650 ಕೋಟಿ ರು. ಹಗರಣದಲ್ಲಿ ತಿಂದು ತೇಗಿದವರೆಲ್ಲ ಪಾರು!

| Published : Jan 25 2024, 02:03 AM IST

650 ಕೋಟಿ ರು. ಹಗರಣದಲ್ಲಿ ತಿಂದು ತೇಗಿದವರೆಲ್ಲ ಪಾರು!
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎಡದಂಡೆ ನಾಲೆ ಆಧುನಿಕರಣಕ್ಕಾಗಿ ಬಿಡುಗಡೆಯಾದ ಹಣದಲ್ಲಿ 650 ಕೋಟಿ ಅವ್ಯವಹಾರ ನಡೆದಿದೆ ಎಂಬ ಕಾರಣಕ್ಕೆ 28 ಎಂಜಿನಿಯರ್‌ಗಳನ್ನು ಅಮಾನತು ಮಾಡಲಾಗಿದೆ. ಆದರೆ ನಿಜವಾದ ಲೂಟಿಕೋರರಿಗೆ ಶಿಕ್ಷೆಯಾಗುವುದೇ ಎಂಬ ಪ್ರಶ್ನೆ ಎದ್ದಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ತುಂಗಭದ್ರಾ ಜಲಾಶಯ ವ್ಯಾಪ್ತಿ ಎನ್ನುವುದು ಲೂಟಿಕೋರರ ಪಾಲಿಗೆ ಹುಲ್ಲುಗಾವಲು ಇದ್ದಂತೆ. ಕೋಟಿ ಕೋಟಿ ಲೂಟಿ ಎನ್ನುವುದು ಇಲ್ಲಿ ಲೆಕ್ಕವೇ ಇಲ್ಲ. ಈಗ ₹650 ಕೋಟಿ ಅಕ್ರಮ 10-12 ವರ್ಷಗಳ ಬಳಿಕ ಬೆಳಕಿಗೆ ಬಂದಿದೆ.ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಎಡದಂಡೆ ನಾಲೆ ಆಧುನೀಕರಣಕ್ಕಾಗಿ ಮಾಡಲಾಗಿರುವ ಹಣ ಬೋಗಸ್ ಬಿಲ್ ಮಾಡಿ ಎತ್ತಿ ಹಾಕಲಾಗಿದೆ ಎಂದು ಬರೋಬ್ಬರಿ 28 ಎಂಜಿನಿಯರ್‌ಗಳನ್ನು ಅಮಾನತು ಮಾಡಲಾಗಿದೆ. ಆದರೆ, ಇದರಲ್ಲಿ ತಿಂದು ತೇಗಿದವರೆಲ್ಲ ಪಾರಾಗಿದ್ದು, ಸಮಗ್ರ ತನಿಖೆ ನಡೆಸಿದರೆ ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳನ್ನು ಈ ಅಕ್ರಮ ಸುತ್ತಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.2009-10, 2010-11ನೇ ಅವಧಿಯಲ್ಲಿನ ಸರ್ಕಾರದಲ್ಲಿ ತುಂಗಭದ್ರಾ ಜಲಾಶಯವನ್ನು ಆಧುನೀಕರಣ ಮಾಡಬೇಕು ಎಂದು ₹1250 ಕೋಟಿ ಯೋಜನೆಗೆ ಅಸ್ತು ಎನ್ನಲಾಗಿತ್ತು. ಇದಾದ ಮೇಲೆ ಕುಂಟುತ್ತಾ ತೇವಳುತ್ತಾ ಸಾಗಿತು. ಆದರೆ, ಇದರಲ್ಲಿ 2009-10 ಮತ್ತು 2010-11ನೇ ಸಾಲಿನ ಅವಧಿಯಲ್ಲಿ ಹೆಚ್ಚುವರಿಯಾಗಿ ₹650 ಕೋಟಿ ಎತ್ತಿ ಹಾಕಲಾಗಿದೆ. ಆದರೆ, ಆ ಸರ್ಕಾರದ ನಂತರವೂ ನಿರಂತರವಾಗಿ ಕಾಮಗಾರಿ ನಡೆದಿದೆ.