ಮುಂದಿನ ಶೈಕ್ಷಣಿಕ ವರ್ಷದಲ್ಲಿ ೬೦೦ ಪಬ್ಲಿಕ್ ಶಾಲೆ ಆರಂಭ

| Published : Nov 29 2023, 01:15 AM IST

ಸಾರಾಂಶ

ಕನ್ನಡ ಶಾಲೆಗೆ ಪ್ರಾಧ್ಯಾನತೆ ಕೊಡುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ೫೦೦ರಿಂದ ೬೦೦ ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ ಮಾಡಲಾಗುವುದು. ಆದರೆ ಕಾಂಗ್ರೆಸ್ ಸರ್ಕಾರದ ೫ ಗ್ಯಾರಂಟಿಗಳಿಗೂ ಶಾಲೆಗಳ ಅಭಿವೃದ್ಧಿಗೂ ಯಾವ ಸಂಬಂಧವೂ ಇಲ್ಲ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ ಕನ್ನಡ ಶಾಲೆಗೆ ಪ್ರಾಧ್ಯಾನತೆ ಕೊಡುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ೫೦೦ರಿಂದ ೬೦೦ ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ ಮಾಡಲಾಗುವುದು. ಆದರೆ ಕಾಂಗ್ರೆಸ್ ಸರ್ಕಾರದ ೫ ಗ್ಯಾರಂಟಿಗಳಿಗೂ ಶಾಲೆಗಳ ಅಭಿವೃದ್ಧಿಗೂ ಯಾವ ಸಂಬಂಧವೂ ಇಲ್ಲ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆ ಆದ ಮೆಲೆ ರಾಜ್ಯ ಓಬಿಸಿ ಅಧ್ಯಕ್ಷರಾಗಿ ಹಾಸನ ನಗರದಲ್ಲಿ ಓಬಿಸಿ ಸಭೆ ನಡೆಸಬೇಕಿತ್ತು. ಕಾರಣಾಂತರದಿಂದ ಹಾಸನ ಸೇರಿದಂತೆ ನಾನು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಓಬಿಸಿ ಸಭೆ ಮಾಡಲಾಗಲಿಲ್ಲ. ಶಿಕ್ಷಣ ಇಲಾಖೆ ಎಂದರೇ ಬಹಳ ದೊಡ್ಡ ಇಲಾಖೆ ಸಮಸ್ಯೆಗಳು ಹೆಚ್ಚು ಇದೆ. ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ೫೩ ಸಾವಿರ ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ೧೩ ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಂಡಿದ್ದೇವೆ. ಇನ್ನೂ ೨೦ ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದಾಗಿ ಭರವಸೆ ನೀಡಿದರು. ರಾಜ್ಯದಲ್ಲಿ ಶಿಥಿಲಗೊಂಡಿರುವ ಶಾಲೆ ಕಟ್ಟಡ ದುರಸ್ತಿ ಮಾಡಿಸಿಕೊಡಲಾಗುವುದು. ಪ್ರಸ್ತುತ ಕರ್ನಾಟಕ ಪಬ್ಲಿಕ್ ಶಾಲೆಗಳು ಬಹಳ ಅವಶ್ಯಕತೆ ಇದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ೫೦೦-೬೦೦ ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆ ಮಾಡಲಾಗುವುದು. ಪ್ರತಿ ವಿಧಾನಸಭೆ ಸದಸ್ಯರಿಗೆ ಶಾಸಕರಿಗೆ ೫-೬ ಶಾಲೆ ಕೊಡಲಾಗುವುದು ಎಂದರು.

