ಮುಂಗಾರು ಅಬ್ಬರ : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಗಾಳಿಗೆ ಮುರಿದು ಬಿದ್ದ ಮರಗಳು

| Published : Jul 28 2024, 02:03 AM IST / Updated: Jul 28 2024, 11:25 AM IST

ಮುಂಗಾರು ಅಬ್ಬರ : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಗಾಳಿಗೆ ಮುರಿದು ಬಿದ್ದ ಮರಗಳು
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿ ಶನಿವಾರ ಭಾರೀ ಗಾಳಿಗೆ ಆರು ಕಡೆ ಮರಗಳು ಬುಡಮೇಲಾಗಿ ಬಿದ್ದು ಕೆಲವರಿಗೆ ಗಂಭೀರ ಪೆಟ್ಟಾಗಿ ಆಟೋ-ಕಾರು ಜಖಂಗೊಂಡಿವೆ.

 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಭಾರೀ ಗಾಳಿಗೆ ಆರು ಕಡೆ ಮರಗಳು ಬುಡಮೇಲಾಗಿ ಬಿದ್ದು ಕೆಲವರಿಗೆ ಗಂಭೀರ ಪೆಟ್ಟಾಗಿ ಆಟೋ-ಕಾರು ಜಖಂಗೊಂಡಿವೆ.

ರಿಚ್ಮಂಡ್ ವೃತ್ತ, ಗವಿಪುರದ ಸುಂಕೇನಹಳ್ಳಿ, ಅತ್ತಿಗುಪ್ಪೆಯ ಬಿನ್ನಿಮಿಲ್ ಎಂಪ್ಲಾಯಿಸ್ ಕಾಲೋನಿ, ಕ್ವೀನ್ಸ್‌ ರಸ್ತೆ, ಹೊಸಹಳ್ಳಿ ಹಾಗೂ ಸೌತ್ ಎಂಡ್ ವೃತ್ತದ ಬಳಿ ಮರಗಳು ಬುಡಮೇಲಾಗಿ ಕೆಲವರಿಗೆ ಗಾಯವಾಗಿದೆ.

ಆಟೋ ಚಾಲಕನ ಕಾಲು ಮುರಿತ

ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಆಟೋ ಮೇಲೆ ರಿಚ್ಮಂಡ್ ವೃತ್ತದ ಬಳಿ ಏಕಾಏಕಿ ಮರ ಮುರಿದು ಬಿದ್ದಿದೆ. ಆಟೋ ಸಂಪೂರ್ಣ ಜಖಂಗೊಂಡಿದ್ದು, ಆಟೋ ಚಾಲಕನ ಎರಡೂ ಕಾಲುಗಳು ಮುರಿದಿವೆ. ಚಾಲಕ ದಿವಾಕರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದೃಷ್ಟವಶಾತ್ ಆಟೋದಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೊಂಬೆ ಬಿದ್ದು ಬೈಕ್‌ ಜಖಂ

ಗವಿಪುರ ಬಡಾವಣೆಯ ಕೆಂಪೇಗೌಡ ನಗರ ಬಳಿಯ ಸುಂಕೇನಹಳ್ಳಿ ಉದ್ಯಾನವನದಲ್ಲಿ ಗಾಳಿಯ ರಭಸಕ್ಕೆ ಮರದ ಸಣ್ಣ ಕೊಂಬೆಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನದ ಮುಂಭಾಗದ ಮೇಲೆ ಮುರಿದು ಬಿದ್ದಿದ್ದು, ಕೊಂಬೆಗಳು ಬಿದ್ದ ರಭಸಕ್ಕೆ ವಾಹನಗಳು ಜಖಂ ಆಗಿದೆ. ದ್ವಿಚಕ್ರ ವಾಹನದಲ್ಲಿದ್ದ ಗಗನ್ ಹಾಗೂ ಇವರ ಪುತ್ರ ಯುವ ಎಂಬುವವರಿಗೆ ಸಣ್ಣ ಗಾಯಗಳಾಗಿದ್ದು, ಗಾಯಾಳುಗಳಿಗೆ ಬಿಬಿಎಂಪಿಯಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ರಸ್ತೆಗೆ ಬಿದ್ದ ಮರ

