ಸಾರಾಂಶ
ಹಾವೇರಿ: ಈಡಿಗ ಸಮಾಜದ ಅಭಿವೃದ್ಧಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬರುವ ಜ. 6ರಿಂದ ಕಲುಬುರಗಿ ಜಿಲ್ಲೆ ಚಿತ್ತಾಪುರ ತಾಲೂಕು ಕರದಾಳ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದಿಂದ ಬೆಂಗಳೂರಿನ ವರೆಗೆ 41 ದಿನಗಳ ಕಾಲ 700 ಕಿಮೀ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರದಾಳದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ 20 ಕಿಮೀ ಪಾದಯಾತ್ರೆ ಮತ್ತು ಧರ್ಮ ಜಾಗೃತಿ ಸಭೆಗಳನ್ನು ನಡೆಸಲಾಗುವುದು. ಫೆ.12ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಹೇಳಿದರು.ರಾಜ್ಯದಲ್ಲಿ ಈಡಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಕ್ರಿಯೆಯ ಅಂಗವಾಗಿ ಕುಲಶಾಸ್ತ್ರ ಅಧ್ಯಯನ ನಡೆದಿದೆ. ಎಂಟು ಜಿಲ್ಲೆಗಳಲ್ಲಿ ಈಗಾಗಲೇ ಅಧ್ಯಯನ ಪೂರ್ಣಗೊಂಡಿದ್ದು, ಇನ್ನುಳಿದ ಜಿಲ್ಲೆಯಲ್ಲಿಯೂ ಶೀಘ್ರದಲ್ಲಿ ಪೂರ್ಣವಾಗಲಿದೆ. ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ಅನುದಾನ, ಬೆಂಗಳೂರು ವಿಧಾನಸೌಧದ ಎದುರು ಬ್ರಹ್ಮಶ್ರೀ ನಾರಾಯಣಗುರು ಪುತ್ಥಳಿ ಸ್ಥಾಪನೆ, ಮದ್ಯ ಮಾರಾಟದಲ್ಲಿ ಈಡಿಗ ಸೇರಿ 26 ಪಂಗಡಗಳಿಗೆ ಶೇ. 50ರಷ್ಟು ಮೀಸಲಾತಿ ನೀಡುವುದು, ರಾಜ್ಯದ ಎಲ್ಲ ವಿವಿಗಳಲ್ಲಿ ನಾರಾಯಣಗುರುಗಳ ಅಧ್ಯಯನ ಪೀಠ ಸ್ಥಾಪಿಸುವುದು ಮತ್ತು ಒಂದು ವಿವಿಗೆ ಅವರ ಹೆಸರಿಡುವುದು, ಸರ್ಕಾರದಿಂದ ಹೆಂಡದ ಮಾರಯ್ಯ ಜಯಂತಿ ಆಚರಿಸುವುದು, ಮಂಗಳೂರು ಏರ್‌ಪೋರ್ಟ್‌ಗೆ ಕೋಟಿ ಚನ್ನಯ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಘೋಷಣೆ ಮಾಡುವುದು ಸೇರಿದಂತೆ ಒಟ್ಟು 18 ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ ಎಂದರು.
ಮಠಾಧೀಶರಿಗೆ ಟೋಲ್ ಫ್ರೀ ಮಾಡಿ: ದೇಶದ ಎಲ್ಲ ಟೋಲ್ ಗೇಟ್‌ಗಳಲ್ಲಿ ಮಠಾಧೀಶರು, ಸ್ವಾಮೀಜಿಯವರಿಗೆ ಉಚಿತ ಪ್ರವೇಶ ನೀಡಬೇಕು. ಅದೇ ರೀತಿ ಏರ್‌ಪೋರ್ಟ್‌ಗಳಲ್ಲಿ ಧರ್ಮಜಾಗೃತಿ, ಧರ್ಮವನ್ನು ಒಗ್ಗೂಡಿಸುವ ಸ್ವಾಮೀಜಿಗಳಿಗೆ ಸಕಲ ಸೌಲಭ್ಯವನ್ನು ಒದಗಿಸುವ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದರು.ಸಮಾಜದ ಜಿಲ್ಲಾಧ್ಯಕ್ಷ ಪರಶುರಾಮ ಈಳಗೇರ, ಗೌರವಾಧ್ಯಕ್ಷ ಪರಶುರಾಮ ಈಳಗೇರ, ತಾಲೂಕಾಧ್ಯಕ್ಷ ಸುರೇಶ ಈಳಗೇರ, ಪೂಜಾ ಹೂಲಿಹಳ್ಳಿ, ಮುರುಗೇಶ ಈಳಗೇರ, ಪರಶುರಾಮ ಹೂಲಿಹಳ್ಳಿ, ರಾಜು ಕೆರಿಮತ್ತಿಹಳ್ಳಿ, ಶೈಲೇಶಕುಮಾರ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))