ಯಲ್ಲಾಪುರಕ್ಕೆ ಶಾಶ್ವತ ಕುಡಿವ ನೀರಿಗಾಗಿ ₹ 69 ಕೋಟಿ

| Published : Feb 01 2024, 02:00 AM IST

ಸಾರಾಂಶ

ಕೇವಲ ಕೊಳವೆ ಬಾವಿಗಳ ಮೂಲದಿಂದಲೇ ಕುಡಿಯುವ ನೀರಿನ ವ್ಯವಸ್ಥೆಯನ್ನು ಯಲ್ಲಾಪುರ ಪಟ್ಟಣಕ್ಕೆ ಪ್ರಸ್ತುತ ಕಲ್ಪಿಸಲಾಗಿದೆ. ಶಾಶ್ವತ ಕುಡಿಯುವ ನೀರಿನ ನೂತನ ಯೋಜನೆಯಾದ ಬೊಮ್ಮನಳ್ಳಿ ಪಿಕಪ್ ಆಣೆಕಟ್ಟಿನಿಂದ ನೀರು ತರುವ ಹಿನ್ನೆಲೆಯಲ್ಲಿ ಅಂದಾಜು ೯೨.೨೫ ಕೋಟಿ ವೆಚ್ಚದ ಯೋಜನೆಗೆ ಪಟ್ಟಣ ಪಂಚಾಯಿತಿ ನಿರ್ಣಯಿಸಿತು.

ಯಲ್ಲಾಪುರ:

ಕೇವಲ ಕೊಳವೆ ಬಾವಿಗಳ ಮೂಲದಿಂದಲೇ ಕುಡಿಯುವ ನೀರಿನ ವ್ಯವಸ್ಥೆಯನ್ನು ಯಲ್ಲಾಪುರ ಪಟ್ಟಣಕ್ಕೆ ಪ್ರಸ್ತುತ ಕಲ್ಪಿಸಲಾಗಿದೆ. ಶಾಶ್ವತ ಕುಡಿಯುವ ನೀರಿನ ನೂತನ ಯೋಜನೆಯಾದ ಬೊಮ್ಮನಳ್ಳಿ ಪಿಕಪ್ ಆಣೆಕಟ್ಟಿನಿಂದ ನೀರು ತರುವ ಹಿನ್ನೆಲೆಯಲ್ಲಿ ಅಂದಾಜು ₹ ೯೨.೨೫ ಕೋಟಿ ವೆಚ್ಚದ ಯೋಜನೆಗೆ ಪಟ್ಟಣ ಪಂಚಾಯಿತಿ ನಿರ್ಣಯಿಸಿತು.

ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಆಡಳಿತಾಧಿಕಾರಿಯೂ ಆಗಿರುವ, ತಹಸೀಲ್ದಾರ್‌ ಎಂ. ಗುರುರಾಜ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

ಪಟ್ಟಣದ ಎಲ್ಲ ಪ್ರದೇಶಕ್ಕೆ ನೀರು ನೀಡುವ ಉದ್ದೇಶದಿಂದ ನೂತನ ಓವರ್‌ಹೆಡ್ ಟ್ಯಾಂಕ್‌ ನಿರ್ಮಿಸಲು ಸಭೆ ನಿರ್ಣಯಿಸಿತು. ಸುದೀರ್ಘ ಮತ್ತು ಕೂಲಂಕುಶ ಚರ್ಚೆಯ ನಂತರ ಈ ನಿರ್ಣಯ ಕೈಗೊಂಡ ಸಂದರ್ಭದಲ್ಲಿ ೫ ವರ್ಷಗಳ ಅವಧಿಯ ನಿರ್ವಹಣಾ ವೆಚ್ಚವನ್ನು ಪಪಂ ಭರಿಸಲು ಸಭೆ ನಿರ್ಧರಿಸಿತಲ್ಲದೇ, ಪಾಲನೆ ಮತ್ತು ನಿರ್ವಹಣೆ ಮಾಡಲು ಒಪ್ಪಿಗೆ ನೀಡಿತು.

ನಿರ್ಣಯದಂತೆ ಕಾಮಗಾರಿಗೆ ತಗುಲಬಹುದಾದ ಹೆಚ್ಚುವರಿ ವೆಚ್ಚ ಭರಿಸಲು ಒಪ್ಪಬಹುದಾದರೂ, ಭವಿಷ್ಯದಲ್ಲಿ ಕಷ್ಟವೆನಿಸುವ ಸಂದರ್ಭವಿರುವುದರಿಂದ ಯೋಜನೆಯ ಕುರಿತಾಗಿ ಪುನರ್ ಪರಿಶೀಲನೆ ಮಾಡುವ ಅಗತ್ಯವಿದೆ ಎಂದ ಸದಸ್ಯ ರಾಧಾಕೃಷ್ಣ ನಾಯ್ಕ, ಕೋಟ್ಯಂತರ ರುಪಾಯಿ ವೆಚ್ಚದ ಕಾಮಗಾರಿ ಯೋಜನೆಯಿಂದ ಹೆಚ್ಚುವರಿ ಹೊರೆಯಾಗದಂತೆ ನೋಡಿಕೊಳ್ಳಬೇಕಾದುದು ಉತ್ತಮ ಎಂದರು.

