ಅನಂತಕುಮಾರ್ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಸಂಶೋಧಕರ ಪ್ರತಿಭಟನೆ

| Published : Mar 15 2024, 01:24 AM IST

ಸಾರಾಂಶ

ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ಅನಂತಕುಮಾರ್ ಹೆಗಡೆ ಇಂತಹ ಸಂವಿಧಾನ ವಿರೋಧಿ, ಮನುವಾದಿ, ಪ್ರಜ್ಞೆ ಇಲ್ಲದೆ ಹಲವು ಬಾರಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬಂತಹ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಇಂತದರ ವಿರುದ್ಧ ಪ್ರತಿಯೊಬ್ಬ ಪ್ರಜೆಯೂ ಖಂಡಿಸಬೇಕಿದೆ ಹಾಗೂ ಇಂತಹ ಮೂರ್ಖ ಸಂಸದರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರುಸಂಸದ ಅನಂತಕುಮಾರ್ ಹೆಗಡೆ ಇತ್ತೀಚೆಗೆ ಬಿಜೆಪಿ 400 ಸೀಟುಗಳನ್ನು ಗೆದ್ದರೆ ಸಂವಿಧಾನ ಬದಲಾವಣೆ ಹಾಗೂ ತಿದ್ದುಪಡಿ ಮಾಡಬಹುದು ಎಂಬ ಸಂವಿಧಾನ ವಿರೋಧಿ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಸಂಶೋಧಕರ ವೇದಿಕೆಯವರು ಮೈಸೂರು ವಿವಿ ಮಾನಸಗಂಗೋತ್ರಿಯ ಕ್ಲಾಕ್ ಟವರ್ ಮುಂಭಾಗದಲ್ಲಿ ಗುರುವಾರ ಪ್ರತಿಭಟಿಸಿದರು.

ಈ ವೇಳೆ ಕರ್ನಾಟಕ ರಾಜ್ಯ ಸಂಶೋಧಕರ ವೇದಿಕೆ ಅಧ್ಯಕ್ಷ ರಾಜೇಶ್ ಚಾಕನಹಳ್ಳಿ ಮಾತನಾಡಿ, ವಿಶ್ವದ ಜ್ಞಾನದ ಸಂಕೇತವಾದ ಡಾ. ಅಂಬೇಡ್ಕರ್ ಅವರು ಕೊಟ್ಟ ಶ್ರೇಷ್ಠ ಸಂವಿಧಾನದಿಂದ ಎಲ್ಲಾ ಪ್ರಜೆಗಳಿಗೂ ಸಮಾನತೆಯ ಹಕ್ಕು ಸಿಕ್ಕಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮನುವಾದಿಗಳು ತಮ್ಮ ಅಸ್ತಿತ್ವಕ್ಕಾಗಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.

ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ಅನಂತಕುಮಾರ್ ಹೆಗಡೆ ಇಂತಹ ಸಂವಿಧಾನ ವಿರೋಧಿ, ಮನುವಾದಿ, ಪ್ರಜ್ಞೆ ಇಲ್ಲದೆ ಹಲವು ಬಾರಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬಂತಹ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಇಂತದರ ವಿರುದ್ಧ ಪ್ರತಿಯೊಬ್ಬ ಪ್ರಜೆಯೂ ಖಂಡಿಸಬೇಕಿದೆ ಹಾಗೂ ಇಂತಹ ಮೂರ್ಖ ಸಂಸದರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಸಂಶೋಧಕ ಲಿಂಗರಾಜು ಮಾತನಾಡಿ, ಸಂವಿಧಾನ ನಮ್ಮ ರಾಷ್ಟ್ರ ಗ್ರಂಥ, ಇದನ್ನು ಯಾರೇ ವಿರೋಧಿಸಿದರು ಅದು ಅಕ್ಷಮ್ಯ ಅಪರಾಧ. ಹೀಗಾಗಿ, ಸಂಸದರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆಯ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಕಾರ್ಯದರ್ಶಿ ಪಾರ್ಥ, ಸಂಶೋಧಕರಾದ ವರಹಳ್ಳಿ ಆನಂದ್, ಸಂಜಯ್ ಕುಮಾರ್, ಕುಶಾಲ್, ಜಗದೀಶ್ ಮಹದೇವಯ್ಯ, ರಂಗಸ್ವಾಮಿ, ಮಲ್ಲೇಶ್, ಸುರೇಶ್, ಪ್ರತಾಪ್ ನಟರಾಜ್ ಬೊಮ್ಮಲಪುರ, ರಾಜೇಶ್ ಶಿವ, ನವೀನ್ ಜೀವಿ, ಪ್ರಸನ್ನ ಮಹದೇವ, ಹನುಮಂತಪ್ಪ, ಶಿವು ಹೊಸಳ್ಳಿ, ಶಿವು ಬಂಡಳ್ಳಿ, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಚಿನ್, ಗೋಪಾಲ್ ಮೊದಲಾದವರು ಇದ್ದರು.