ಸಾರಾಂಶ
ಏನಿದು ಪ್ರಕರಣ?- ಅಕ್ರಮವಾಗಿ ಹೊರತೆಗೆದಿದ್ದ ಅದಿರನ್ನು ಅರಣ್ಯಾಧಿಕಾರಿಗಳು ಬೇಲೆಕೇರಿ ಬಂದರಿನಲ್ಲಿ ಜಪ್ತಿ ಮಾಡಿದ್ದರು- ಒಟ್ಟು 8 ಲಕ್ಷ ಟನ್ ಅದಿರು ಬಂದರಿನಲ್ಲಿ ದಾಸ್ತಾನಿತ್ತು. ಆ ಪೈಕಿ 6 ಲಕ್ಷ ಟನ್ ಅದಿರು ನಾಪತ್ತೆಯಾಗಿತ್ತು- ಈ ಬಗ್ಗೆ ಲೋಕಾಯುಕ್ತರು ವರದಿ ನೀಡಿದ್ದರು. ರಾಜ್ಯ ಸರ್ಕಾರ ಸಿಐಡಿ ತನಿಖೆಗೂ ಆದೇಶ ಮಾಡಿತ್ತು- ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸಿಬಿಐ ತನಿಖೆಗೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿತ್ತು- ಪ್ರಕರಣದ ತನಿಖೆ ನಡೆಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು
==ಯಾರ್‍ಯಾರಿಗೆ ಶಿಕ್ಷೆ?
ಸತೀಶ್ ಸೈಲ್ (ಶಾಸಕ), ಮಹೇಶ್ ಬೆಳಿಯ (ಬಂದರು ಸಂರಕ್ಷಣಾಧಿಕಾರಿ), ಪ್ರೇಮ್ ಚಂದ್ ಗರ್ಗ್ (ಲಾಲ್ ಮಹಲ್ ಕಂಪನಿಯ ಮುಖ್ಯಸ್ಥ), ಕಾರದಪುಡಿ ಮಹೇಶ್ (ಶ್ರೀಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕ), ಸ್ವಸ್ತಿಕ್ ನಾಗರಾಜ್ (ಸ್ವಸ್ತಿಕ್ ಕಂಪನಿ ಮಾಲೀಕ), ಚೇತನ್ (ಆಶಾಪುರ ಕಂಪನಿಯ ಮಾಲೀಕ). ಕೆ.ವಿ.ಗೋವಿಂದ ರಾಜ್.==ಕನ್ನಡಪ್ರಭ ವಾರ್ತೆ ಬೆಂಗಳೂರು
ಬೇಲೆಕೇರಿ ಅದಿರು ನಾಪತ್ತೆ ಸಂಬಂಧ ಆರು ಪ್ರಕರಣದಲ್ಲೂ ಅಪರಾಧಿಗಳೆಂದು ಘೋಷಿಸಲ್ಪಟ್ಟಿದ್ದ ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಸೇರಿದಂತೆ ಎಲ್ಲ ಏಳು ಅಪರಾಧಿಗಳಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಳು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಒಟ್ಟು 44 ಕೋಟಿ ರು.ಗಿಂತ ಹೆಚ್ಚು ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಈ ಮೂಲಕ 14 ವರ್ಷದ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.ಎರಡು ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಗೊಳಗಾಗಿರುವ ಹಿನ್ನೆಲೆಯಲ್ಲಿ ಸತೀಶ್ ಸೈಲ್ ಅವರ ಶಾಸಕ ಸ್ಥಾನಕ್ಕೆ ಇದೀಗ ಕಂಟಕ ಎದುರಾಗಿದೆ. ಒಂದು ವೇಳೆ ಅವರು ಅನರ್ಹಗೊಂಡರೆ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಕಡಿಮೆ ಮತಗಳ (2318) ಅಂತರದಿಂದ ಪರಾಭವಗೊಂಡಿದ್ದ ಬಿಜೆಪಿಯ ರೂಪಾಲಿ ನಾಯ್ಕ್ ಅವರಿಗೆ ಮತ್ತೇ ಸ್ಪರ್ಧಿಸುವ ಅವಕಾಶ ಸಿಗಲಿದೆ.
