ಸಾರಾಂಶ
ಶಿವಕುಮಾರ ಕುಷ್ಟಗಿ ಗದಗ
ವಿಭೂತಿ ತಯಾರಿಕೆಯಲ್ಲಿ ಬೇಕಾಗಿರುವ ಪ್ರಮುಖ ವಸ್ತುವಾಗಿರುವ ಕುಳ್ಳು ಅಥವಾ ಬೆರಣಿಗೆ (ಒಣಗಿಸಿದ ಸಗಣಿ) ಈಗ ಎಲ್ಲಿಲ್ಲದ ಬೇಡಿಕೆ. ಆನ್‌ಲೈನ್ ವಹಿವಾಟಿನ ಅಮೆರಿಕ ಮೂಲದ ದಿಗ್ಗಜ ಕಂಪನಿ ಅಮೇಜಾನ್ ಕೂಡಾ ಕುಳ್ಳುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದೆ.
ಅದರಲ್ಲಿಯೂ ದೇಶಿ ಆಕಳುಗಳ ಕುಳ್ಳಿಗೆ ಭಾರೀ ಬೇಡಿಕೆ ಇದೆ. ಅಂತಹ ಬೇಡಿಕೆಯ ಕುಳ್ಳುಗಳನ್ನು ಗದಗ ತಾಲೂಕಿನ ಕೋಟುಮಚಗಿ ಗ್ರಾಮಸ್ಥರು ಉಚಿತವಾಗಿ ವಿಭೂತಿ ತಯಾರಿಸಲು ಶಿವಯೋಗ ಮಂದಿರಕ್ಕೆ ನೀಡುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಮಾದರಿ ಕಾರ್ಯ: ಶಿವಯೋಗ ಮಂದಿರದಲ್ಲಿ ವಿಭೂತಿ ತಯಾರಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದಕ್ಕಾಗಿ ಅಲ್ಲಿ ಸಾವಿರಾರು ದೇಶಿ ಆಕಳುಗಳನ್ನು ಸಾಕಲಾಗಿದೆ. ಕೋಟುಮಚಗಿ ಗ್ರಾಮದ ವೀರೇಶ ನೇಗಲಿ ಅವರು ಈ ವಿಭೂತಿ ತಯಾರಿಕೆಯಲ್ಲಿ ತಮ್ಮ ಸೇವೆಯೂ ಇರಲಿ ಎಂದು ಆಶಿಸಿದರು.
ಅವರು ಹಾನಗಲ್ಲ ಕುಮಾರೇಶ್ವರ ಸಾವಯವ ಕೃಷಿ ನಿವಾಸ ಹೆಸರಿನಲ್ಲಿ ಸಂಸ್ಥೆ ಪ್ರಾರಂಭಿಸಿದ್ದು, ತಮ್ಮ ಜಮೀನುಗಳಲ್ಲಿ ಸಾವಯವ ಕೃಷಿ ಮಾಡುವುದರೊಟ್ಟಿಗೆ ದೇಶಿ ಆಕಳುಗಳನ್ನು ಸಾಕಿದ್ದಾರೆ. ದೇಶಿ ಆಕಳುಗಳ ಸಗಣಿಯನ್ನು ಸಂಗ್ರಹಿಸಿ ಮೊದ ಮೊದಲು ಅವರೊಬ್ಬರೇ 2 ಸಾವಿರಕ್ಕೂ ಅಧಿಕ ಕುಳ್ಳುಗಳನ್ನು ತಯಾರಿಸಿ ಶಿವಯೋಗ ಮಂದಿರಕ್ಕೆ ನೀಡಿದ್ದರು.
ಊರಿಗೆಲ್ಲಾ ಪ್ರೇರಣೆ: ವೀರೇಶ ನೇಗಲಿ ಅವರ ಪವಿತ್ರ ಸೇವೆಯಿಂದ ಪ್ರೇರಿತರಾದ ಗ್ರಾಮದ ಇನ್ನುಳಿದ ಜನರು ದೇಶಿ ಆಕಳು ಸಾಕಣೆ ಪ್ರಾರಂಭಿಸಿ, ಅಲ್ಲಿ ಸಂಗ್ರಹವಾಗುವ ಸಗಣಿಯನ್ನು ಸಂಗ್ರಹಿಸಿ ವೀರೇಶ ನೇಗಲಿ ಅವರ ಮನೆಗೆ ನೀಡುತ್ತಾ ಬಂದರು. ಜನರಿಂದ ಸಂಗ್ರಹವಾಗುವ ಸಗಣಿಯನ್ನು ಸ್ವಚ್ಛಗೊಳಿಸಿ ಕುಳ್ಳುಗಳನ್ನಾಗಿ ನೇಗಲಿ ಕುಟುಂಬದವರು ಸಿದ್ಧ ಮಾಡಿದ್ದು, ಸದ್ಯ 6ರಿಂದ 7 ಸಾವಿರ ಕುಳ್ಳುಗಳು ಶಿವಯೋಗ ಮಂದಿರಕ್ಕೆ ಸಲ್ಲಿಕೆಯಾಗಿವೆ.
