದ್ರಗಡದಲ್ಲಿ 6 ಶುದ್ಧ ಕುಡಿವ ನೀರಿನ ಘಟಕಗಳು ಬಂದ್‌

| Published : Mar 01 2024, 02:20 AM IST

ಗಜೇಂದ್ರಗಡದಲ್ಲಿ 6 ಶುದ್ಧ ಕುಡಿವ ನೀರಿನ ಘಟಕಗಳು ಬಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದಲ್ಲಿ ಪೂರೈಕೆಯಾಗುವ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದ್ದರಿಂದ ಶುದ್ಧ ಕುಡಿವ ನೀರು ಪೂರೈಕೆಗಾಗಿ ೭ ಶುದ್ಧ ಕುಡಿವ ಘಟಕಗಳನ್ನು ಉದ್ಘಾಟಿಸಲಾಗಿದೆ. ಆದರೆ ೬ ಬಂದ್ ಆಗಿದ್ದು, ೧ ಘಟಕ ಮಾತ್ರ ಕಾರ್ಯ ನಿರ್ವಹಿಸುತ್ತಿದೆ.

ಎಸ್.ಎಂ. ಸೈಯದ್

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಪಟ್ಟಣದಲ್ಲಿ ಪೂರೈಕೆಯಾಗುವ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದ್ದರಿಂದ ಶುದ್ಧ ಕುಡಿವ ನೀರು ಪೂರೈಕೆಗಾಗಿ ೭ ಶುದ್ಧ ಕುಡಿವ ಘಟಕಗಳನ್ನು ಉದ್ಘಾಟಿಸಲಾಗಿದೆ. ಆದರೆ ೬ ಬಂದ್ ಆಗಿದ್ದು, ೧ ಘಟಕ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಪರಿಣಾಮ ಐಎಸ್‌ಐ ಪ್ರಮಾಣ ಪತ್ರ ಪಡೆಯದ ೮ ಖಾಸಗಿ ಘಟಕಗಳಿಂದ ಪಟ್ಟಣದಲ್ಲಿ ನೀರು ಪೂರೈಕೆಯಾಗುತ್ತಿದೆ. ಈ ಹಿಂದೆ ಪಟ್ಟಣ ಸೇರಿ ಗ್ರಾಮೀಣ ಭಾಗದ ಜನತೆಗೆ ಪ್ಲೋರೈಡ್ ಮುಕ್ತ ನೀರು ಸರಬರಾಜು ಉದ್ದೇಶದಿಂದ ಪ್ರತಿಯೊಂದು ಹಳ್ಳಿ ಹಾಗೂ ಪಟ್ಟಣದಲ್ಲಿ ಅವಶ್ಯಕತೆಗೆ ತಕ್ಕಂತೆ ಶುದ್ಧ ಕುಡಿವ ನೀರಿನ ಘಟಕಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿತ್ತು. ಪರಿಣಾಮ ಪಟ್ಟಣದಲ್ಲಿ ಹೊಸದಾಗಿ ೫ ಶುದ್ಧ ಕುಡಿವ ನೀರು ಘಟಕ ಸ್ಥಾಪನೆಗೆ ಹಿಂದಿನ ಸ್ಥಳೀಯ ಆಡಳಿತ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಿದ್ದರಿಂದ ಪಟ್ಟಣದ ೩, ೧೫, ೧೬, ೧೭ ಹಾಗೂ ೨೩ನೇ ವಾರ್ಡ್‌ನಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು ನಿರ್ಮಾಣ ಬಳಿಕ ಉದ್ಘಾಟಿಸಲಾಗಿತ್ತು. ಆದರೆ ಘಟಕಗಳು ಉದ್ಘಾಟನೆಗೆ ಸೀಮಿತವಾದ ಪರಿಣಾಮ ಸಾರ್ವಜನಿಕರು ರು.೨ಗೆ ೨೫ ಲೀಟರ್ ನೀರು ಪಡೆಯುವ ಬದಲು ಖಾಸಗಿ ಘಟಕಗಳಲ್ಲಿ ರು.೧೦ ನೀಡಿ ೨೫ ಲೀ ನೀರು ಪಡೆಯುತ್ತಿದ್ದಾರೆ.