ಶಿಕ್ಷೆ ಪ್ರಕಟ:ಪ್ರಕರಣ ಸಂಬಂಧ ಗುರುವಾರ ತೀರ್ಪು ನೀಡಿದ್ದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್, ಶನಿವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದರು. ಅದರಂತೆ ಅಪರಾಧಿಗಳಿಗೆ ವಂಚನೆ ಪ್ರಕರಣದಲ್ಲಿ 7 ವರ್ಷ, ಒಳಸಂಚು ಪ್ರಕರಣದಲ್ಲಿ 5 ವರ್ಷ ಮತ್ತು ಕಳ್ಳತನ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಈಗಾಗಲೇ ಜೈಲಿನಲ್ಲಿ ಕಳೆದಿರುವ ಶಿಕ್ಷೆ ಪ್ರಮಾಣವನ್ನು ಹೊರತುಪಡಿಸಿ, ಉಳಿದ ಶಿಕ್ಷೆಯನ್ನು ದೋಷಿತರು ಅನುಭವಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸಿಬಿಐ ಪರ ಹಿರಿಯ ಸರ್ಕಾರಿ ಅಭಿಯೋಜಕರಾದ ಕೆ.ಎಸ್.ಹೇಮಾ ಮತ್ತು ಶಿವಾನಂದ ಪೆರ್ಲ ವಾದ ಮಂಡಿಸಿದರು.ಯಾರ್‍ಯಾರಿಗೆ ಶಿಕ್ಷೆ?:
ಶಾಸಕ ಸತೀಶ್ ಸೈಲ್, ಬಂದರು ಸಂರಕ್ಷಣಾಧಿಕಾರಿ ಮಹೇಶ್ ಬೆಳಿಯ, ಲಾಲ್ ಮಹಲ್ ಕಂಪನಿಯ ಮುಖ್ಯಸ್ಥ ಪ್ರೇಮ್ ಚಂದ್ ಗರ್ಗ, ಶ್ರೀಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕ ಕಾರದಪುಡಿ ಮಹೇಶ್, ಸ್ವಸ್ತಿಕ್ ಕಂಪನಿ ಮಾಲೀಕ ಸ್ವಸ್ತಿಕ್ ನಾಗರಾಜ್, ಆಶಾಪುರ ಕಂಪನಿಯ ಮಾಲೀಕ ಚೇತನ್, ಕೆ.ವಿ.ಗೋವಿಂದ ರಾಜ್ ಅವರಿಗೆ ಶಿಕ್ಷೆ ವಿಧಿಸಲಾಗಿದೆ.ಇದೇ ವೇಳೆ, ಎಲ್ಲ ದೋಷಿತರ ವಿರುದ್ಧದ ಆರು ಪ್ರಕರಣಗಳ ಸಂಬಂಧ ಒಟ್ಟಾರೆ 42 ಕೋಟಿ ರು.ಗಿಂತ ಹೆಚ್ಚು (6 ಕೋಟಿ ರು., 9 ಕೋಟಿ ರು., 9 ಕೋಟಿ ರು., 9.52 ಕೋಟಿ ರು., 9.25 ಕೋಟಿ ರು. ಮತ್ತು 90 ಲಕ್ಷ ರು.) ಅಧಿಕ ದಂಡವನ್ನು ನ್ಯಾಯಾಲಯ ವಿಧಿಸಿದೆ. ಜೊತೆಗೆ, ದಂಡದ ಹಣವನ್ನು ಜಪ್ತಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಅಪರಾಧಿಗಳು ದಂಡ ಪಾವತಿಸದಿದ್ದರೆ ಒಂದು ವರ್ಷಗಳ ಕಾಲ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗಿದೆ.
ಎರಡು ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಗೊಳಗಾಗಿರುವ ಹಿನ್ನೆಲೆಯಲ್ಲಿ ಸತೀಶ್ ಸೈಲ್ ಅವರ ಶಾಸಕ ಸ್ಥಾನ ಅನರ್ಹಗೊಳ್ಳುವ ಭೀತಿ ಎದುರಾಗಿದೆ. ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ತಡೆ ತಂದರೆ ಅನರ್ಹತೆ ಭೀತಿ ದೂರವಾಗಬಹುದು.ಏನಿದು ಪ್ರಕರಣ?:2010 ರಲ್ಲಿ ಲೋಕಾಯುಕ್ತ ಹಾಗೂ ಅರಣ್ಯಾಧಿಕಾರಿಗಳು ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿ ಕೋಟ್ಯಂತರ ರು. ಮೌಲ್ಯದ ಅಕ್ರಮ ಅದಿರನ್ನು ಜಪ್ತಿ ಮಾಡಿದ್ದರು. ಜಪ್ತಿ ಮಾಡಿದ್ದ ಅದಿರಿನ 24 ಗುಡ್ಡೆಗಳನ್ನು ಬೇಲೆಕೇರಿ ಬಂದರಿನಲ್ಲಿ ಸಂಗ್ರಹಿಸಿಡಲಾಗಿತ್ತು. 2010ರ ಮಾ.20ರಂದು ಜಪ್ತಿಯಾಗಿದ್ದ 8 ಲಕ್ಷ ಮೆಟ್ರಿಕ್ ಟನ್ ಅದಿರಿನ ಪೈಕಿ 80 ದಿನಗಳಲ್ಲಿ 6 ಲಕ್ಷ ಮೆಟ್ರಿಕ್ ಟನ್ ಅದಿರು ನಾಪತ್ತೆಯಾಗಿತ್ತು. ತದನಂತರ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ತನಿಖೆ ನಡೆಸಿ, ಅಪರಾಧಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡಿತ್ತು.
