ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಚಿಕ್ಕೋಡಿ ಉಪವಿಭಾಗದ ಕೃಷ್ಣಾ ತೀರದಲ್ಲಿ ಮಳೆ ಇಲ್ಲವಾದರೂ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದ ರಾಜ್ಯದ ಪಂಚನದಿಗಳಿಗೆ 64,728 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ನದಿಗಳ ನೀರಿನ ಮಟ್ಟದಲ್ಲಿ ಒಂದು ಅಡಿಯಷ್ಟು ಎರಿಕೆಯಾಗಿದೆ.ದೂಧಗಂಗಾ ನದಿಗೆ ಸುಳಕುಡ ಬ್ಯಾರೇಜ್ ಮುಖಾಂತರ 13,020 ಕ್ಯುಸೆಕ್ ಮತ್ತು ಕೃಷ್ಣಾ ನದಿಗೆ ರಾಜಾಪುರ ಬ್ಯಾರೇಜ್ ಮುಖಾಂತರ 51,708 ಕ್ಯುಸೆಕ್ ಹೀಗೆ ಒಟ್ಟು 64,728 ಕ್ಯುಸೆಕ್ ನೀರು ರಾಜ್ಯದ ನದಿಗಳಿಗೆ ಹರಿದು ಬರುತ್ತಿದ್ದು, ಮಂಗಳವಾರ 2,208 ಕ್ಯುಸೆಕ್ ಅಧಿಕ ನೀರು ಹರಿದು ಬರುತ್ತಿದೆ.ವೇದಗಂಗಾ ನದಿಯ ಭೋಜ-ಶಿವಾಪುರವಾಡಿ ಮತ್ತು ಬಾರವಾಡ-ಕುನ್ನುರ, ದೂಧಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತವಾಡ, ಕೃಷ್ಣಾ ನದಿಯ ಮಾಂಜರಿ-ಸವದತ್ತಿ ಬ್ಯಾರೇಜ್‌ಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ. ಸಿದ್ನಾಳ-ಹುನ್ನರಗಿ ಮತ್ತು ಜತ್ರಾಟ-ಭಿವಸಿ ಬ್ಯಾರೇಜ್‌ಗಳು ಮುಳುಗುವ ಹಂತ ತಲುಪಿವೆ. ಸದಲಗಾ-ಬೋರಗಾಂವ ಮತ್ತು ಯಕ್ಸಂಬಾ-ದಾನವಾಡ ಸೇತುವೆಯ ಮೂಲಕ ಸಂಚಾರ ಸುಮವಾಗಿಸಾಗಿದೆ.
ಕಳೆದ 24 ಗಂಟೆಯಲ್ಲಿ ಕೊಯ್ನಾ-16, ವಾರಣಾ-02, ಕಾಳಮ್ಮಾವಾಡಿ-02, ಮಹಾಬಳೇಶ್ವರ-27, ನವಜಾ-21, ರಾಧಾನಗರಿ-02, ಕೊಲ್ಲಾಪುರ-02 ಮತ್ತು ಸಾಂಗಲಿ-10 ಮಿಮೀ ಮಳೆಯಾಗಿರುವ ಕುರಿತು ವರದಿಯಾಗಿದೆ.ಕೃಷ್ಣಾ ತೀರದ ಗ್ರಾಮಗಳಿಗೆ ತಹಸೀಲ್ದಾರ್ ಭೇಟಿ: ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ 2-3 ದಿನಗಳಿಂದ ಕೃಷ್ಣಾ ನದಿಯ ನೀರಿನ ಮಟ್ಟ ಸತತ ಏರಿಕೆ ಆಗುತ್ತಿರುವುದರಿಂದ ಮಂಗಳವಾರ ಚಿಕ್ಕೋಡಿ ತಾಲೂಕಿನ ಕೃಷ್ಣಾ ತೀರದ ಮಾಂಜರಿ, ಇಂಗಳಿ, ಯಡೂರ, ಚಂದೂರ ಮುಂತಾದ ಗ್ರಾಮಗಳಿಗೆ ತಹಸೀಲ್ದಾರ್ ಚಿದಂಬರ ಕುಲಕರ್ಣಿಯವರು ಭೇಟಿ ನೀಡಿ ಪರಿಶೀಲಿಸಿದರು.