ಇಂದು, ನಾಳೆ 6ನೇ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ
KannadaprabhaNewsNetwork | Published : Oct 21 2023, 12:30 AM IST
ಇಂದು, ನಾಳೆ 6ನೇ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ
ಸಾರಾಂಶ
ಬೆಳಗ್ಗೆ 10 ಗಂಟೆಗೆ ಪದ್ಮಶ್ರೀ ಪುರಸ್ಕೃತೆ ಮಾತಾ ಬಿ.ಮಂಜಮ್ಮ ಜೋಗತಿ ಸಮ್ಮೇಳನ ಉದ್ಘಾಟಿಸುವರು
ಕನ್ನಡಪ್ರಭ ವಾರ್ತೆ, ಹೊಸನಗರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಆಶ್ರಯದಲ್ಲಿ 6ನೇ ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಪಟ್ಟಣದ ಕುವೆಂಪು ವಿದ್ಯಾಶಾಲೆ ಆವರಣದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿದೆ. ಹಿರಿಯ ಸಾಹಿತಿ ಅಂಬ್ರಯ್ಯಮಠ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಬೆಳಗ್ಗೆ ಗಣಪತಿ ದೇವಸ್ಥಾನದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಲಿದೆ. ಹಿರಿಯ ವರ್ತಕ ಶ್ರೀನಿವಾಸ್ ಕಾಮತ್ ಮೆರವಣಿಗೆಗೆ ಚಾಲನೆ ನೀಡುವರು. ಉದ್ಯಮಿ ಎನ್.ಆರ್. ದೇವಾನಂದ್, ಎಚ್.ಎನ್. ಶ್ರೀಪತಿ ರಾವ್ ವಚನ ಕಟ್ಟುಗಳಿಗೆ ಮತ್ತು ಬಸವಣ್ಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಇದಕ್ಕೂ ಮೊದಲು ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಅವರು ರಾಷ್ಟ್ರಧ್ವಜಾರೋಹಣ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತ.ಮ. ನರಸಿಂಹ ನಾಡಧ್ವಜ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್. ಮಹಾರುದ್ರ ಪರಿಷತ್ ಧ್ವಜಾರೋಹಣ ಮಾಡುವರು. ಪಿಕಾರ್ಡ್ ಅಧ್ಯಕ್ಷ ಎಂ.ವಿ. ಜಯರಾಂ ಕೆಳದಿ ಶಿವಪ್ಪ ನಾಯಕ ಜ್ಯೋತಿ ಸ್ವಾಗತ ಮಾಡುವರು. ಬೆಳಗ್ಗೆ 10 ಗಂಟೆಗೆ ಪದ್ಮಶ್ರೀ ಪುರಸ್ಕೃತೆ ಮಾತಾ ಬಿ.ಮಂಜಮ್ಮ ಜೋಗತಿ ಸಮ್ಮೇಳನ ಉದ್ಘಾಟಿಸುವರು. ಸಂಸದ ಬಿ.ವೈ. ರಾಘವೇಂದ್ರ, ಸಚಿವ ಎಸ್.ಮಧು ಬಂಗಾರಪ್ಪ, ಶಾಸಕರಾದ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ ಅತಿಥಿಯಾಗಿ ಭಾಗವಹಿಸುವರು. ಆನಂದಪುರ ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿ ಸಾನ್ನಿಧ್ಯ ವಹಿಸುವರು. ಮೂಲೆಗದ್ದೆ ಮಠದ ಅಭಿನವ ಚನ್ನಬಸವಸ್ವಾಮಿ ನೇತೃತ್ವ ವಹಿಸುವರು. ಸಮ್ಮೇಳನಾಧ್ಯಕ್ಷರ ಮಾತು: ಸಮ್ಮೇಳನಾಧ್ಯಕ್ಷ ಅಂಬ್ರಯ್ಯ ಮಠ ಸಮ್ಮೇಳನ ಉದ್ದೇಶಿಸಿ ಮಾತನಾಡುವರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎನ್. ಮಹಾರುದ್ರ ಆಶಯ ನುಡಿಗಳಾಡುವರು. ಕಾರ್ಯಾಧ್ಯಕ್ಷ ಬಿ.ಜಿ. ಚಂದ್ರಮೌಳಿಗೌಡ ಪ್ರಾಸ್ತಾವಿಕ ಮಾತನಾಡುವರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಸೊನಲೆ ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು. ಅನುಭವ ಮಂಟಪದಲ್ಲಿ 4 ಗೋಷ್ಠಿ: ಸಮ್ಮೇಳನದಲ್ಲಿ ಮಲೆನಾಡು ಶರಣ ಪರಂಪರೆ, ಸಮ್ಮೇಳನಾಧ್ಯಕ್ಷರ ಬದುಕು ಬರಹ, ಅಕ್ಕ ಮಹಾದೇವಿ ಸಂದೇಶಸಾರ, ಮಲೆನಾಡು ಕಾಯಕ ಪರಂಪರೆ, ಮಲೆನಾಡ ವೈಚಾರಿಕ ಸಾಹಿತ್ಯದಲ್ಲಿ ವಚನಗಳ ಪ್ರಭಾವ ಎಂಬ ವಿಚಾರದಲ್ಲಿ 2 ದಿನಗಳ ಸಮ್ಮೇಳನದಲ್ಲಿ ಒಟ್ಟು 4 ಗೋಷ್ಠಿಗಳು ನಡೆಯಲಿದೆ. ಸಮ್ಮೇಳನದಲ್ಲಿ ಉಚಿತ ಆರೋಗ್ಯ ಶಿಬಿರ, ವಚನ ಗಾಯನ, ಯೋಗ, ಶಿವಯೋಗ, ಸೌಹಾರ್ದ ವಾಲಿಬಾಲ್ ಪಂದ್ಯಾವಳಿ, ವಚನ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ. ಭಾನುವಾರ ಸಂಜೆ ಸಮಾರೋಪ: ಜಡೆ ಮಠದ ಮಹಾಂತಸ್ವಾಮಿ ಸಮಾರೋಪ ಸಮಾರಂಭ ಸಾನ್ನಿಧ್ಯ ವಹಿಸುವರು. ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮಿ ಸಮಾರೋಪ ಭಾಷಣ ಮಾಡಲಿದ್ದಾರೆ. ಎಚ್.ಎನ್. ಮಹಾರುದ್ರ ಅಧ್ಯಕ್ಷತೆ ವಹಿಸುವರು. ಶಾಸಕರು, ಜನಪ್ರತಿನಿದಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು. ಸಾಹಿತಿಗಳು, ಶರಣ ಪ್ರಮುಖರು ಹಾಜರಿರುವರು ಎಂದು ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಿ.ಜಿ. ಚಂದ್ರಮೌಳಿ ಗೌಡ ತಿಳಿಸಿದ್ದಾರೆ. - - - (-ಸಾಂದರ್ಭಿಕ ಚಿತ್ರ)