ಮೆಕ್ಕೆಜೋಳ ಚೀಲದ ರಾಶಿಯಡಿ ಸಿಲುಕಿ 7 ಕಾರ್ಮಿಕರ ದುರ್ಮರಣ!

| Published : Dec 06 2023, 01:15 AM IST

ಮೆಕ್ಕೆಜೋಳ ಚೀಲದ ರಾಶಿಯಡಿ ಸಿಲುಕಿ 7 ಕಾರ್ಮಿಕರ ದುರ್ಮರಣ!
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರದ ಖಾಸಗಿ ಆಹಾರ ಕಾರ್ಖಾನೆ ಗೋದಾಮಿನಲ್ಲಿ ದುರಂತ. ರಕ್ಷಣೆಗೆ 17 ಗಂಟೆಗಳ ಕಾರ್ಯಾಚರಣೆ । ಒಬ್ಬ ಕಾರ್ಮಿಕ ಮಾತ್ರ ಪಾರು.

ಕನ್ನಡಪ್ರಭ ವಾರ್ತೆ ವಿಜಯಪುರ

ಖಾಸಗಿ ಆಹಾರ ಸಂಸ್ಕರಣಾ ಘಟಕವೊಂದರಲ್ಲಿ 200 ಟನ್‌ಗೂ ಹೆಚ್ಚು ತೂಕದ ಮೆಕ್ಕೆಜೋಳ ತುಂಬಿದ ಚೀಲಗಳು ಮೈಮೇಲೆ ಬಿದ್ದು ಏಳು ಕಾರ್ಮಿಕರು ಅಸುನೀಗಿದ ದಾರುಣ ಘಟನೆ ವಿಜಯಪುರಲ್ಲಿ ನಡೆದಿದೆ.

ನಗರದ ಅಲಿಯಾಬಾದ್‌ ಕೈಗಾರಿಕಾ ಪ್ರದೇಶದಲ್ಲಿನ ರಾಜಗುರು ಫುಡ್ಸ್ ಗೋದಾಮಿನ ಮೆಕ್ಕೆಜೋಳ ಸಂಸ್ಕರಣ ಘಟಕದಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಆಗಲೇ ಒಬ್ಬರು ಸಾವನ್ನಪ್ಪಿರುವ ಮಾಹಿತಿ ಲಭಿಸಿತ್ತು. ಮಂಗಳವಾರ ಬೆಳಗಿನ ವೇಳೆಗೆ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿದೆ. ಮೆಕ್ಕೆಜೋಳದ ರಾಶಿಯಡಿ ಸಿಕ್ಕಿಹಾಕಿಕೊಂಡಿದ್ದ ಒಟ್ಟು ಎಂಟು ಕಾರ್ಮಿಕರ ಪೈಕಿ ಏಳು ಕಾರ್ಮಿಕರ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಒಬ್ಬ ಮಾತ್ರ ಜೀವಂತವಾಗಿ ಹೊರಬಂದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಆತ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ರೈತರಿಂದ ಪಡೆದ ಮೆಕ್ಕೆಜೋಳವನ್ನು ಸಂಸ್ಕರಿಸಿ ಬೇರೆ ರಾಜ್ಯಗಳಿಗೆ ಮತ್ತು ವಿವಿಧ ಉದ್ಯಮಿಗಳಿಗೆ ಮಾರುತ್ತಿದ್ದ ಕಿಶೋರ್ ಜೈನ್ ಮಾಲೀಕತ್ವದ ಗೋದಾಮು ಇದಾಗಿದೆ. ನಿಗದಿಗಿಂತ ಹೆಚ್ಚಿನ ಭಾರ ಹಾಕಿದ್ದರಿಂದ ಮೆಕ್ಕೆಜೋಳ ಸಂಸ್ಕರಿಸಿ ಚೀಲಗಳಿಗೆ ತುಂಬಿಸುವ ಯಂತ್ರ (ಸ್ಟ್ರಕ್ಚರ್) ಸೋಮವಾರ ಸಂಜೆ 5 ಗಂಟೆಯ ವೇಳೆಗೆ ಏಕಾಏಕಿ ಕುಸಿದು ಬಿತ್ತು. ಈ ವೇಳೆ 11 ಕಾರ್ಮಿಕರು ಈ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮೂವರು ತಕ್ಷಣ ಓಡಿಹೋಗಿ ಪ್ರಾಣ ಕಾಪಾಡಿಕೊಂಡರೆ, ಉಳಿದ 8 ಜನರು ಅದರಡಿ ಸಿಕ್ಕಿಹಾಕಿಕೊಂಡಿದ್ದರು.

ಎಸ್‌ಡಿಆರ್‌ಎಫ್‌ ಮತ್ತು ಎನ್‌ಡಿಆರ್‌ಎಫ್‌ನ ಒಟ್ಟು 30 ಜನ ಸಿಬ್ಬಂದಿಗಳು ಸುಮಾರು 17 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಿ 7 ಮೃತದೇಹಗಳನ್ನು ಹೊರತೆಗೆದರು. ಒಬ್ಬನನ್ನು ಮಾತ್ರ ರಕ್ಷಿಸಲಾಗಿದ್ದು, ಆತ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾನೆ.

ಮೃತರೆಲ್ಲರೂ ಬಿಹಾರ ಮೂಲದವರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಅವರ ಊರಿಗೆ ಕಳುಹಿಸಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್‌ ಸ್ಥಳಕ್ಕೆ ಭೇಟಿ ನೀಡಿ, ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು. ಮುಖ್ಯಮಂತ್ರಿ ಸೂಚನೆಯಂತೆ ಕಾರ್ಮಿಕರು ಬೇರೆ ರಾಜ್ಯದವರಾಗಿದ್ದರೂ ಮೃತರಿಗೆ ಸರ್ಕಾರದ ವತಿಯಿಂದ ತಲಾ ಎರಡು ಲಕ್ಷ ರು. ಹಾಗೂ ಗಾಯಾಳುಗಳಿಗೆ ಐವತ್ತು ಸಾವಿರ ನೀಡುವುದಾಗಿ ಸಚಿವರು ಘೋಷಿಸಿದರು.

-----

ಮೃತರ ಕುಟುಂಬಕ್ಕೆ ₹7 ಲಕ್ಷ ಪರಿಹಾರ

ಮೃತ ಕಾರ್ಮಿಕರಿಗೆ ರಾಜ್‌ಗುರು ಸಂಸ್ಥೆಯಿಂದ ₹5 ಲಕ್ಷ ಮತ್ತು ರಾಜ್ಯ ಸರ್ಕಾರದಿಂದ ₹2 ಲಕ್ಷ ಸೇರಿದಂತೆ ಒಟ್ಟು ₹7 ಲಕ್ಷ ಪರಿಹಾರವನ್ನು ಘೋಷಣೆ ಮಾಡಲಾಗಿದೆ. ಗಾಯಗೊಂಡ ಕಾರ್ಮಿಕರಿಗೆ ಸಂಸ್ಥೆಯಿಂದ ₹2 ಲಕ್ಷ, ಸರ್ಕಾರದಿಂದ ₹50 ಸಾವಿರ ಸೇರಿದಂತೆ ಒಟ್ಟು ₹2.50 ಲಕ್ಷ ಪರಿಹಾರ ನೀಡಲಾಗುತ್ತಿದೆ.

- ಎಂ.ಬಿ.ಪಾಟೀಲ್‌

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