ನಾಳೆಯಿಂದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ

| Published : Nov 13 2024, 12:49 AM IST

ಸಾರಾಂಶ

ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಗೋಷ್ಠಿಯಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್. ಎಸ್. ನಂಜುಂಡಪ್ರಸಾದ್ ಮಾತನಾಡಿದರು. ನಿರ್ದೇಶಕರಾದ ಸುಂದರಪ್ಪ, ಬಸವಣ್ಣ, ಎಂ. ಎಸ್. ನಾಗರಾಜು, ಸಿಇಒ ಮನುಜಾ ಇದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ಧ್ಯೇಯ ವಾಕ್ಯದಲ್ಲಿ ನ.೧೪ರಿಂದ ನ.೨೦ರ ವರೆಗೆ ಜಿಲ್ಲೆಯ ವಿವಿದೆಡೆ ಸಹಕಾರ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಷ್ಟ್ರೀಯ ಸಹಕಾರ ಯೂನಿಯನ್, ನವದೆಹಲಿ ಇವರ ಮಾರ್ಗದರ್ಶನದಲ್ಲಿ ರಾಷ್ಟ್ರದಾದ್ಯಂತ ಪರಿಣಾಮಕಾರಿಯಾಗಿ ಆಚರಿಸಲಾಗುತ್ತಿದ್ದು ಜಿಲ್ಲೆಯಲ್ಲೂ ವಿವಿಧೆಡೆ ಆಚರಿಸಲಾಗುತ್ತಿದೆ ಎಂದರು. ಸಹಕಾರ ಇಲಾಖೆಯ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನೇತೃತ್ವದಲ್ಲಿ ಎಲ್ಲಾ ರೀತಿಯ ಸಹಕಾರ ಸಂಸ್ಥೆಗಳನ್ನು ಒಳಗೊಂಡು ವಾರದ ಅವಧಿಯ ಆಚರಣೆಗಳು ಸಹಕಾರಿಗಳಿಗೆ ತಮ್ಮ ಸಾಧನೆಗಳನ್ನು ಬಿಂಬಿಸಲು ಮತ್ತು ಭವಿಷ್ಯದ ಕ್ರಿಯಾ ಯೋಜನೆಗಳನ್ನು ರೂಪಿಸಲು ಅವಕಾಶವನ್ನು ಹಾಗೂ ಸಹಕಾರ ಚಳವಳಿಯ ಬೆಳವಣಿಗೆಗೆ ಮಾರ್ಗವನ್ನು ಒದಗಿಸುತ್ತದೆ ಎಂದರು.

ಸಹಕಾರ ಸಪ್ತಾಹವು ದೇಶದ ಸಹಕಾರಿ ಅಭಿವೃದ್ಧಿಯ ವಿವಿಧ ಅಂಶಗಳ ಕುರಿತು ಸಹಕಾರ ಸಂಸ್ಥೆಗಳು ಆಯೋಜಿಸುವ ಕಾರ್ಯಾಗಾರಗಳು/ವಿಚಾರಗೋಷ್ಠಿಗಳು/ಸ್ಪರ್ಧೆಗಳು ಮತ್ತು ಇತರ ಕಾರ್ಯಕ್ರಮಗಳನ್ನು ನಡೆಸಲು ಒಂದು ವಿಶೇಷ ಸಂದರ್ಭವಾಗಿದ್ದು, ಸಾರ್ವಜನಿಕರಲ್ಲಿ ಸಹಕಾರ ಜಾಗೃತಿ ಉಂಟುಮಾಡಲು ಉತ್ತಮ ವೇದಿಕೆ ಒದಗಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ನ.೧೪ರಂದು ಕುದೇರು, ಚಾಮುಲ್‌ನ ಎಚ್.ಎಸ್.ಎಂ.ಸಭಾಂಗಣದಲ್ಲಿ ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳವಳಿಯನ್ನು ಬಲಪಡಿಸುವುದು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವ ಮೂಲಕ ಚಾಲನೆ ನೀಡಲಾಗುವುದು ಎಂದರು. ನ.೧೫ ರಂದು ಹನೂರಿನ ಚಾಮುಲ್ ಉಪಕಚೇರಿಯಲ್ಲಿ ಸಹಕಾರ ಸಂಸ್ಥೆಗಳಲ್ಲಿ ಅನ್ವೇಷಣೆ, ತಾಂತ್ರಿಕತೆ ಮತ್ತು ಉತ್ತಮ ಆಡಳಿತ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಾಗುವುದು, ನ. ೧೬ ರಂದು ಕೊಳ್ಳೆಗಾಲ ತಾಲೂಕಿನ ತಿಮ್ಮರಾಜೀಪುರ ಎಂಪಿಸಿಎಸ್‌ನಲ್ಲಿ ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಕುರಿತು ಕಾರ್ಯಕ್ರಮ ನಡೆಯಲಿದೆ. ನ.೧೭ರಂದು ಯಳಂದೂರು ತಾಲೂಕಿನ ಗೌಡಹಳ್ಳಿ ಪಿಎಸಿಎಎಸ್ ನಲ್ಲಿ ಸಹಕಾರಿ ಉದ್ಯಮಗಳಲ್ಲಿ ಪರಿವರ್ತನೆ, ನ.೧೮ರಂದು ಚಾಮರಾಜನಗರದ ಲ್ಯಾಂಪ್ಸ್ ಸಭಾಂಗಣದಲ್ಲಿ ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು ಎಂಬ ವಿಷಯದ ಬಗ್ಗೆ ಕಾರ್ಯಕ್ರಮ ನಡೆಯಲಿದೆ ಎಂದರು.

ನ. ೧೯ರಂದು ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಪಿಎಸಿಎಎಸ್‌ನಲ್ಲಿ ಮಹಿಳೆಯರು, ಯುವಕರು ಮತ್ತು ಅಬಲವರ್ಗಗಳಿಗಾಗಿ ಸಹಕಾರ ಸಂಸ್ಥೆಗಳು ಎಂಬ ಕಾರ್ಯಕ್ರಮ ನಡೆಯಲಿದ್ದು ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಉದ್ಘಾಟಿಸಲಿದ್ದಾರೆ. ನ. ೨೦ ರಂದು ಚಾಮರಾಜನಗರ ತಾಲೂಕಿನ ಬಿಸಲವಾಡಿ ಎಂಪಿಸಿಎಸ್‌ನಲ್ಲಿ ಉತ್ತಮ ವಿಶ್ವ ನಿರ್ಮಾಣ ಹಾದಿಗಾಗಿ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಕುರಿತ ಕಾರ್ಯಕ್ರಮ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಸುಂದರಪ್ಪ, ಬಸವಣ್ಣ, ಎಂ. ಎಸ್. ನಾಗರಾಜು, ಸಿಇಒ ಮನುಜಾ ಇದ್ದರು.