ಮಾನವ ಮತ್ತು ಯಂತ್ರ ಸಂವಹನದ ಗಡಿಗಳನ್ನು ವಿಸ್ತರಿಸಿ, ಸ್ವಾಯತ್ತ ವ್ಯವಸ್ಥೆಗಳು ಮತ್ತು ಡಿಜಿಟಲ್ ಅನುಭವಗಳಿಗೆ ಹೊಸ ದಿಕ್ಕು ನೀಡುವಲ್ಲಿ, 6ಜಿ ತಂತ್ರಜ್ಞಾನವು ಡಿಜಿಟಲ್ ನಾಗರಿಕತೆಯ ಭವಿಷ್ಯಕ್ಕೆ ಹೊಸ ಆಯಾಮ ನೀಡಲಿದೆ ಎಂದು ಬೆಂಗಳೂರಿನ ತೇಜಸ್ ನೆಟ್‌ವರ್ಕ್ಸ್ ಕಂಪನಿ ಉಪಾಧ್ಯಕ್ಷರಾದ ಅನಿಂದ್ಯ ಸಾಹಾ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಾನವ ಮತ್ತು ಯಂತ್ರ ಸಂವಹನದ ಗಡಿಗಳನ್ನು ವಿಸ್ತರಿಸಿ, ಸ್ವಾಯತ್ತ ವ್ಯವಸ್ಥೆಗಳು ಮತ್ತು ಡಿಜಿಟಲ್ ಅನುಭವಗಳಿಗೆ ಹೊಸ ದಿಕ್ಕು ನೀಡುವಲ್ಲಿ, 6ಜಿ ತಂತ್ರಜ್ಞಾನವು ಡಿಜಿಟಲ್ ನಾಗರಿಕತೆಯ ಭವಿಷ್ಯಕ್ಕೆ ಹೊಸ ಆಯಾಮ ನೀಡಲಿದೆ ಎಂದು ಬೆಂಗಳೂರಿನ ತೇಜಸ್ ನೆಟ್‌ವರ್ಕ್ಸ್ ಕಂಪನಿ ಉಪಾಧ್ಯಕ್ಷರಾದ ಅನಿಂದ್ಯ ಸಾಹಾ ಅಭಿಪ್ರಾಯಪಟ್ಟರು.ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಐಸಿಟಿಇ, ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಹಾಗೂ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗಗಳ ಸಹಯೋಗದಲ್ಲಿ ಸೋಮವಾರ ಐಡಿಯಾ ಲ್ಯಾಬ್‌ನಲ್ಲಿ ನಡೆದ ‘ಅಡ್ವಾನ್ಸಸ್ ಇನ್ 6ಜಿ ಮೊಬೈಲ್ ನೆಟ್‌ವರ್ಕ್ಸ್’ ವಿಷಯ ಕುರಿತ 6 ದಿನಗಳ ಅಧ್ಯಾಪಕರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 5ಜಿಯಿಂದ 6ಜಿಯತ್ತ ಸಾಗುತ್ತಿರುವ ಮೊಬೈಲ್ ಸಂವಹನ ತಂತ್ರಜ್ಞಾನವು ಕೇವಲ ವೇಗದ ಪರಿವರ್ತನೆಯಲ್ಲ, ಮಾನವ ಬದುಕಿನ ಡಿಜಿಟಲ್ ಆಯಾಮವನ್ನೇ ಮರುರೂಪಿಸುವ ಮಹತ್ವದ ತಾಂತ್ರಿಕ ಕ್ರಾಂತಿಯಾಗಿದೆ. ಮೊಬೈಲ್ ನೆಟ್‌ವರ್ಕ್‌ನ ಪ್ರತಿಯೊಂದು ಪೀಳಿಗೆಯೂ ಮಾನವನ ಸಂವಹನ, ಕಾರ್ಯವಿಧಾನ ಮತ್ತು ಸಾಮಾಜಿಕ ಬದುಕಿಗೆ ಹೊಸ ಸಾಧ್ಯತೆಗಳನ್ನು ತೆರೆದಿದೆ. 4ಜಿ ತಂತ್ರಜ್ಞಾನವು ವೀಡಿಯೊ ಸ್ಟ್ರೀಮಿಂಗ್, ಸಾಮಾಜಿಕ ಮಾಧ್ಯಮ ಹಾಗೂ ಡಿಜಿಟಲ್ ಸೇವೆಗಳನ್ನು ಜನಸಾಮಾನ್ಯರ ಬೆರಳ ತುದಿಗೆ ತಂದರೆ, 5ಜಿ ಅತಿ ಕಡಿಮೆ ವಿಳಂಬದ ಸಂವಹನದ ಮೂಲಕ ಸ್ಮಾರ್ಟ್ ಕೈಗಾರಿಕೆಗಳು, ದೂರಸ್ಥ ವೈದ್ಯಕೀಯ ಸೇವೆಗಳು ಹಾಗೂ ಕೈಗಾರಿಕಾ ಸ್ವಯಂಚಾಲಿತ ವ್ಯವಸ್ಥೆಗಳಿಗೆ ಹೊಸ ವೇಗ ನೀಡಿದೆ ಎಂದು ಹೇಳಿದರು. 