ಸಾರಾಂಶ
ಕಾರಹಳ್ಳಿ ಶ್ರೀನಿವಾಸ್, ರೈತರು ಕಳೆದ ೭೦೦ ದಿನಗಳಿಂದ ಸರ್ಕಾರದ ಗಮನ ಸೆಳೆಯಲು ಹಲವು ರೀತಿಯ ಹೋರಾಟಗಳನ್ನು ಮಾಡುತ್ತಿದ್ದೇವೆ. ಆದರೆ ಸರ್ಕಾರ ಕೃಷಿ ಭೂಮಿ ಉಳಿಸಲು ಮೀನಮೇಷ ಎಣಿಸುತ್ತಿದೆ. ಕೂಡಲೇ ರೈತರ ಹಿತದೃಷ್ಟಿಯಿಂದ ಮತ್ತು ಮುಂದಿನ ಪೀಳಿಗೆಯ ಉಳಿವಿಗಾಗಿ, ಆಹಾರ ಭದ್ರತೆಗಾಗಿ ಭೂ ಸ್ವಾಧೀನ ಕೈಬಿಡಬೇಕು. ಸಚಿವರು ಭೂದಲ್ಲಾಳಿಗಳ ಮಾತಿಗೆ ಮನ್ನಣೆ ನೀಡದೆ ಭೂಸ್ವಾಧೀನ ಕೈ ಬಿಟ್ಟು ರೈತರ ಹಿತ ಕಾಪಾಡಬೇಕು ಎಂದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸಮೀಪದ ಚನ್ನರಾಯಪಟ್ಟಣ ಹೋಬಳಿಯ ೧೩ ಹಳ್ಳಿಗಳ ೧೭೭೭ ಎಕರೆ ಕೃಷಿ ಭೂಮಿಯ ಸ್ವಾಧೀನ ವಿರೋಧಿಸಿ ನಾಡಕಚೇರಿ ಮುಂದೆ ನಡೆಯುತ್ತಿರುವ ಹೋರಾಟ ೭೦೦ ದಿನಗಳು ಪೂರೈಸಿರುವ ಸಂದರ್ಭದಲ್ಲಿ ಮಾತನಾಡಿದ ಕಾರಹಳ್ಳಿ ಶ್ರೀನಿವಾಸ್, ರೈತರು ಕಳೆದ ೭೦೦ ದಿನಗಳಿಂದ ಸರ್ಕಾರದ ಗಮನ ಸೆಳೆಯಲು ಹಲವು ರೀತಿಯ ಹೋರಾಟಗಳನ್ನು ಮಾಡುತ್ತಿದ್ದೇವೆ. ಆದರೆ ಸರ್ಕಾರ ಕೃಷಿ ಭೂಮಿ ಉಳಿಸಲು ಮೀನಮೇಷ ಎಣಿಸುತ್ತಿದೆ. ಕೂಡಲೇ ರೈತರ ಹಿತದೃಷ್ಟಿಯಿಂದ ಮತ್ತು ಮುಂದಿನ ಪೀಳಿಗೆಯ ಉಳಿವಿಗಾಗಿ, ಆಹಾರ ಭದ್ರತೆಗಾಗಿ ಭೂ ಸ್ವಾಧೀನ ಕೈಬಿಡಬೇಕು. ಸಚಿವರು ಭೂ ದಲ್ಲಾಳಿಗಳ ಮಾತಿಗೆ ಮನ್ನಣೆ ನೀಡದೆ ಭೂಸ್ವಾಧೀನ ಕೈ ಬಿಟ್ಟು ರೈತರ ಹಿತ ಕಾಪಾಡಬೇಕು ಎಂದರು.ನಲ್ಲಪ್ಪನಹಳ್ಳಿ ನಂಜಪ್ಪ ಮಾತನಾಡಿ, ಈ ಭಾಗದ ರೈತರು ಕೃಷಿಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಕೃಷಿಯೇ ನಮ್ಮ ಜೀವನವಾಗಿದೆ. ಶೇ.೮೦ಕ್ಕೂ ಹೆಚ್ಚು ಜನರು ಭೂಮಿ ನೀಡಲು ಸಿದ್ದರಿಲ್ಲ. ಕೆಲವು ದಳ್ಳಾಳಿಗಳ ಅಪಪ್ರಚಾರ ಮಾಡುತ್ತಾ ರೈತರ ನೆಮ್ಮದಿ ನಿರ್ನಾಮ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ಯಾವುದಕ್ಕೂ ಹೆದರುವುದಿಲ್ಲ. ಕೆಲವು ದಿನಗಳು ಕಾದು ನಮ್ಮ ದಾರಿಯನ್ನು ನಾವು ನೋಡಿಕೊಳ್ಳುತ್ತೇವೆ. ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ಎಚ್ಚರಿಸಿದರು.
ಅಶ್ವತಪ್ಪ ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳ ಜೊತೆ ಮಾತುಕತೆ ಮಾಡಿ ಕೂಡಲೇ ಭೂ ಸ್ವಾಧೀನ ಕೈಬಿಡಲು ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ಹೋರಾಟಕ್ಕೆ ನಾವು ಸಿದ್ದರಾಗುತ್ತೇವೆ ಎಂದು ಹೇಳಿದರು.ಮುಖಂಡರಾದ ಮಾರೇಗೌಡ ಮಾತನಾಡಿ, ಬಹುತೇಕರು ಭೂಮಿ ನೀಡಲು ಸಿದ್ಧರಿಲ್ಲ, ಕೆ.ಹೆಚ್.ಮುನಿಯಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೆಂಕಟೇಶ್, ಸೋಣ್ಣೇಗೌಡ, ಸೀನಪ್ಪ, ನಂಜೇಗೌಡ, ಮೋಹನ್, ನಾರಾಯಣಸ್ವಾಮಿ, ಮುನಿರಾಜು, ಮುನಿಕೃ?, ಪಿಳ್ಳಪ್ಪ ಮತ್ತು ರೈತರು, ರೈತ ಮುಖಂಡರು ಹಾಜರಿದ್ದರು.