ರಾಗಿ ಮಾಲ್ಟ್ ವಿತರಣೆ: ಮೊದಲು ಒಂದು ಮೊಟ್ಟೆ ಕೊಡುತ್ತಿದ್ದರು. ಈಗ ಎರಡು ಮೊಟ್ಟೆ ಕೊಡುತ್ತಿದ್ದೇವೆ. ಮುಂದಿನ ಅಧಿವೇಶನದ ನಂತರ ರಾಗಿ ಮಾಲ್ಟ್ ವಿತರಣೆ ಮಾಡಲಾಗುವುದು. ನಾನು ಶಿಕ್ಷಣ ಸಚಿವನಾಗಿ ಶಿಕ್ಷಣ ಇಲಾಖೆ ಅರ್ಥ ಮಾಡಿಕೊಳ್ಳಲು ೬ ತಿಂಗಳಾಗಿದೆ. ಮಕ್ಕಳು ಪುನಃ ಸರ್ಕಾರಿ ಶಾಲೆಯಲ್ಲಿ ಇರುವಂತೆ ವಾತಾವರಣ ನಿರ್ಮಾಣ ಮಾಡಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಸೋರುತ್ತಿರುವ ಕಟ್ಟಡಗಳಿಗೆ ಶಾಶ್ವತ ಪರಿಹಾರ ಒದಗಿಸಲಾಗುವುದು. ೩ ವರ್ಷದೊಳಗೆ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಂದ ಭರ್ತಿಯಾಗುವಂತೆ ಮಾಡಲಾಗುವುದು. ನಮ್ಮ ಸರ್ಕಾರಿ ಶಾಲೆ ಅಭಿವೃದ್ಧಿ ಮಾಡುವುದು ನಮ್ಮ ಕೆಲಸ. ರಾಜ್ಯದಲ್ಲಿ ೧೬೦೦ ಶಾಲೆಗಳು ಯಾವುದೇ ಅನುಮತಿ ಪಡೆಯದೆ ನಡೆಯುತ್ತಿವೆ. ಮಕ್ಕಳ ಭವಿಷ್ಯದ ಕಾರಣ ಅವುಗಳನ್ನು ಶೀಘ್ರವಾಗಿ ಮುಚ್ಚಲಾಗುತ್ತಿಲ್ಲ ಎಂದು ತಿಳಿಸಿದರು. ೫ ಗ್ಯಾರಂಟಿಗಳ ಅಬ್ಬರದಲ್ಲಿ ಶಾಲೆಗಳ ಬಗ್ಗೆ ಗಮನ ಕಡಿಮೆ ಆಗುವುದಾ! ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಶಿಕ್ಷಣ ಮತ್ತು ಆರ್ಥಿಕ ಕೊರತೆ ವಿಚಾರ ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ನಾನು ಶಿಕ್ಷಣ ಸಚಿವನಾಗಿ ನನ್ನ ಇಲಾಖೆಯಲ್ಲಿ ಮಕ್ಕಳಿಗೆ ಎರಡು ಮೊಟ್ಟೆ, ಹೊಸ ಪುಸ್ತಕ ವಿತರಣೆ ಕಾರ್ಯಕ್ರಮ ಮಾಡಿದ್ದೇನೆ. ಸುಮಾರು ೨೦ ಕೋಟಿಗೂ ಹೆಚ್ಚು ಹಣ ಇದಕ್ಕೆ ಖರ್ಚಾಗಿರುವುದಾಗಿ ಹೇಳಿದರು. ನಾವು ಕೊಟ್ಟಿರುವ ಭಾಗ್ಯಗಳ ಹಣ ಮಾರುಕಟ್ಟೆಗೆ ಹೋಗಿ ವಾಪಸ್‌ ಸರ್ಕಾರಕ್ಕೆ ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯವರಿಗೆ ಮರ್ಯಾದೆ ಇಲ್ಲ: ಬಿಜೆಪಿಯವರಿಗೆ ಮಾನ, ಮರ್ಯಾದೆ ಇಲ್ಲದೆ ಬರಗಾಲ ವಿಕ್ಷಣೆ ಮಾಡಲು ಹೊರಟಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದ್ದರೆ ಸಂಸದರು ಸೇರಿ ಮೋದಿ, ಅಮಿತ್ ಶಾ ಮನೆ ಮುಂದೆ ಹೋಗಿ ಬರ ಪರಿಹಾರದ ಹಣ ಕಾವೇರಿ ನದಿ ನೀರಿನ ವಿಚಾರದಲ್ಲಿ ಚರ್ಚೆ ಮಾಡಲಿ. ಇನ್ನು ಬಿಜೆಪಿ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ೬ ತಿಂಗಳಾಗಿದೆ. ವಿರೋಧ ಪಕ್ಷದ ನಾಯಕನ ಸ್ಥಾನ ಆಯ್ಕೆ ಮಾಡಿದ ಮೇಲೆ ಆರ್. ಅಶೋಕ್ ಅವರ ಹಾರಾಟ ಚೀರಾಟ ಕೇಳಲಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಜಾತಿ ಗಣತಿ ವರದಿ ಅದಷ್ಟು ಶೀಘ್ರ ಬಿಡುಗಡೆಯಾಗಲೇಬೇಕು. ಮಾಹಿತಿ ಸೋರಿಕೆ ಬಗ್ಗೆ ನನಗೆ ಗೊತ್ತಿಲ್ಲ. ಸೋರಿಕೆ ಆಗಿದ್ದರೆ, ಕಳೆದು ಹೋಗಿದ್ದರೆ ಅದರ ಬಗ್ಗೆ ತನಿಖೆ ನಡೆಯಲಿ. ಡಿ.ಕೆ. ಶಿವಕುಮಾರ್ ಪ್ರಕರಣ ವಾಪಸ್‌ ತೆಗೆದುಕೊಳ್ಳಬಾರದು ಎಂದು ಕಾನೂನು ಇಲ್ಲ. ವಿರೋಧ ಪಕ್ಷದ ಟೀಕೆ ಟಿಪ್ಪಣಿಗೆ ಉತ್ತರ ಕೊಡುವುದಿಲ್ಲ. ಜನರು ತಿರ್ಮಾನ ಮಾಡಲು ನಮಗೆ ಮತ ನೀಡಿದ್ದಾರೆ ಎಂದು ತಿರುಗೇಟು ನೀಡಿದರು.