ಪವಿತ್ರ ಕಾರ್ಯ: ಶಿವಯೋಗ ಮಂದಿರದ ವಿಭೂತಿ ಗುಣಮಟ್ಟ ಮತ್ತು ಪಾವಿತ್ರ್ಯತೆಗೆ ವಿಶೇಷ ಪ್ರಾಧಾನ್ಯತೆ ನೀಡುತ್ತದೆ. ಅದಕ್ಕೆ ಧಕ್ಕೆಯಾಗದಂತೆ ಗ್ರಾಮಸ್ಥರು ದೇಶಿ ಆಕಳುಗಳ ಸಗಣಿಯನ್ನು ಜಳಕ ಮಾಡಿಯೇ ಸಂಗ್ರಹಿಸಿ, ಅಂದಿನ ಸಗಣಿಯನ್ನು ಅಂದೇ ಸ್ವಚ್ಛಗೊಳಿಸಿ, ಸ್ವಚ್ಛವಾದ ಮತ್ತು ಎತ್ತರದ ಸ್ಥಳದಲ್ಲಿ ಕುಳ್ಳುಗಳನ್ನಾಗಿ ಮಾಡಿ ಒಣಗಿಸಿ ಅವುಗಳನ್ನು ಸಿದ್ಧ ಮಾಡಿದ್ದಾರೆ.
ಹೀಗೆ ಸಿದ್ಧವಾದ ಕುಳ್ಳುಗಳನ್ನು ಮಾ. 12ರಂದು ಗ್ರಾಮದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಭಜನೆ ಮೆರವಣಿಗೆ ಮೂಲಕ ಅವುಗಳನ್ನು ಶಿವಯೋಗ ಮಂದಿರಕ್ಕೆ ಸಲ್ಲಿಸಿದ್ದಾರೆ. ಗ್ರಾಮದ ವಿಶೇಷ ಸಾಮಾಜಿಕ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
₹199ಕ್ಕೆ 5 ಕುಳ್ಳು ಮಾರಾಟ: ಆಮೆಜಾನ್ ಕಂಪನಿಯಲ್ಲಿ ಗೋಕುಲಂ ಎನ್ನುವ ಸಂಸ್ಥೆಯು ಕೌ ಡಂಗ್ ಕೇಕ್ಸ್, ಗೋಬರ್ ಹವಾನ್ ಫಾರ್ ಪೂಜಾ ಪರ್ಪಸ್ ಎನ್ನುವ ಹೆಸರಿನಲ್ಲಿ ₹199ಕ್ಕೆ 5 ಕುಳ್ಳುಗಳನ್ನು ಮಾರಾಟ ಮಾಡುತ್ತಿದೆ. ಈ ಸಂಸ್ಥೆ ನಿಗದಿಪಡಿಸಿದ ದರದ ಆಧಾರದಲ್ಲಿ ಗಮನಿಸಿದಲ್ಲಿ ಅಂದಾಜು ₹3 ಲಕ್ಷಕ್ಕೂ ಅಧಿಕ ಮೌಲ್ಯದ ಕುಳ್ಳುಗಳನ್ನು ಕೋಟುಮಚಗಿ ಗ್ರಾಮಸ್ಥರು ನೀಡಿದ್ದಾರೆ.
ಇದುವರೆಗೆ ಶಿವಯೋಗ ಮಂದಿರಕ್ಕೆ ಆಹಾರ ಸಾಮಗ್ರಿಗಳು, ದವಸ-ಧಾನ್ಯಗಳು, ಹೊಟ್ಟು, ಮೇವು ಎಲ್ಲವನ್ನೂ ಭಕ್ತರು ನೀಡುತ್ತಿದ್ದರು. ಆದರೆ ಕುಳ್ಳುಗಳನ್ನು ನೀಡುವ ಮೂಲಕ ಹೊಸ ಇತಿಹಾಸವನ್ನು ಕೋಟುಮಚಗಿ ಗ್ರಾಮಸ್ಥರು ನಿರ್ಮಿಸಿದ್ದಾರೆ.
ಇದೊಂದು ಪವಿತ್ರ ಮತ್ತು ವಿಭೂತಿ ತಯಾರಿಕೆಗೆ ಬಳಕೆಯಾಗುವ ಸಗಣಿ. ದೇಶಿ ಆಕಳುಗಳನ್ನು ಸಾಕಿರುವ ನನಗೆ ಮೊದಲು ಇಂತಹ ಪ್ರೇರಣೆ ಸಿಕ್ಕಿತು. ನಾನು ಕುಳ್ಳುಗಳನ್ನು ತಯಾರಿಸಿ ಶಿವಯೋಗ ಮಂದಿರಕ್ಕೆ ಸಲ್ಲಿಸಿದೆ. ಆನಂತರ ಗ್ರಾಮದ ಹಲವರು ಆಸಕ್ತಿ ತೋರಿದರು. ಈಗ ಸಾಕಷ್ಟು ಸಂಖ್ಯೆಯ ಕುಳ್ಳುಗಳನ್ನು ದೇವರ ಸನ್ನಿಧಿಗೆ ಸಲ್ಲಿಸಿದ್ದೇವೆ. ಇದೊಂದು ದೇವರ ಕೆಲಸವೆಂದು ನಾವೆಲ್ಲ ಮಾಡಿದ್ದೇವೆ ಎಂದು ಹಾನಗಲ್ಲ ಕುಮಾರೇಶ್ವರ ಸಾವಯವ ಕೃಷಿ ನಿವಾಸದ ಮಾಲೀಕ ವೀರೇಶ ನೇಗಲಿ ಹೇಳಿದರು.