ಪಟ್ಟಣದಲ್ಲಿ ವಿಧಿಸಲಾಗಿರುವ ಪರಿಷ್ಕೃತ ಆಸ್ತಿ ತೆರಿಗೆ ಕುರಿತು ನಡೆದ ಚರ್ಚೆಯಲ್ಲಿ ರಾಧಾಕೃಷ್ಣ ನಾಯ್ಕ ಮಾತನಾಡಿ, ಖಾಲಿ ನಿವೇಶನಗಳಿಗೂ ಮೂರುಪಟ್ಟು ತೆರಿಗೆ ಹೆಚ್ಚಿಸಲಾಗಿದೆ ಎಂದರು. ಇದಕ್ಕೆ ಮುಖ್ಯಾಧಿಕಾರಿ ಸುನೀಲ್ ಗಾವಡೆ ಉತ್ತರಿಸಿ, ಸರ್ಕಾರದ ಸುತ್ತೋಲೆ ಆಧರಿಸಿಯೇ ತೆರಿಗೆ ವಿಧಿಸಲಾಗಿದೆಯೇ ಹೊರತು ಬೇರಿಲ್ಲ ಎಂದರು. ತಹಸೀಲ್ದಾರ್‌ ಈ ಚರ್ಚೆಗೆ ಸ್ಪಷ್ಟನೆ ನೀಡಿ, ಬಡವರಿಗೆ ಹೊರೆಯಾಗದಂತೆ ತೆರಿಗೆ ನಿಗದಿಪಡಿಸಲಾಗುವುದು ಎಂದು ಭರವಸೆ ನೀಡಿದರು.

೨೦೨೩-೨೪ನೇ ಸಾಲಿನ ಶೇ. ೨೪.೧೦, ಶೇ. ೭.೨೫ ಮತ್ತು ಶೇ. ೫ ಯೋಜನೆಯ ಸೌಲಭ್ಯಕ್ಕಾಗಿ ೧೪ ಫಲಾನುಭವಿಗಳು ನೀಡಿದ ಅರ್ಜಿ ಪರಿಶೀಲಿಸಿ, ಕ್ರಮಕೈಗೊಳ್ಳಲು ಸಭೆ ನಿರ್ಣಯಿಸಿತು. ಸರ್ಕಾರದ ಯೋಜನೆಯಡಿ ದೊರೆತ ಈ ಸೌಲಭ್ಯವನ್ನು ಒಬ್ಬರು ಎರಡು ಬಾರಿ ಪಡೆದಿದ್ದರೆ ಬಡವರಿಗೆ ಯೋಜನೆಯ ಫಲ ಸಿಗದಂತಾಗಿದೆ. ಈ ಕುರಿತು ಕ್ರಮ ಅವಶ್ಯಕ ಎಂದು ಸದಸ್ಯೆ ಪುಷ್ಪಾ ನಾಯ್ಕ ಹೇಳಿದರು.

ಪಟ್ಟಣದಲ್ಲಿರುವ ೧೦ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಕಷ್ಟಸಾಧ್ಯವಾದ ಮತ್ತು ಅಲ್ಲಿನ ಪರಿಕರಗಳು ಕಾಣೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರದ ನೇಹಾ ಫೌಂಡೇಶನ್ ಅವರಿಗೆ ಲೀಸ್ ಆಧಾರಿತ ಗುತ್ತಿಗೆ ನೀಡಲು ಸಭೆ ಚರ್ಚಿಸಿ ಒಪ್ಪಿಗೆ ನೀಡಿತು. ಬದ್ಧತೆ ಮತ್ತು ಕರಾರಿನಂತೆ ಅವರಿಗೆ ಗುತ್ತಿಗೆ ನೀಡಲಾಗಿದ್ದು, ಮೂತ್ರಾಲಯವನ್ನು ಉಚಿತವಾಗಿಯೂ, ಶೌಚಾಲಯಕ್ಕೆ ₹ ೫, ಸ್ನಾನಕ್ಕೆ ₹ ೨೦ ಶುಲ್ಕ ವಿಧಿಸಲು ಸಭೆ ಸಮ್ಮತಿ ಸೂಚಿಸಿತು.

ಸದಸ್ಯ ಸತೀಶ ನಾಯ್ಕ ಮಾತನಾಡಿ, ಕಳೆದ ಸಾಮಾನ್ಯ ಸಭೆಯಲ್ಲಿ ರೂಪಿಸಲಾಗಿದ್ದ ಅನೇಕ ಕ್ರಿಯಾಯೋಜನೆಗಳ ಸ್ಥಿತಿಗತಿ ಕುರಿತಾದ ಪ್ರಶ್ನೆಗೆ ಸಮರ್ಪಕ ಉತ್ತರವೇ ಬಾರದಂತಾಯಿತು. ಆಸ್ತಿ ತೆರಿಗೆ ವಿನಾಯಿತಿ ಪಡೆದ ಕಟ್ಟಡಗಳಿಗೆ ಸೇವಾಶುಲ್ಕ ವಿಧಿಸುವ ಕುರಿತಾದ ಚರ್ಚೆ ಪೂರ್ಣಗೊಳ್ಳಲಿಲ್ಲ. .