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಆಗಿರುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದು ಮಾಡಲು ಮೈತ್ರಿಯಾಗಿದ್ದರೊ ಅಥವಾ ಯಾವ ಕಾರಣಕ್ಕೆ ಗೊತ್ತಿಲ್ಲ. ಇದನ್ನು ನೋಡಿ ನಾನು ಶಿವಲಿಂಗೇಗೌಡ ಪಕ್ಷ ಬಿಟ್ಟು ಬಂದಿರುವುದಾಗಿ ತಿಳಿಸಿದರು. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯದಿಂದ ೪ ಲಕ್ಷ ಕೋಟಿ ಹಣ ತೆರಿಗೆ ನೀಡಲಾಗುತ್ತದೆ. ಅದರಲ್ಲಿ ಕೇಂದ್ರ ಸರ್ಕಾರ ನಮಗೆ ಕೇವಲ ೫೦ ಸಾವಿರ ಕೋಟಿ ಹಣ ಕೊಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಎಂ.ಪಿ. ಚುನಾವಣೆಗೆ ತಯಾರಾಗುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಪಕ್ಷದ ಮುಖಂಡ ಬನವಾಸೆ ರಂಗಸ್ವಾಮಿ, ಎಚ್.ಪಿ. ಮೋಹನ್, ಎಚ್.ಕೆ. ಜವರೇಗೌಡ, ಪಟೇಲ್ ಶಿವಪ್ಪ, ಶ್ರೇಯಸ್ ಪಟೇಲ್, ತಾರಾ ಚಂದನ್, ಅಶೋಕ್, ದಿನೇಶ್ ಭೈರೇಗೌಡ, ಆದಿಲ್, ಶಿವಕುಮಾರ್, ಲಕ್ಷ್ಮಣ್, ಇತರರು ಹಾಜರಿದ್ದರು.