ಸಾರಾಂಶ
ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ಚರಿತ್ರಾರ್ಹವಾದ ಜನವರಿ 22ರಂದೇ ಗದಗ ಜಿಲ್ಲೆಯಲ್ಲಿ 62 ಮಕ್ಕಳು ಜನಿಸಿವೆ.
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ಚರಿತ್ರಾರ್ಹವಾದ ಜನವರಿ 22ರಂದೇ ಗದಗ ಜಿಲ್ಲೆಯಲ್ಲಿ 62 ಮಕ್ಕಳು ಜನಿಸಿವೆ!
ಅವುಗಳಲ್ಲಿ 10 ಸಿಜೇರಿಯನ್, ಉಳಿದ್ದೆಲ್ಲವುಗಳು ಸಾಮಾನ್ಯ ಹೆರಿಗೆಗಳು.ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ದಿನದಂದೇ ಮಗುವನ್ನು ಪಡೆಯಲು ಹಲವರು ಸಿಜೇರಿಯನ್ ಮೂಲಕ ಮುಹೂರ್ತ ಫಿಕ್ಸ್ ಮಾಡಿದ್ದರು. ಇದೊಂದು ಸ್ಮರಣಾರ್ಹ, ಸದಾ ನೆನಪಿನಲ್ಲಿರುವ ದಿನ, ಅಂದು ಹುಟ್ಟಿದ ಮಕ್ಕಳು ದೇಶಕ್ಕೆ ಆಸ್ತಿಯಾಗುತ್ತಾರೆ ಎಂಬ ನಂಬಿಕೆ ಅವರದಾಗಿತ್ತು.
62 ಮಕ್ಕಳು ಜನನ: ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಜ. 22ರ, 24 ಗಂಟೆ ಅವಧಿಯಲ್ಲಿ ಒಟ್ಟು 62 ಮಕ್ಕಳ ಜನನವಾಗಿವೆ. ಅವುಗಳಲ್ಲಿ 28 ಗಂಡು ಹಾಗೂ 34 ಹೆಣ್ಣು ಮಗು ಇವೆ. ಈ ಮಕ್ಕಳ ಬಗ್ಗೆ ಪಾಲಕರಲ್ಲಿ ಅತೀವ ಸಂತಸ ಮತ್ತು ಇವರೆಲ್ಲಾ ದೇವರ ಕೊಡುಗೆ ಎನ್ನುವ ಧನ್ಯತಾ ಭಾವ ವ್ಯಕ್ತಪಡಿಸುತ್ತಿದ್ದಾರೆ. ಅಚ್ಚರಿಯೆಂದರೆ ಹಿಂದೂಯೇತರ ಧರ್ಮಿಯ ಮಕ್ಕಳೂ ಇವೆ.10 ಜನರಿಗೆ ಸಿಜೇರಿಯನ್ ಮಾಡಲಾಗಿದೆ. ಅದು ಕೂಡಾ ಹೆರಿಗೆಯಿಂದ ತಾಯಂದಿರ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮಾತ್ರ ನಡೆಸಲಾಗಿದೆಯೇ ಹೊರತು, ಉದ್ದೇಶಪೂರ್ವಕವಾಗಿ ಮಾಡಿದ್ದು ಅಲ್ಲ ಎನ್ನುವುದು ವೈದ್ಯರ ಪ್ರತಿಕ್ರಿಯೆ.ಜ. 22ರಂದು ಜಿಲ್ಲೆಯ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 62 ಮಕ್ಕಳು ಜನಿಸಿವೆ. ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಡಿಎಚ್‌ಒ ಡಾ. ಎಸ್. ನೀಲಗುಂದ ಹೇಳಿದ್ದಾರೆ.