6ಜಿ ಈ ಪಯಣವನ್ನು ಮತ್ತಷ್ಟು ವಿಸ್ತರಿಸಿ, ಭೌತಿಕ ಮತ್ತು ಡಿಜಿಟಲ್ ಜಗತ್ತಿನ ನಡುವಿನ ಗಡಿರೇಖೆಯನ್ನೇ ಮಸುಕಾಗಿಸುವ ತಂತ್ರಜ್ಞಾನವಾಗಿ ರೂಪುಗೊಳ್ಳಲಿದೆ. ಕೃತಕ ಬುದ್ಧಿಮತ್ತೆ, ಟೆರಾಹೆರ್ಟ್ಜ್ ಸಂವಹನ, ಇಮ್ಮರ್ಸಿವ್ ಎಕ್ಸ್‌ಟೆಂಡೆಡ್ ರಿಯಾಲಿಟಿ, ಡಿಜಿಟಲ್ ಟ್ವಿನ್‌ಗಳು, ಸ್ವಾಯತ್ತ ವಾಹನಗಳು ಹಾಗೂ ಬೃಹತ್ ಪ್ರಮಾಣದ ಯಂತ್ರದಿಂದ ಯಂತ್ರಕ್ಕೆ ಸಂವಹನಗಳ ಸಮನ್ವಯದ ಮೂಲಕ 6ಜಿ, ಸಂಪರ್ಕಿಸುವ ಜಗತ್ತಿನಿಂದ, ಬುದ್ಧಿವಂತಿಕೆಯ ಜೊತೆಗೂಡಿ ಪರಸ್ಪರ ಪ್ರತಿಕ್ರಿಯಿಸುವ ಜಗತ್ತಾಗಿ ಬದಲಾಯಿಸುವ ಹೊಸ ತಾಂತ್ರಿಕ ಯುಗಕ್ಕೆ ದಾರಿ ಮಾಡಿಕೊಡಲಿದೆ ಎಂದು ವಿವರಿಸಿದರು.ಶೈಕ್ಷಣಿಕ ಪರಿಪಕ್ವತೆ: ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ಹೋಲೋಗ್ರಾಫಿಕ್ ಕಮ್ಯುನಿಕೇಷನ್, ಹೋಲೋಗ್ರಾಫಿಕ್ ಸಂವಹನ, ಡಿಜಿಟಲ್ ಟ್ವಿನ್ ನೆಟ್‌ವರ್ಕ್‌ಗಳು ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ಸ್ವಾಯತ್ತ ನೆಟ್‌ವರ್ಕ್ ನಿರ್ವಹಣೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳತ್ತ ದೂರಸಂಪರ್ಕ ಕ್ಷೇತ್ರ ಮುನ್ನಡೆಯುತ್ತಿರುವ ಸಂದರ್ಭದಲ್ಲಿ, ಅಧ್ಯಾಪಕರು ತಾಂತ್ರಿಕ ಬೆಳವಣಿಗೆಗಳಿಗೆ ನಿರಂತರವಾಗಿ ತಮ್ಮನ್ನು ತಾವು ನವೀಕರಿಸಿಕೊಳ್ಳುವುದು ಅಗತ್ಯ. ಹೊಸ ತಂತ್ರಜ್ಞಾನಗಳ ಜ್ಞಾನವು ತರಗತಿ ಕೊಠಡಿಗೆ ತಲುಪಿದಾಗ ಮಾತ್ರ, ಶೈಕ್ಷಣಿಕ ಪರಿಪಕ್ವತೆ ಮತ್ತಷ್ಟು ವಿಸ್ತರಿಸಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಶೋಧನಾ ಡೀನ್ ಡಾ.ಎಸ್.ವಿ ಸತ್ಯನಾರಾಯಣ ಮಾತನಾಡಿ, ದೇಶದಾದ್ಯಂತ ಸ್ವೀಕರಿಸಲಾದ ಸುಮಾರು 1,500 ಪ್ರಸ್ತಾವನೆಗಳ ಪೈಕಿ, ಜೆಎನ್‌ಎನ್ ಕಾಲೇಜು ಎಐಸಿಟಿಇ ಅನುದಾನಕ್ಕೆ ಆಯ್ಕೆಯಾಗಿರುವುದು, ಇಲ್ಲಿನ ಬೋಧಕ ವರ್ಗದ ಸಂಶೋಧನಾ ದೃಷ್ಟಿಕೋನದ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದರು.ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಪ್ರಮೋದ್ ಕುಮಾರ್ ಎಸ್., ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಸುರೇಂದ್ರ ಎಸ್, ಕಾರ್ಯಕ್ರಮ ಸಂಯೋಜಕರಾದ ಡಾ. ಎಸ್.ಆರ್.ಅಶ್ವಿನಿ , ಡಾ. ಪ್ರೇಮಾ ಕೆ.ಎನ್. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಉಪನ್ಯಾಸಕರು ಹಾಗೂ ಸಂಶೋಧಕರು ಭಾಗವಹಿಸಿದ್ದರು.