ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಸಂಯುಕ್ತ ಹೋರಾಟ-ಕರ್ನಾಟಕ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ನ.26ರಿಂದ 28ರ ವರೆಗೆ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿರುವ 72 ಗಂಟೆಗಳ ಮಹಾಧರಣಿಯ ಪ್ರಚಾರ ಆಂದೋಲನಕ್ಕೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ನ ಕೊಡಗು ಜಿಲ್ಲಾ ಸಮಿತಿ ಸಿದ್ದಾಪುರದಲ್ಲಿ ಚಾಲನೆ ನೀಡಿತು.
ಮೂರು ಮೂರು ದಿನಗಳ ಕಾಲ ಜಿಲ್ಲಾದ್ಯಂತ ಪ್ರಚಾರ ಆಂದೋಲನ ನಡೆಯಲಿದ್ದು, ಅದರ ಭಾಗವಾಗಿ ಸಿದ್ದಾಪುರದಲ್ಲಿ ಪ್ರಚಾರ ಜಾಥಾ ನಡೆಸಲಾಯಿತು.ಬೆಲೆ ಏರಿಕೆ ನಿಯಂತ್ರಿಸಬೇಕು, ಅಗತ್ಯ ವಸ್ತುಗಳು, ಆಹಾರ, ಔಷಧಿ, ನೇಕಾರಿಕೆ, ಕೃಷಿ ಯಂತ್ರೋಪಕರಣಗಳ ಮೇಲಿನ ಜಿ.ಎಸ್.ಟಿ ರದ್ದುಪಡಿಸಬೇಕು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲಿನ ಕೇಂದ್ರೀಯ ತೆರಿಗೆಯನ್ನು ಗಣನೀಯವಾಗಿ ಇಳಿಕೆ ಮಾಡಬೇಕು ಎಂದು ಪ್ರಮುಖರು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ದುಡಿಯುವ ಜನರ ಪ್ರಮುಖ 24 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿನಲ್ಲಿ 72 ಗಂಟೆಗಳ ಮಹಾಧರಣಿ ನಡೆಯಲಿದ್ದು, ಅದರ ಪ್ರಚಾರ ಆಂದೋಲನವನ್ನು ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆಸಲಾಗುತ್ತಿದೆ ಎಂದರು.ಕಾರ್ಪೋರೇಟ್ ತೆರಿಗೆಗಳನ್ನು ಕಡಿತ ಮಾಡುತ್ತಿರುವ ಕೇಂದ್ರ ಸರ್ಕಾರ, ಸಾಮಾನ್ಯ ಜನತೆಯ ಮೇಲೆ ಜಿಎಸ್‌ಟಿ ಹೊರೆ ವಿಧಿಸಿ, ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಬಹುತೇಕ ಸಾರ್ವಜನಿಕ ಸೇವೆಗಳ ಬಳಕೆಗೆ ಹೆಚ್ಚಿನ ತೆರಿಗೆ ವಿಧಿಸಿರುವುದರಿಂದ ಎಲ್ಲ ಅಗತ್ಯ ಸರಕುಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗುತ್ತಿದ್ದು, ಜನತೆ ತತ್ತರಿಸುವಂತಾಗಿದೆ ಎಂದು ದೂರಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಮಾತನಾಡಿ, ಸಿದ್ದಾಪುರದಲ್ಲಿ ಪ್ರಾರಂಭಗೊಂಡ ಪ್ರಚಾರ ಜಾಥಾ ಮೂರು ದಿನ ಜಿಲ್ಲಾದ್ಯಂತ ಸಂಚರಿಸಿ ಮಡಿಕೇರಿಯಲ್ಲಿ ಕೊನೆಗೊಳ್ಳಲಿದೆ. ನಂತರ ನ.25 ರಂದು ಜಿಲ್ಲೆಯಿಂದ ಸಾವಿರಾರು ಮಂದಿ ಬೆಂಗಳೂರಿಗೆ ತೆರಳಿ ಮಹಾಧರಣಿಯಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ತಿಳಿಸಿದರು.ಸಿಐಟಿಯು ಜಿಲ್ಲಾ ಖಜಾಂಚಿ ಎನ್.ಡಿ.ಕುಟ್ಟಪ್ಪನ್, ಉಪಾಧ್ಯಕ್ಷರಾದ ಎಚ್.ಪಿ.ರಮೇಶ್, ಸಾಜಿ ರಮೇಶ್, ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ ಮತ್ತಿತರ ಸಾಮಾಜಿಕ ಸಂಘಟನೆಗಳ ಮುಖಂಡರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಹಕ್ಕೊತ್ತಾಯಗಳು:ರೈತರ ಉತ್ಪನ್ನಗಳಿಗೆ ಎಂ.ಎಸ್.