6 ಕೆರೆಗಳ ಪುನಶ್ಚೇತನ: ಡಾ.ವೀರೇಂದ್ರ ಹೆಗ್ಗಡೆ ಮೆಚ್ಚುಗೆ

| Published : Jul 14 2024, 01:31 AM IST

6 ಕೆರೆಗಳ ಪುನಶ್ಚೇತನ: ಡಾ.ವೀರೇಂದ್ರ ಹೆಗ್ಗಡೆ ಮೆಚ್ಚುಗೆ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ಹೊಸದುರ್ಗ ತಾಲೂಕಿನ 6 ಕೆರೆಗಳ ಪುನಶ್ಚೇತನ ಕಾರ್ಯಕ್ರಮದ ವರದಿ ವೀಕ್ಷಿಸಿದ ಡಾ. ವೀರೇಂದ್ರ ಹೆಗ್ಗಡೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ರೈತನ ಜೀವನಾಡಿ ಕೆರೆಗಳ ಅಭಿವೃದ್ಧಿಯೇ ನಮ್ಮ ಗುರಿ, ನಮ್ಮ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ನೌಕರರು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಮಹಿಳೆ ಸ್ವಾವಲಂಬಿಯಾಗಿ ಬದುಕು ನಡೆಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಡಾ. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳ ಯೋಜನೆಯಿಂದ ಹೊಸದುರ್ಗ ತಾಲೂಕಿನಲ್ಲಿ ಕೈಗೊಂಡ ಕೆರೆ ಅಭಿವೃದ್ಧಿ ವರದಿ ಪರಿಶೀಲಿಸಿ ಮಾತನಾಡಿದ ಅವರು, ಹೊಸದುರ್ಗ ತಾಲೂಕಿನಲ್ಲಿ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾದ ಮಲ್ಲಪ್ಪನಹಳ್ಳಿ -ಹೊಸದುರ್ಗ ರೋಡ್‌ ಕೆರೆ, ಗೌಡನಕಟ್ಟೆ ಕೆರೆ- ದ್ಯಾವಜ್ಜಪಾಳ್ಯ, ಬನಸಿಹಳ್ಳಿ, ಬೈರವೇಶ್ವರ ದೇವಸ್ಥಾನದ ಕೆರೆ, ಡಿ.ಬಿ.ಕೆರೆ, ಕಂಚೀ ಅಲ್ಲಾಳನಾಥ ದೇವಸ್ಥಾನದ ಕೆರೆ, ಕಂಚೀನಗರ, ಬೋಕಿಕೆರೆ ಕೆರೆ ಈ ಸ್ಥಳಗಳಲ್ಲಿ ಕೆರೆ ಪುನಶ್ಚೇತನ ಮಾಡಲಾಗಿದ್ದು, ಈ ಯೋಜನೆಗಳಿಗೆ ಕ್ಷೇತ್ರದ ಅನುದಾನವಾಗಿ ₹42,92,782 ವ್ಯಯ ಮಾಡಲಾಗಿದೆ. ಇದನ್ನು ಬಳಸಿಕೊಂಡ ಸ್ಥಳೀಯ ನಮ್ಮ ಊರು ನಮ್ಮ ಕೆರೆ ಸಮಿತಿ ಸದಸ್ಯರು ಉತ್ತಮವಾಗಿ ಕೆರೆ ಪುನಶ್ಚೇತನ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸದುರ್ಗ ತಾಲೂಕಿನಲ್ಲಿ ಅಭಿವೃದ್ಧಿಪಡಿಸಿರುವ 6 ಕೆರೆ, 2 ವಾತ್ಸಲ್ಯ ಮನೆ ರಚನೆ, ವಿಕಲ ಚೇತನರಿಗೆ ವಿವಿಧ ರೀತಿ ಪರಿಕರ ವಿತರಣೆ, ಇನ್ನಿತರ ಸಮಾಜಮುಖಿ ಕೆಲಸಗಳಿಗೆ ಉತ್ತಮವಾಗಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು, ಗಣ್ಯರು ಸಹಕಾರ ನೀಡಿರುವುದು ಶ್ಲಾಘನೀಯ ಎಂದ ಅವರು, ಇನ್ನೂ ಹೆಚ್ಚಿನ ಸಮಾಜಮುಖಿ ಕೆಲಸ ಮಾಡಿ ಎಂದು ಸಂಸ್ಥೆ ಯೋಜನಾಧಿಕಾರಿಗಳಿಗೆ ತಿಳಿಸಿದರು.

ಪ್ರಾದೇಶಿಕ ನಿರ್ದೇಶಕಿ ಗೀತಾ.ಬಿ ಹಿರಿಯೂರು ಜಿಲ್ಲಾ ನಿರ್ದೇಶಕ ವಿನಯ್‌ ಕುಮಾರ್‌ ಸುವರ್ಣ, ಹಾಲು ರಾಮೇಶ್ವರ ಯೋಜನಾಧಿಕಾರಿ ಚಂದ್ರಶೇಖರ್‌, ಮತ್ತು ಹೊಸದುರ್ಗ ತಾಲೂಕು ಯೋಜನಾಧಿಕಾರಿ ಶಿವಣ್ಣ ಉಪಸ್ಥಿತರಿದ್ದರು.