ಯಳೇಸಂದ್ರ ಸೌರವಿದ್ಯುತ್‌ ಘಟಕಕ್ಕೆ ಬೇಕಿದೆ ಕಾಯಕಲ್ಪ

| Published : Mar 01 2024, 02:20 AM IST

ಯಳೇಸಂದ್ರ ಸೌರವಿದ್ಯುತ್‌ ಘಟಕಕ್ಕೆ ಬೇಕಿದೆ ಕಾಯಕಲ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಹತ್ತು ಎಕರೆ ಪ್ರದೇಶದಲ್ಲಿ ಮಾತ್ರ ಸೋಲಾರ್ ಫಲಕಗಳನ್ನು ಅಳವಡಿಸಿದ್ದು, ಉಳಿದ ಐದು ಎಕರೆ ಪ್ರದೇಶ ಖಾಲಿ ಇದೆ. ಇದನ್ನೂ ಬಳಸಿಕೊಂಡರೆ ತಿಂಗಳಿಗೆ ಕನಿಷ್ಠ ಸುಮಾರು ನೂರೈವತ್ತು ಮೆಗಾವ್ಯಾಟ್ ಉತ್ಪಾದನೆ ಮಾಡಬಹುದಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ತಾಲೂಕಿನ ಯಳೇಸಂದ್ರದಲ್ಲಿ ಸ್ಥಾಪಿಸಿರುವ ಸೌರ ವಿದ್ಯುತ್ ಸ್ಥಾವರ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ವಿಫಲವಾಗಿದೆ. ಸರ್ಕಾರದಿಂದ ಕಾಯಕಲ್ಪ ದೊರೆತರೆ ಸ್ಥಳೀಯ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕೊರತೆ ನೀಗಿಸಬಲ್ಲ ಸೌರ ವಿದ್ಯುತ್‌ ಕೇಂದ್ರವಾಗಲಿದೆ.

ತಾಲೂಕಿನ ಬೂದಿಕೋಟೆ ಹೋಬಳಿಯ ಯಳೇಸಂದ್ರ ಗ್ರಾಮದ ಬಳಿ ಅರುಣೋದಯ ಯೋಜನೆಯ ಮೂಲಕ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಿ ಬೂದಿಕೋಟೆ ಹೋಬಳಿಯ ಗ್ರಾಮೀಣ ಭಾಗದ ರೈತರಿಗೆ ವಿದ್ಯುತ್ ಉತ್ಪಾದಿಸಲು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಿಂದ ಮೂರು ಮೆಗಾವ್ಯಾಟ್ ಸೋಲಾರ್ ಸ್ಥಾವರವನ್ನು ನಿರ್ಮಿಸಲಾಗಿದೆ.

ಯೋಜನೆಗೆ 59 ಕೋಟಿ ರು. ವೆಚ್ಚ

೨೦೦೯ರ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಸ್ಥಾವರ ನಿರ್ಮಿಸಲು ಚಾಲನೆ ನೀಡಿ ಅವರ ಅವಧಿಯಲ್ಲೆ ಲೋಕಾರ್ಪಣೆಗೊಂಡಿದೆ. ೧೫ ಎಕರೆ ಪ್ರದೇಶದಲ್ಲಿ ಸ್ಥಾವರವನ್ನು ನಿರ್ಮಿಸಲು ಟೈಟಾನ್ ಎನರ್ಜಿ ಸಿಸ್ಟಂ ಲಿಮಿಟೆಡ್‌ಗೆ ಗುತ್ತಿಗೆಯನ್ನು ನೀಡಿ ಕಾಮಗಾರಿಯನ್ನು ಸಹ ಪೂರ್ಣಗೊಳಿಸಲಾಯಿತು. ಒಟ್ಟು ೫೯ ಕೋಟಿ ರು. ಬಳಸಿಕೊಂಡು ಹೆಚ್ಚಿನ ಬಿಸಿಲು ಮತ್ತು ಒಣ ಹವೆ ಇರುವಂತಹ ೧೦ ಎಕರೆ ಪ್ರದೇಶದಲ್ಲಿ ಅಂದಿನ ನೂತನ ತಂತ್ರಜ್ಞಾನದಲ್ಲಿ ೧೩೩೦೦ ಸೌರಫಲಕಗಳನ್ನು ಅಳವಡಿಸಲಾಗಿದೆ.