ಅತ್ತಿಗುಪ್ಪೆಯ ಬಿನ್ನಿಮಿಲ್ ಎಂಪ್ಲಾಯಿಸ್ ಕಾಲೋನಿಯಲ್ಲಿ ರಸ್ತೆ ಬದಿಯಲ್ಲಿ ಬೆಳೆದಿದ್ದ ಪೆಲ್ಟೋಪಾರಂ ಮರದ ಕೊಂಬೆ ಗಾಳಿ ರಭಸಕ್ಕೆ ರಸ್ತೆಯಲ್ಲಿದ್ದ ವಾಹನದ ಮೇಲೆ ಮುರಿದು ಬಿದ್ದಿದ್ದು, ರೆಂಬೆ ಬಿದ್ದ ರಭಸಕ್ಕೆ ವಾಹನವು ಸ್ಥಳದಲ್ಲಿಯೇ ಜಖಂಗೊಂಡಿವೆ.ರೆಂಬೆ ಬಿದ್ದು ವಾಹನ ಜಖಂ

ಹೊಸಹಳ್ಳಿಯ ಅಂಬಾಭವಾನಿ ದೇವಸ್ಥಾನ ಸಮೀಪದ ಟೆಲಿಕಾಂ ಲೇಔಟ್‌ನಲ್ಲಿ ಮರದ ರೆಂಬೆ ಮುರಿದು ರಸ್ತೆ ಬದಿ ನಿಂತಿದ್ದ ವಾಹನದ ಮೇಲೆ ಬಿದ್ದ ಪರಿಣಾಮ ವಾಹನ ಜಖಂ ಆಗಿದೆ.ರಸ್ತೆಗೆ ಅಡ್ಡಲಾಗಿ ಬಿದ್ದ ಮರ

ಬಸವನಗುಡಿಯ ಸೌತ್ ಎಂಡ್ ರಸ್ತೆಯ ಸುರಾನ ಕಾಲೇಜು ಹತ್ತಿರ ಪೆಲೋಪಾರಂ ಮರದ ರೆಂಬೆಯು ಗಾಳಿಯ ರಭಸಕ್ಕೆ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಈ ವೇಳೆ ಅಲ್ಲಿ ಯಾರೂ ಇರಲಿಲ್ಲ. ಸಂಚಾರಿ ಪೋಲಿಸ್ ಸಿಬ್ಬಂದಿಗಳು ಬಿಬಿಎಂಪಿಗೆ ಮಾಹಿತಿ ನೀಡಿ ಮರವನ್ನು ತೆರವುಗೊಳಿಸಲಾಗಿದೆ.

ಭಾರಿ ಮರ ಧರೆಗೆ

ಇಂಡಿಯನ್‌ ಎಕ್ಸ್‌ಪ್ರೆಸ್‌ ವೃತ್ತ ಬಳಿಯ ಕ್ವೀನ್ಸ್ ರಸ್ತೆಯಲ್ಲಿ ಬೃಹತ್‌ ಗಾತ್ರದ ಮರ ಧರೆಗುರುಳಿ ಎರಡು ಕಾರು ಜಖಂಗೊಂಡಿವೆ. ಮರಬಿದ್ದ ವೇಳೆ ಕಾರಿನಲ್ಲಿ ಯಾರೂ ಇರಲಿಲ್ಲ.

ಒಣ ಮರ ತೆರವಿಗೆ ಪಾಲಿಕೆ ನಿರ್ಲಕ್ಷ್ಯ

ರಸ್ತೆ ಬದಿಯ ಒಣಗಿದ ಮರಗಳನ್ನು ತೆರವುಗೊಳಿಸುವಂತೆ ಸರ್ಕಾರ ಆದೇಶ ನೀಡಿದ್ದರೂ ಬಿಬಿಎಂಪಿ ಒಣ ಮರಗಳನ್ನು ತೆರವು ಮಾಡದಿರುವುದೇ ಇಂತಹ ಅನಾಹುತಕ್ಕೆ ಕಾರಣವಾಗಿದೆ. ಬಿಬಿಎಂಪಿ ನಿರ್ಲಕ್ಷ್ಯದಿಂದಲೇ ಅವಘಡ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಅನೇಕ ಭಾಗದಲ್ಲಿ ಬೃಹತ್ ಮರಗಳ ರೆಂಬೆ ಕೊಂಬೆಗಳು ಒಣಗಿವೆ. ಇವುಗಳನ್ನು ತೆರವು ಮಾಡುವಲ್ಲಿ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನಿಮ್ಮ ಗಮನಕ್ಕೆ ಬಂದಲ್ಲಿ ಫೋಟೋ ಸಮೇತ ಬಿಬಿಎಂಪಿಗೆ ರವಾನೆ ಮಾಡುವಂತೆ ತಿಳಿಸಿ ಸುಮ್ಮನಾಗುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳೇ ರಸ್ತೆಗಳಲ್ಲಿ ಸಂಚಾರ ಮಾಡುತ್ತಾರೆ. ಆಗ ಅವರ ಗಮನಕ್ಕೆ ಇವು ಬರುವುದಿಲ್ಲವೇ ಎಂದು ಸಾರ್ವಜನಿಕರು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.