ಒಂದೇ ದಿನ ಶಿಶು ಸೇರಿ 7 ಸಾವು, ಗ್ರಾಮಸ್ಥರಲ್ಲಿ ತೀವ್ರ ಆತಂಕ!

| Published : Jul 12 2024, 01:31 AM IST

ಒಂದೇ ದಿನ ಶಿಶು ಸೇರಿ 7 ಸಾವು, ಗ್ರಾಮಸ್ಥರಲ್ಲಿ ತೀವ್ರ ಆತಂಕ!
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಹೊರ ವಲಯದ ಹೊಸ ಕುಂದುವಾಡ ಗ್ರಾಮದಲ್ಲಿ ಒಂದೇ ದಿನ 7 ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗೆ ಜಾಗವೂ ಇಲ್ಲವೆಂದು ಇಡೀ ಗ್ರಾಮಸ್ಥರು ಪ್ರತಿಭಟಿಸಿ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಸಮಸ್ಯೆ ಪರಿಹರಿಸಬೇಕೆಂದು ಪಟ್ಟು ಹಿಡಿದಿರುವುದು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮೂರು ದಿನದ ನವಜಾತ ಶಿಶು ಸೇರಿ 65 ವರ್ಷದ ವೃದ್ಧೆವರೆಗೆ ಒಂದೇ ದಿನ ಪ್ರತ್ಯೇಕ ಪ್ರಕರಣಗಳಲ್ಲಿ ಏಳು ಜನ ಸಾವನ್ನಪ್ಪಿದ್ದರಿಂದ ಇಡೀ ಗ್ರಾಮಸ್ಥರು ತೀವ್ರ ಆತಂಕಕ್ಕೊಳಗಾದ ಘಟನೆ ನಗರದ ಹೊರ ವಲಯದ ಹೊಸ ಕುಂದುವಾಡ ಗ್ರಾಮದಲ್ಲಿ ವರದಿಯಾಗಿದೆ.

ನಗರದ ಹೊರ ವಲಯದ ಹೊಸ ಕುಂದುವಾಡ ಗ್ರಾಮದ ಶಾಂತಮ್ಮ(65 ವರ್ಷ), ಮಾರಜ್ಜಿ(60) ವಯೋ ಸಹಜವಾಗಿ ಸಾವನ್ನಪ್ಪಿದ್ದಾರೆ. ಭೀಮಪ್ಪ(60), ಸಂತೋಷ್‌(32) ವಾಂತಿಬೇಧಿಯಿಂದ ನಿಧನರಾಗಿದ್ದಾರೆ. ಈರಮ್ಮ(65) ಹಾಗೂ ಸುನಿಲ್‌(25) ಜ್ವರದಿಂದಾಗಿ ಹಾಗೂ 3 ತಿಂಗಳ ಹಿಂದಷ್ಟೇ ಜನಿಸಿದ್ದ ನವಜಾತ ಗಂಡು ಶಿಶು ಉಸಿರಾಟ ಸಮಸ್ಯೆಯಿಂದಾಗಿ ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ಆತಂಕ ಹುಟ್ಟು ಹಾಕಿದೆ.

ಹೊಸ ಕುಂದುವಾಡದಲ್ಲಿ ವಯೋ ಸಹಜವಾಗಿ ಇಬ್ಬರು ವೃದ್ಧೆಯರು, ವಾಂತಿ ಬೇಧಿಯಿಂದ ವೃದ್ಧೆ ಸೇರಿ ಇಬ್ಬರು, ತೀವ್ವ ಜ್ವರಕ್ಕೆ ಯುವಕ ಸೇರಿದಂತೆ ಇಬ್ಬರು ಹಾಗೂ ಉಸಿರಾಟದ ಸಮಸ್ಯೆಯಿಂದಾಗಿ ನವಜಾತ ಶಿಶು ಮೃತಪಟ್ಟಿದೆ. ಒಂದೇ ದಿನ ಒಂದೇ ಗ್ರಾಮದಲ್ಲಿ 7 ಜನರ ಸಾವುಗಳು ಜನರನ್ನು ತೀವ್ರ ಆತಂಕಕ್ಕೆ ನೂಕಿದೆ.

ಸುಮಾರು 3 ಸಾವಿರ ಜನಸಂಖ್ಯೆ ಪುಟ್ಟ ಗ್ರಾಮದಲ್ಲಿ ಒಂದೇ ದಿನ ಪ್ರತ್ಯೇಕ ಪ್ರಕರಣದಲ್ಲಿ 7 ಸಾವು, ಅದರಲ್ಲೂ ಕೂಸು ಹಾಗೂ ಇಬ್ಬರು ಹದಿಹರೆಯದ ಯುವಕರ ಸಾವು ಜನರಲ್ಲಿ ಭಯ ಬೀಳಿಸಿದೆ. ಗ್ರಾಮದ ಬೇರೆ ಬೇರೆ ಕುಟುಂಬಕ್ಕೆ ಸೇರಿದ 7 ಜನರ ಸಾವಿನ ಹಿನ್ನೆಲೆ ಅಂತ್ಯಕ್ರಿಯೆಗೂ ತಮ್ಮ ಊರಿನಲ್ಲಿ ಸ್ಥಳಾವಕಾಶ ಕೊರತೆ ಇದೆ ಎಂಬುದಾಗಿ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ವಯೋ ಸಹಜ ಸಾವು, ಅನಾರೋಗ್ಯದ ಕಾರಣಕ್ಕೆ ಸಾವು ಹೀಗೆ ಏಳು ಜನ ಸಾವಿನಿಂದಾಗಿ ತಮ್ಮ ಊರಿನಲ್ಲಿ ಅಂತ್ಯಕ್ರಿಯೆಗೂ ಸ್ಮಶಾನ ಇಲ್ಲ. ಸ್ಮಶಾನಕ್ಕೆ ಜಾಗ ಕಲ್ಪಿಸುವಂತೆ ಹಿಂದಿನಿಂದಲೂ ಹೋರಾಟ ನಡೆಸಿ, ಮನವಿ ಮಾಡಿದ್ದರೂ ಸಂಬಂಧಿಸಿದ ಇಲಾಖೆ ಯಾವುದೇ ರೀತಿ ಸ್ಪಂದಿಸಿಲ್ಲ. ಈಗ ಒಂದೇ ದಿನ 7 ಸಾವು ಸಂಭವಿಸಿದ್ದು, ಎಲ್ಲಿ ಅಂತ್ಯಕ್ರಿಯೆ ಮಾಡಬೇಕೆಂದು ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಪ್ರಶ್ನಿಸಿದರು.

ಹೊಸ ಕುಂದುವಾಡದಲ್ಲಿ ಯಾರಾದರೂ ಸಾವನ್ನಪ್ಪಿದರೆ ಅಂತ್ಯಕ್ರಿಯೆ ನಡೆಸುವುದಕ್ಕೂ ಸ್ಥಳದ ಕೊರತೆ ಇದೆ. ಹಾಗಾಗಿ ಜಿಲ್ಲಾಧಿಕಾರಿಗಳು ತಮ್ಮ ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆ ಪರಿಹರಿಸಬೇಕು ಎಂಬುದಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕಡೆಗೂ ಎಂದಿನಂತೆ ನಿಗದಿತ ಸ್ಥಳದಲ್ಲಿ ಮೃತರ ಕುಟುಂಬ ವರ್ಗ, ಬಂಧು-ಬಳಗ, ಗ್ರಾಮಸ್ಥರು ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.