ಸ್ಥಾವರದಿಂದ ನಿತ್ಯ ೧೫ ಸಾವಿರ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ಹೊಂದಲಾಗಿದ್ದು, ಡಿಸಿ ವಿದ್ಯುತ್ ಅನ್ನು ಎಸಿ ವಿದ್ಯುತ್ ಆಗಿ ಪರಿವರ್ತಿಸಿ ಗ್ರಿಡ್‌ಗೆ ಪೂರೈಸಲು ೧೨ ಇನ್ವರ್ಟರ್ ಗಳನ್ನು ಜರ್ಮನಿಯಿಂದ ತರಿಸಿ ಅಳವಡಿಸಲಾಗಿದೆ. ಸ್ಥಾವರದಿಂದ ಉತ್ಪಾದಿಸುವ ವಿದ್ಯುತ್ ಅನ್ನು ೨,೦೦೦ ಎಕರೆಗಳಿಗೆ ನೀರು ಪೂರೈಸಲು ಪಂಪ್ ಸೆಟ್‌ಗಳಿಗೆ ಸರಬರಾಜು ಮಾಡುವ ಗುರಿಯನ್ನು ಹೊಂದಲಾಗಿದೆ.

ಈ ಸ್ಥಾವರವು ಸಂಪೂರ್ಣ ಗಣಕೀಕೃತವಾಗಿರುವುದು ವಿಶೇಷ. ದೇಶದಲ್ಲಿ ಮೊದಲಿಗೆ ಪಶ್ಚಿಮ ಬಂಗಾಳದಲ್ಲಿ ಎರಡು ಮೆಗಾವ್ಯಾಟ್ ಸೋಲಾರ್ ಘಟಕವನ್ನು ಸ್ಥಾಪಿಸಲಾಯಿತು. ಅಂದಿನ ಕಾಲಘಟ್ಟದಲ್ಲಿ ಅದೇ ಬಹುದೊಡ್ಡ ಘಟಕ ಎಂದು ಹೇಳಲಾಗುತ್ತಿತ್ತು. ನಂತರ ೨೦೦೯ರಲ್ಲಿ ಯಳೇಸಂದ್ರದಲ್ಲಿ ೩ ಮೆಗಾವ್ಯಾಟ್ ಘಟಕವನ್ನು ಸ್ಥಾಪಿಸಲಾಯಿತು. ಅಂದಿಗೆ ಇದು ಏಷ್ಯಾದಲ್ಲಿಯೇ ಬಹುದೊಡ್ದ ಸೋಲಾರ್ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಕೇವಲ 40 ಮೆ.ವ್ಯಾ. ಉತ್ಪಾದನೆ

ರಾಜ್ಯದಲ್ಲಿ ಸುಮಾರು ೧೦ಕ್ಕೂ ಹೆಚ್ಚಿನ ಸ್ಥಾವರಗಳು ಕಾರ್ಯ ನಿರ್ವಹಿಸುತ್ತಿದ್ದು, ಇತರೆ ಸ್ಥಾವರಗಳಿಗಿಂತ ಬಹಳ ಉತ್ತಮವಾಗಿ ಯಳೇಸಂದ್ರ ಸ್ಥಾವರ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಆದರೆ ಇದನ್ನು ಇನ್ನಷ್ಟು ಅಭಿವೃದ್ದಿಗೊಳಿಸಲು ಸರ್ಕಾರ ಮುಂದಾಗುತ್ತಿಲ್ಲ. ಸದ್ಯ ಯಳೇಸಂದ್ರ ಸೋಲಾರ್ ಘಟಕದಿಂದ ಬೂದಿಕೋಟೆಯ ಸಬ್ ಸ್ಟೇಷನ್ ಗೆ ತಿಂಗಳಿಗೆ ೩೫ ರಿಂದ ೪೦ ಮೆಗಾವ್ಯಾಟ್ ಮಾತ್ರ ವಿದ್ಯುತ್ ಸರಬರಾಜು ಆಗುತ್ತಿದೆ. ಆದರೆ ಯೋಜನೆಯ ಪ್ರಕಾರ ಸ್ಥಾವರದಿಂದ ತಿಂಗಳಿಗೆ ೯೦ ಮೆ.ವ್ಯಾಟ್ ಉತ್ಪಾದನೆಯಾಗಿ ಸಬ್ ಸ್ಟೇಷನ್ ಗೆ ಸರಬರಾಜು ಆಗಬೇಕಿತ್ತು.

