ಕನ್ನಡಪ್ರಭ ವಾರ್ತೆ ಬೆಂಗಳೂರು
ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಬಿಡಬ್ಲ್ಯೂಎಸ್ಎಸ್ ಬಿ, ಬೆಸ್ಕಾಂ, ಬಿಎಂಆರ್ ಸಿಎಲ್ ಹಾಗೂ ಸಂಚಾರ ಪೊಲೀಸರೂ ಸೇರಿ ಎಲ್ಲಾ ಇಲಾಖೆಗಳನ್ನು ಒಂದೇ ಸೂರಿನಡಿ ತಂದು ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಪರಿಹಾರ ಮಾಡಿದ್ದರಿಂದ ಎಲ್ಲಾ ವಾರಗಳಿಗಿಂತ ಈ ವಾರದ (ಶುಕ್ರವಾರ) ಫೋನ್ ಇನ್ ಕಾರ್ಯಕ್ರಮ ವಿಭಿನ್ನವಾಗಿತ್ತು.ರಸ್ತೆ ನಿರ್ವಹಣೆಗೆ ಸಂಬಂಧಿಸಿದ ಸುಮಾರು 40 ಕರೆ ಮಾಡಿದ ಸಾರ್ವಜನಿಕರು ಕೂಡಲೆ ಸರಿಪಡಿಸುವಂತೆ ಆಯುಕ್ತರಲ್ಲಿ ಮನವಿ ಮಾಡಿದರು. ಆಯುಕ್ತ ಸುನಿಲ್ ಕುಮಾರ್ ಪಕ್ಕದಲ್ಲಿಯೇ ಇದ್ದ ಎಂಜಿನಿಯರ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿ ನಂತರ ವರದಿ ಮಾಡುವುದಲ್ಲದೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು (ಗೂಗಲ್ ಲೊಕೇಷನ್ ಸಹಿತ) ಎಂದು ನಿರ್ದೇಶನ ನೀಡಿದರು.
ಫೋನ್-ಇನ್ ಕಾರ್ಯಕ್ರಮದಲ್ಲಿ 47 ಕರೆಗಳು ಸ್ವೀಕರಿಸಿದ್ದು, ಸಾರ್ವಜನಿಕರು ಆಯುಕ್ತರಿಗೆ ನೀಡಿದ ಅರ್ಜಿ ಸೇರಿ ಒಟ್ಟು 67 ಅಹವಾಲುಗಳು ದಾಖಲಾಗಿವೆ. ರಸ್ತೆ ನಿರ್ವಹಣೆ (ಎಂಜಿನಿಯರಿಂಗ್) 40, ಘನ ತ್ಯಾಜ್ಯ ನಿರ್ವಹಣೆ 7, ಅರಣ್ಯ ಇಲಾಖೆ 6, ಇ-ಖಾತಾ, ಖಾತಾ ಸೇವೆಗಳು 4, ವಿದ್ಯುತ್ ಇಲಾಖೆ 2, ಆರೋಗ್ಯ ಇಲಾಖೆ 2, ಉದ್ಯಾನವನ ಮತ್ತು ಆಟದ ಮೈದಾನಗಳು 2, ಇತರೆ 2, ಆಸ್ತಿ ತೆರಿಗೆ ಸೇವೆಗಳು 1, ಪಶುವೈದ್ಯಕೀಯ ಇಲಾಖೆ 1 ದೂರುಗಳು ದಾಖಲಾದವು.ರಸ್ತೆ ನಿರ್ವಹಣೆ ಹಾಗೂ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಅಹವಾಲುಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ, ಪಕ್ಕದಲ್ಲಿಯೇ ಕುಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತರು ಸೂಚಿಸಿದರು.
ಉತ್ತರ ನಗರ ಪಾಲಿಕೆಯಲ್ಲಿ 2025ರ ಸೆ. 26ರಿಂದ ಫೋನ್-ಇನ್ ಕಾರ್ಯಕ್ರಮವನ್ನು ನಿರಂತರ ಆಯೋಜಿಸಲಾಗುತ್ತಿದ್ದು, ಇದುವರೆಗೆ, ಒಟ್ಟು 1,804 ಕರೆಗಳನ್ನು ಸ್ವೀಕರಿಸಲಾಗಿದೆ. ದೂರುಗಳು ಹಾಗೂ ಕರೆಗಳು ಸೇರಿ ಒಟ್ಟು 2,320 ಅಹವಾಲುಗಳು ದಾಖಲಾಗಿದ್ದವು. ಇವುಗಳಲ್ಲಿ 1,898 ಅಹವಾಲುಗಳನ್ನು ಇತ್ಯರ್ಥಪಡಿಸಲಾಗಿದೆ. 6 ಅಹವಾಲುಗಳು ಪ್ರಗತಿಯಲ್ಲಿವೆ. ದೀರ್ಘಾವಧಿ ಪರಿಹಾರ ಸಂಬಂಧ 5 ಅಹವಾಲುಗಳಿವೆ. ಪಾಲಿಕೆಯ ವ್ಯಾಪ್ತಿಗೆ ಸಂಬಂಧಿಸದ 146 ಅಹವಾಲುಗಳಿದ್ದು, 5 ಅಹವಾಲುಗಳನ್ನು ಮರುತೆರೆಯಲಾಗಿದೆ. ಬಾಕಿ 260 ಅಹವಾಲುಗಳಿವೆ ಎಂದು ಆಯುಕ್ತರು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಆಯುಕ್ತರು (ಕಂದಾಯ-ಪ್ರಭಾರ)ಪಲ್ಲವಿ, ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಉಪ ಆಯುಕ್ತ ಸೋಮಶೇಖರ್, ಮುಖ್ಯ ಇಂಜಿನಿಯರ್ ರಾಘವೇಂದ್ರ ಪ್ರಸಾದ್, ಯಮುನಾ ಸೇರಿ ನಗರ ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳಿದ್ದರು.