ಪಟ್ಟಣದಲ್ಲಿ ಕಳೆದ ಕೆಲ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ೮ ಖಾಸಗಿ ಶುದ್ಧ ಕುಡಿವ ಘಟಕಗಳ ಪೈಕಿ ಒಂದು ಘಟಕವು ಮಾತ್ರ ಐಎಸ್‌ಐ ಗುಣಮಟ್ಟದ ಪ್ರಮಾಣ ಪತ್ರವನ್ನು ಪಡೆದಿದೆ. ಇನ್ನುಳಿದ ೭ ಘಟಕಗಳು ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಐಎಸ್‌ಐ ಗುಣಮಟ್ಟದ ಪತ್ರವನ್ನು ಪಡೆಯುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟು ವರ್ಷಗಳು ಗತಿಸಿದ್ದರೂ ಸಹ ಐಎಸ್‌ಐ ಪ್ರಮಾಣ ಪತ್ರವನ್ನು ಪಡೆಯುವ ಗೋಜಿಗೆ ಹೋಗಿಲ್ಲ. ಅಲ್ಲದೆ ಕೆಲ ವರ್ಷಗಳಿಂದ ಪುರಸಭೆಗೆ ತುಂಬಬೇಕಾದ ತೆರಿಗೆಯನ್ನೂ ಸಹ ಈ ಘಟಕಗಳು ತುಂಬದಿದ್ದರೂ ಖಾಸಗಿ ಘಟಕಗಳಿಂದ ಶುದ್ಧ ನೀರು ಎಂದು ಸಾರ್ವಜನಿಕರಿಗೆ ಪೂರೈಸಲಾಗುತ್ತಿದೆ. ಹೀಗಾಗಿ ಖಾಸಗಿ ಘಟಕಗಳು ರು.೧೦ ಪಡೆದು ೨೫ ಲೀಟರ್ ನೀರನ್ನು ಪೂರೈಸುತ್ತಿರುವುದು ಎಷ್ಟರ ಮಟ್ಟಿಗೆ ಶುದ್ಧ ಕುಡಿವ ನೀರಾಗಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ ಅಧಿಕಾರಿಗಳು ಹಾಗೂ ಆಡಳಿತ ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿವೆ. ಜನರ ಪಾಲಿನ ಅಮೃತವಾಗಿರುವ ನೀರನ್ನು ಪೂರೈಸುವ ಘಟಕಗಳು ಐಎಸ್‌ಐ ಗುಣಮಟ್ಟದ ಪ್ರಮಾಣ ಪತ್ರ ಪಡೆಯುವ ಬದಲು ಕೆಲ ವರ್ಷಗಳಿಂದ ಪುರಸಭೆಯಿಂದ ತಾತ್ಕಾಲಿಕ ಪರವಾನಗಿ ಪತ್ರವನ್ನು ಪಡೆದು ಘಟಕಗಳ ನಿರ್ವಹಣೆ ಮಾಡುತ್ತಿವೆ. ಹೀಗಾಗಿ ಪಟ್ಟಣದಲ್ಲಿ ಖಾಸಗಿ ಘಟಕಗಳು ಪೂರೈಸುತ್ತಿರುವ ನೀರಿನ ಗುಣಮಟ್ಟ ಪರೀಕ್ಷೆ ಜೊತೆಗೆ ಪುರಸಭೆಯಿಂದ ಉದ್ಘಾಟನೆ ಆಗಬೇಕಿರುವ ಘಟಕಗಳನ್ನು ಆರಂಭಿಸುವ ಮೂಲಕ ಸಾರ್ವಜನಿಕರಿಗೆ ಪುರಸಭೆ ಶುದ್ಧ ಕುಡಿವ ನೀರು ಪೂರೈಸಲು ಅಧಿಕಾರಿಗಳು ಮುಂದಾಗಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.

ಪಟ್ಟಣದಲ್ಲಿನ ೭ ಶುದ್ಧ ಘಟಕಗಳಲ್ಲಿ ೧ ಘಟಕವು ಆರಂಭವಿದೆ. ಪಟ್ಟಣದಲ್ಲಿ ಸ್ಥಗಿತಗೊಂಡಿರುವ ಘಟಕಗಳ ಪುನರಾರಂಭ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳುತ್ತಾರೆ.ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ೮ ಖಾಸಗಿ ಘಟಕಗಳ ಪೈಕಿ ಒಂದು ಘಟಕವು ಮಾತ್ರ ಐಎಸ್‌ಐ ಪ್ರಮಾಣಪತ್ರ ಪಡೆದಿದೆ. ಆದರೆ ಇನ್ನುಳಿದ ೭ ಘಟಕಗಳಿಗೆ ಪುರಸಭೆಯಿಂದ ತಾತ್ಕಾಲಿಕ ಪರವಾನಗಿ ಪತ್ರವನ್ನು ನೀಡಲಾಗಿದೆ. ಹೀಗಾಗಿ ಖಾಸಗಿ ಘಟಕಗಳು ಐಎಸ್‌ಐ ಪ್ರಮಾಣ ಪತ್ರ ಪಡೆಯದಿದ್ದರೆ ಕಠಿಣ ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಪುರಸಭೆ ಆರೋಗ್ಯ ವಿಭಾಗದ ರಾಘವೇಂದ್ರ ಮಂತಾ

ಹೇಳುತ್ತಾರೆ.