ಅಪರಾಧಿಗಳು ಕಾನೂನು ಬಾಹಿರವಾಗಿ ವಿದೇಶಕ್ಕೆ ಅದಿರು ರಫ್ತು ಮಾಡಿದ್ದರು. 2009ರ ಜ.1ರಿಂದ 2010ರ ಮೇ 31ರ ಅವಧಿಯಲ್ಲಿ 88.6 ಲಕ್ಷ ಮೆಟ್ರಿಕ್ ಟನ್ ಅದಿರು ರಫ್ತಾಗಿತ್ತು. 38 ಲಕ್ಷ ಮೆಟ್ರಿಕ್ ಟನ್ ಅದಿರು ರಫ್ತು ಮಾಡುವುದಕ್ಕಷ್ಟೇ ಅನುಮತಿ ನೀಡಲಾಗಿತ್ತು. ಆದರೆ, ಗಣಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿದ್ದ ಅಪರಾಧಿಗಳು ಅದಿರು ರಫ್ತು ಮಾಡಿದ್ದರು. ಬರೋಬ್ಬರಿ 50 ಲಕ್ಷ ಮೆಟ್ರಿಕ್ ಟನ್ ಅದಿರು ಹೆಚ್ಚುವರಿಯಾಗಿ ವಿದೇಶಕ್ಕೆ ರಫ್ತು ಮಾಡಲಾಗಿತ್ತು. 73 ರಫ್ತುದಾರರು ಈ ರಫ್ತು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ಪೈಕಿ ನಾಲ್ಕು ಕಂಪನಿಗಳ ಮೂಲಕ 33 ಲಕ್ಷ ಮೆಟ್ರಿಕ್ ಟನ್ ಅದಿರು ಕಳುಹಿಸಲಾಗಿದ್ದು, ಇದರಲ್ಲಿ ಶಾಸಕ ಸತೀಶ್ ಸೈಲ್ ಒಡೆತನದ ಶ್ರೀಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ 7. 23 ಲಕ್ಷ ಮೆಟ್ರಿಕ್ ಟನ್ ಅದಿರು ಸಾಗಿಸಿತ್ತು. ಇನ್ನುಳಿದ ಕಂಪನಿಗಳ ಅದಿರು ರಫ್ತುವಿನಲ್ಲಿ ಸತೀಶ್ ಸೈಲ್ ಪರೋಕ್ಷ ಭಾಗಿಯಾಗಿದ್ದರು ಎಂದು ಸಿಬಿಐ ತಿಳಿಸಿತ್ತು.==ಪ್ರಕರಣದಲ್ಲಿ ಸತೀಶ್ ಸೈಲ್ ಪಾತ್ರ
ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗುತ್ತಿಗೆ ಪಡೆಯದೇ, ಬಳ್ಳಾರಿ ಮತ್ತು ಹೊಸಪೇಟೆ ಸೇರಿದಂತೆ ಇತರೆ ಅರಣ್ಯದಲ್ಲಿ ತೆಗೆದಿದ್ದ ಅದಿರು ಖರೀದಿಸುತ್ತಿದ್ದರು. ಖರೀದಿ ಮಾಡಿದ್ದ ಅದಿರನ್ನು ಸರ್ಕಾರದ ಅನುಮತಿ ಪಡೆಯದೇ ಸ್ಥಳಾಂತರ ಮಾಡುತ್ತಿದ್ದರು. ಹೀಗೆ ಕಳ್ಳತನ, ತೆರಿಗೆ ವಂಚನೆ ಮಾಡಿ ಬೇಲೆಕೇರಿಗೆ ಅಕ್ರಮವಾಗಿ ಅದಿರು ಸಾಗಾಟ ಮಾಡಿಸುತ್ತಿದ್ದರು. ಕಡಿಮೆ ಬೆಲೆಗೆ ಖರೀದಿ ಮಾಡಿದ್ದ ಅದಿರನ್ನು ಬೇಲೆಕೇರಿ ಬಂದರಿನ ಬಳಿ ಸಂಗ್ರಹಿಸುತ್ತಿದ್ದರು. ಅಧಿಕಾರಿಗಳು ಜಪ್ತಿ ಮಾಡಿದರೂ ತಲೆಕೆಡಿಸಿಕೊಳ್ಳದೆ ರಫ್ತು ಮುಂದುವರಿಸಿದ್ದರು ಎಂದು ಸಿಬಿಐ ಆರೋಪ ಪಟ್ಟಿಯಲ್ಲಿ ತಿಳಿಸಿತ್ತು.88.6 ಲಕ್ಷ ಮೆಟ್ರಿಕ್ ಟನ್ ಅದಿರಿನ ಅಕ್ರಮ ಬಯಲಾದ ಬಳಿಕ ಸತೀಶ್ ಸೈಲ್ ಒಡೆತನದ ಕಂಪನಿಯಿಂದ ಐದು ಲಕ್ಷ ಮೆಟ್ರಿಕ್ ಟನ್ ಅದಿರು ಜಪ್ತಿ ಮಾಡಲಾಗಿತ್ತು. ಅದಿರು ನಾಪತ್ತೆಯಾಗಿರುವುದು ಸಾಬೀತಾದ ಬಳಿಕ ಸತೀಶ್ ಸೈಲ್ ವಿರುದ್ಧ ಪ್ರಕರಣ ದಾಖಲಿಸಲಾಯಿತು ಎಂದು ಹೇಳಿದೆ.
2012ರ ಸೆ.16ರಂದು ಸಿಬಿಐ, ಸತೀಶ್ ಸೈಲ್ ಮನೆ ಮೇಲೆ ದಾಳಿ ನಡೆಸಿದಾಗ ಮಹತ್ವದ ದಾಖಲೆ ವಶಪಡಿಸಿಕೊಂಡಿತ್ತು. ಬಳಿಕ 2013ರ ಸೆ.20ರಂದು ಬಂಧಿಸಲಾಯಿತು. ಒಂದು ವರ್ಷಕ್ಕೂ ಅಧಿಕ ಕಾಲ ಜೈಲುವಾಸ ಅನುಭವಿಸಿದರು. ನಂತರ 2014ರ ಡಿ.16ಕ್ಕೆ ಜಾಮೀನು ಪಡೆದು ಹೊರ ಬಂದಿದ್ದರು. ಇದೀಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮತ್ತೆ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.==
ದಂಡ ಸಮಾನ ಹಂಚಿಕೆಪ್ರಕರಣ ಸಂಬಂಧ ಅಪರಾಧಿಗಳಿಗೆ ವಿಧಿಸಲಾದ 44.10 ಕೋಟಿ ರು.ಗಿಂತ ಅಧಿಕ ದಂಡವನ್ನು ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ. ಏಳು ಅಪರಾಧಿಗಳಿಗೆ ಸಮಾನ ಹಂಚಿಕೆ ಮಾಡಿರುವುದರಿಂದ ಅಪರಾಧಿಗಳಿಗೆ ತಲಾ 6.3 ಕೋಟಿ ರು.ಗಿಂತ ಅಧಿಕ ದಂಡ ಬರಲಿದೆ. ಈ ನಡುವೆ, ಅಪರಾಧಿ ಮಹೇಶ್‌ಗೆ 7.20 ಲಕ್ಷ ರು. ಹೆಚ್ಚುವರಿಯಾಗಿ ದಂಡ ವಿಧಿಸಲಾಗಿದೆ.
ಇನ್ನು, ಆರು ಪ್ರಕರಣದಲ್ಲಿ ಏಳು ಅಪರಾಧಿಗಳಿಗೆ ತಲಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆರು ಪ್ರಕರಣದ ಪೈಕಿ ಇತರೆ ಪ್ರತ್ಯೇಕ ಪ್ರಕರಣದಲ್ಲಿ 3 ವರ್ಷ, 5ವರ್ಷ ಮತ್ತು ಏಳು ವರ್ಷ ಎಂಬುದಾಗಿ ಶಿಕ್ಷೆ ಪ್ರಕಟಿಸಲಾಗಿದೆ. ಆದರೆ, ಗರಿಷ್ಠ ಮಟ್ಟ ಏಳು ವರ್ಷ ಶಿಕ್ಷೆ ಇರುವ ಕಾರಣ ಅದನ್ನೇ ಪ್ರಮುಖ ಶಿಕ್ಷೆಯನ್ನಾಗಿ ಪರಿಗಣಿಸಲಾಗಿದೆ.