ಬೂದಿಕೋಟೆಯ ಸಬ್ ಸ್ಟೇಷನ್ ೫ ಅಗ್ರಿ ಪೀಡರ್, ೧ ನಿರಂತರ ಜ್ಯೋತಿ ಮತ್ತು ೧ ಪಟ್ಟಣ ಪೀಡರ್ ಹೊಂದಿದೆ ಇದರ ಮೂಲಕ ೫೫ ಗ್ರಾಮಗಳಿಗೆ ನಿತ್ಯ ವಿದ್ಯುತ್ ಪೂರೈಕೆ ಆಗಲಿದ್ದು, ನಿತ್ಯ ೨೦ ಮೆ. ವ್ಯಾಟ್ ಬೇಡಿಕೆ ಇದೆ. ಸದ್ಯ ೧೦ ರಿಂದ ೧೨ ಮೆ.ವ್ಯಾ ವಿತರಣೆ ಮಾಡಲಾಗುತ್ತಿದೆ. ಇದರಿಂದಾಗಿ ರೈತರ ಕೃಷಿ ಚಟುವಟಿಕೆಗೆ ಸಮಸ್ಯೆ ಎದುರಾಗುತ್ತಿದೆ.

150 ಮೆ.ವ್ಯಾ ಉತ್ಪಾದನೆ ಸಾಧ್ಯ

೩ ಮೆ.ವ್ಯಾಟ್ ಸಾಮರ್ಥ್ಯ ಹೊಂದಿರುವಂತಹ ಸೋಲಾರ್ ಸ್ಥಾವರದಿಂದ ಉತ್ಪಾದನೆ ಅಗುವಂತಹ ವಿದ್ಯುತ್ ಬೂದಿಕೋಟೆ ಗ್ರಾಮಕ್ಕೂ ಸಾಕಾಗುತ್ತಿಲ್ಲ. ೧೫ ಎಕರೆ ಪ್ರದೇಶದ ಪೈಕಿ ಕೇವಲ ೧೦ ಎಕರೆ ಪ್ರದೇಶದಲ್ಲಿ ಮಾತ್ರ ಸೋಲಾರ್ ಫಲಕಗಳನ್ನು ಅಳವಡಿಸಿದ್ದು, ಉಳಿದ ೫ ಎಕರೆ ಪ್ರದೇಶ ಖಾಲಿ ಇದೆ. ಖಾಲಿ ಇರುವ ಸ್ಥಳದಲ್ಲಿ ಆಧುನಿಕ ತಂತ್ರಜ್ಞಾನದ ಸೋಲಾರ್ ಫಲಕಗಳನ್ನು ಅಳವಡಿಸಿ, ಈಗ ಇರುವಂತಹ ಫಲಕಗಳನ್ನು ಉನ್ನತೀಕರಿಸಿದರೆ ಸ್ಥಾವರದಿಂದ ತಿಂಗಳಿಗೆ ಕನಿಷ್ಠ ಸುಮಾರು ೧೫೦ ಮೆಗಾವ್ಯಾಟ್ ಉತ್ಪಾದನೆ ಮಾಡಬಹುದಾಗಿದೆ. ಆದ್ದರಿಂದ ಸರ್ಕಾರ ಎಚ್ಚೆತ್ತುಕೊಂಡು ಸೋಲಾರ್ ಸ್ಥಾವರಕ್ಕೆ ಕಾಯಕಲ್ಪ ನೀಡಲು ಮುಂದಾಗಬೇಕಿದೆ.