ಇದಕ್ಕೆ ಸಾಥ್ ನೀಡಿದ ಎಂಜಿನಿಯರ್‌ಗಳು ನಿಯಮ ಮೀರಿ, ಹೆಚ್ಚುವರಿ ಬಿಲ್ ಮಾಡಿದ್ದಾರೆ ಎನ್ನುವುದು ತನಿಖೆಯಲ್ಲಿ ಕಂಡುಬರುವ ಅಂಶ. ಆದರೆ, ಹೀಗೆ ಹೆಚ್ಚುವರಿ ಬಿಲ್ ಪಾವತಿಸಿದವರು ಯಾರು? ಗುತ್ತಿಗೆದಾರರು ಯಾರು? ಹೆಚ್ಚುವರಿ ಮೊತ್ತದ ಬಿಲ್ ಬಿಡುಗಡೆ, ಹೆಚ್ಚಿನ ಮೊತ್ತ ನಿಗದಿ ಮಾಡುವಲ್ಲಿ ಇಲಾಖೆಯಲ್ಲಿ ಮೇಲಧಿಕಾರಿಗಳು, ಸಚಿವರು, ಗುತ್ತಿಗೆದಾರರು, ಪಾಲುದಾರರು ಇಲ್ಲವೇ? ಎನ್ನುವ ಪ್ರಶ್ನೆಗೆ ಈಗ ಸಮಗ್ರ ತನಿಖೆಯಾಗಬೇಕು ಎನ್ನುತ್ತಾರೆ ಅಮಾನತಾಗಿರುವ, ಹೆಸರು ಹೇಳಲು ಬಯಸದ ಅಧಿಕಾರಿ.ಲೂಟಿಯೊಳಗೊಂದು ಲೂಟಿ:ಈ ಅಕ್ರಮದ ಕುರಿತು ನಾಲ್ಕಾರು ವರ್ಷಗಳ ಹಿಂದೆಯೇ ವಿಚಕ್ಷಣ ದಳ ವರದಿ ಸಿದ್ಧವಾಗಿತ್ತು. ಆಗ ಈ ಕುರಿತು ಏಕೆ ಕ್ರಮ ವಹಿಸಲಿಲ್ಲ. ಇದನ್ನು ನಿಧಾನಗತಿ ಮಾಡಿದ್ದು ಮತ್ತು ತನಿಖಾ ಫೈಲ್ ಧೂಳು ಹಿಡಿಯುವಂತೆ ತಡೆದಿದ್ದು ಯಾರು? ಎನ್ನುವುದು ಸದ್ಯದ ಕುತೂಹಲ. ನಿಧಾನಗತಿ ಮಾಡುವುದಕ್ಕೂ ಏನೇನು ಕರಾಮತ್ತು ನಡೆಯಿತು ಎನ್ನುವುದು ಈಗ ತುಂಗಭದ್ರಾ ನೀರಾವರಿ ಇಲಾಖೆಯಲ್ಲಿ ಚರ್ಚೆಯಾಗುತ್ತಿರುವ ಮಹತ್ವದ ವಿಷಯ.ನಡೆದಿದ್ದು ಹೇಗೆ?:ಗುತ್ತಿಗೆ ಕಾಮಗಾರಿಯೇ ₹74.04 ಕೋಟಿ. ಅಚ್ಚರಿ ಎಂದರೆ ಇದಕ್ಕೆ ಎದುರಾಗಿ ಹೆಚ್ಚುವರಿಯಾಗಿ ಮಾಡಿರುವ ಕ್ಲೇಮ್ ಮೊತ್ತ ₹253.39 ಕೋಟಿ. ಹೀಗೆ ಕ್ಲೇಮು ಮಾಡಿಕೊಳ್ಳಲು ಅನುಸರಿಸಿದ ತಂತ್ರ ಮಾತ್ರ ಅಚ್ಚರಿ ಮೂಡಿಸುತ್ತದೆ. ಇದಕ್ಕೆ ಶಿಫಾರಸು ಪತ್ರ, ಹೆಚ್ಚುವರಿ ಬಿಲ್ ನಕಲಿಯಾಗಿ ಸೃಷ್ಟಿ ಮಾಡಲಾಗಿದೆ. ಇದರ ಕಡತಗಳೂ ನಾಪತ್ತೆಯಾಗಿವೆ. ಆದರೆ, ಕಡತ ವಿಲೇವಾರಿಯಾಗಿರುವ ಕುರಿತು ಇನ್ವಾರ್ಡ್ ಮತ್ತು ಔಟ್ ವಾರ್ಡ್ ನಲ್ಲಿ ದಾಖಲೆ ಇದೆ ಎನ್ನುವುದು ತನಿಖೆಯಲ್ಲಿ ಸ್ಪಷ್ಟವಾಗಿ ಗೊತ್ತಾಗಿದೆ.ಸಮಗ್ರ ತನಿಖೆ ಅಗತ್ಯ:ಜಲಾಶಯ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಕುರಿತು ಸಮಗ್ರ ತನಿಖೆಯಾದರೆ ಇನ್ನು ಇಂಥ ಕೋಟಿ ಕೋಟಿ ಅಕ್ರಮಗಳು ಬಯಲಿಗೆ ಬರುತ್ತವೆ. ನಾಲ್ಕಾರು ಕೋಟಿ ರುಪಾಯಿ ವೆಚ್ಚ ಮಾಡಿ ನಿರ್ಮಾಣ ಮಾಡಿರುವ ಎಡದಂಡೆ ನಾಲೆಯ ದುರಸ್ತಿಗೆ ಸುಮಾರು ₹1800 ಕೋಟಿ ಹಣ ಇದುವರೆಗೂ ಖರ್ಚಾಗಿದೆ ಎನ್ನುವುದೇ ಇದೆಲ್ಲವನ್ನು ಸಾರಿ ಸಾರಿ ಹೇಳುತ್ತದೆ.