ಸಾರಾಂಶ
ಮಲ್ಟಿಯುಟಿಲಿಟಿ ಮಾಲ್, ಕಾರ್ ಪಾರ್ಕಿಂಗ್ ಕಟ್ಟಡವನ್ನು ನಿರ್ಮಿಸಲು ಯೋಜಿಸಲಾಗಿದೆ. ಕರಾರು ಒಪ್ಪಂದ ಮಾಡಿಕೊಂಡು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಿ 18 ತಿಂಗಳಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ: ಜಿ. ಪರಮೇಶ್ವರ್ ಹೇಳಿದರು
ತುಮಕೂರು: ಮಲ್ಟಿಯುಟಿಲಿಟಿ ಮಾಲ್, ಕಾರ್ ಪಾರ್ಕಿಂಗ್ ಕಟ್ಟಡವನ್ನು ನಿರ್ಮಿಸಲು ಯೋಜಿಸಲಾಗಿದೆ. ಕರಾರು ಒಪ್ಪಂದ ಮಾಡಿಕೊಂಡು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಿ 18 ತಿಂಗಳಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ: ಜಿ. ಪರಮೇಶ್ವರ್ ಹೇಳಿದರು.
ನಗರದ ಜೆ.ಸಿ.ರಸ್ತೆ ಶ್ರೀ ಸಿದ್ಧಿವಿನಾಯಕ ಮಾರುಕಟ್ಟೆಯ 1 ಎಕರೆ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 60 ಕೋಟಿ ರು. ವೆಚ್ಚದಲ್ಲಿ 5 ಅಂತಸ್ತಿನ ಮಲ್ಟಿಯುಟಿಲಿಟಿ ಮಾಲ್, ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಿಸುವ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಈ ಕಾಮಗಾರಿ ಗುತ್ತಿಗೆಯನ್ನು ಆರ್.ಎಚ್. ಕನ್ಸಟ್ರಕ್ಷನ್ ಆ್ಯಂಡ್ ಡೆವೆಲಪರ್ಸ್‌ಗೆ ನೀಡಲಾಗಿದೆ. ನಗರದಲ್ಲಿ ಬಹು ಅಂತಸ್ತಿನ ಷಾಪಿಂಗ್ ಮಾಲ್ ಇರಲಿಲ್ಲ. ನಗರದ ಅಭಿವೃದ್ಧಿ ಪಟ್ಟಿಯಲ್ಲಿ ಮಲ್ಟಿಯುಟಿಲಿಟಿ ಮಾಲ್ ನಿರ್ಮಾಣ ಸೇರಲಿದೆ. ಮಾಲ್ ನಿರ್ಮಿಸುವ ಉದ್ದೇಶಿತ ಪ್ರದೇಶದಲ್ಲಿರುವ ಸಣ್ಣ ಗಣಪತಿ ದೇವಸ್ಥಾನವನ್ನು ಸ್ಥಳಾಂತರಿಸಿ ಅದೇ ಜಾಗದಲ್ಲಿ ಹೊಸ ದೇವಸ್ಥಾನವನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ನಮ್ಮ ಸರ್ಕಾರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಬದ್ಧವಾಗಿದೆ. ಅಭಿವೃದ್ಧಿ ಕೆಲಸ ನಿಲ್ಲಿಸುವುದಿಲ್ಲ. ಪ್ರಸ್ತುತ ಈ ಪ್ರದೇಶದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದವರಿಗೆ ಕೆಳ ಅಂತಸ್ತಿನಲ್ಲಿ ಅವಕಾಶ ಕಲ್ಪಿಸಲಾಗುವುದು. ಯುಟಿಲಿಟಿ ಮಾಲ್‌ನ ಮೇಲಂತಸ್ತುಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, ಹೋಟೆಲ್, 100 ಕಾರು ನಿಲುಗಡೆ, 2 ಥಿಯೇಟರ್, 110 ಪ್ರತ್ಯೇಕ ಸಸ್ಯಾಹಾರಿ ಮತ್ತು ಮಾಂಸಹಾರಿ ವೆಂಡಿಂಗ್ ಝೋನ್, 110 ಮಧ್ಯಮ ಮಳಿಗೆ, 2 ಬೃಹತ್ ಮಳಿಗೆ, 200 ಆಸನವುಳ್ಳ 11 ಮಳಿಗೆಗಳ ಫುಡ್ ಕೋರ್ಟ್, ರೆಸ್ಟೋರೆಂಟ್, ಸುಸಜ್ಜಿತ ಶೌಚಾಲಯ, ಮಕ್ಕಳಿಗಾಗಿ ಆಕರ್ಷಕ ಆಟಿಕೆ, ಮತ್ತಿತರ ಮೂಲಭೂತ ಸೌಕರ್ಯಗಳನ್ನೊಳಗೊಂಡಿದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪ್ರಭು, ಕೆ.ವಿ. ಅಶೋಕ್, ಬಿ.ವಿ. ಅಶ್ವಿಜ, ಶಿವಾನಂದ ಬಿ. ಕರಾಳೆ ಉಪಸ್ಥಿತರಿದ್ದರು.