ಸ್ವಾಮಿನಾಥನ್ ಶಿಫಾರಸ್ಸಿನಂತೆ ಕನಿಷ್ಠ ಬೆಂಬಲ ಹಾಗೂ ಖರೀದಿ ಖಾತ್ರಿ ಒದಗಿಸುವ ಶಾಸನ ಜಾರಿ ಮಾಡಬೇಕು, ರೈತರಿಗೆ ನೀಡುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ವಿದ್ಯುತ್‌ಚ್ಛಕ್ತಿ ಮೇಲಿನ ಸಬ್ಸಿಡಿ ಮೊತ್ತ ಹೆಚ್ಚಳ ಮಾಡಬೇಕು, ರೈತರ ಆತ್ಮಹತ್ಯೆ ತಡೆಯಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು, ಕನಿಷ್ಟ ವೇತನ ಮಾಸಿಕ 26,000 ರು. ನಿಗದಿ ಮಾಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ, ಖಾಯಂ ಸ್ವರೂಪದ ಕೆಲಸದಲ್ಲಿ ತೊಡಗುವ ಕಾರ್ಮಿಕರ ಖಾಯಂಗೆ ಶಾಸನ ರೂಪಿಸಬೇಕು, ನಾಲ್ಕು ಕಾರ್ಮಿಕ ಸಂಹಿತೆಗಳನ್ನು, ಎಫ್‌ಟಿಇ ಪದ್ಧತಿಯನ್ನು ಹಾಗೂ ಕೆಲಸದ ಅವಧಿಯ ಹೆಚ್ಚಳವನ್ನು ರದ್ದುಪಡಿಸಬೇಕು, ಕಾರ್ಪೊರೇಟ್ ಪರವಾದ ಪಿಎಂ ಫಸಲ್ ಭೀಮಾ ಯೋಜನೆಯನ್ನು ರದ್ದುಪಡಿಸಿ, ಎಲ್ಲಾ ಬೆಳೆಗಳಿಗೂ ವಿಮೆ ಒದಗಿಸುವ ಸಮಗ್ರ ಸಾರ್ವಜನಿಕ ವಿಮಾ ಯೋಜನೆ ಜಾರಿ ಹಾಗೂ ಸಮಗ್ರ ಸಾಲ ಮನ್ನಾ ಯೋಜನೆ ಜಾರಿಗೆ ತರಬೇಕು, ಐತಿಹಾಸಿಕ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ನೀಡಿದ್ದ ಲಿಖಿತ ಭರವಸೆಗಳನ್ನು ಜಾರಿ ಮಾಡಬೇಕು, ಹುತಾತ್ಮ ರೈತರ ಸ್ಮಾರಕ ನಿರ್ಮಿಸಲು ಜಾಗ, ಅವರ ಕುಟುಂಬಕ್ಕೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕು, ಹೋರಾಟ ಸಂದರ್ಭದಲ್ಲಿ ರೈತರ ಮೇಲೆ ಹಾಕಿರುವ ಎಲ್ಲಾ ಪೋಲಿಸ್ ಕೇಸ್‌ಗಳನ್ನು ವಾಪಾಸ್ಸು ಪಡೆಯಬೇಕು.
ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಬೇಕು. ಖಾಲಿಯಿರುವ ಎಲ್ಲಾ ಉದ್ಯೋಗಗಳನ್ನು ಭರ್ತಿ ಮಾಡಬೇಕು, ನಿರುದ್ಯೋಗಿ ಯುವಜನತೆಗೆ ಕೆಲಸ ಒದಗಿಸಲು, ಉದ್ಯೋಗ ಸೃಷ್ಟಿಸಲು ಸಾರ್ವಜನಿಕ ಹೂಡಿಕೆ ಹೆಚ್ಚಿಸಬೇಕು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿ ಕೆಲಸ ದಿನಗಳನ್ನು 200 ದಿನಕ್ಕೆ ವಿಸ್ತರಿಸಿ, ರೂ.600 ಕೂಲಿ ನಿಗದಿ ಮಾಡಬೇಕು. ಗೃಹ ಆಧಾರಿತ ಕಾರ್ಮಿಕರಿಗೆ ಐಎಲ್‌ಒ ಸಮ್ಮೇಳನ ಶಿಫಾರಸ್ಸುಗಳ ಖಾತ್ರಿಗೆ ಸೂಕ್ತ ಕಾನೂನು ರಚಿಸಬೇಕು, ಅಂತರ್ ರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ನಿಯಂತ್ರಣ) ಕಾಯ್ದೆ 1979ನ್ನು ಸಾಮಾಜಿಕ ಸುರಕ್ಷತಾ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಬಲಪಡಿಸಬೇಕು.ಭಾರತೀಯ ಕಾರ್ಮಿಕ ಸಮ್ಮೇಳನವನ್ನು ನಿಯಮಿತವಾಗಿ ಆಯೋಜಿಸಬೇಕು, ಅದರ ನಿರ್ಣಯಗಳನ್ನು ಸರ್ಕಾರಗಳು ಜಾರಿ ಮಾಡಬೇಕು, ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಿ, ಹಳೇ ಯೋಜನೆ ಜಾರಿ ಮಾಡಬೇಕು. ಬೆಲೆ ಏರಿಕೆ ನಿಯಂತ್ರಿಸಬೇಕು. ಅಗತ್ಯ ವಸ್ತುಗ ಮೇಲಿನ ಜಿ.ಎಸ್ ರದ್ದುಪಡಿಸಬೇಕು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲಿನ ಕೇಂದ್ರೀಯ ತೆರಿಗೆಯನ್ನು ಗಣನೀಯವಾಗಿ ಇಳಿಕೆ ಮಾಡಬೇಕು, ಕೋವಿಡ್ ನೆಪದಲ್ಲಿ ಹಿರಿಯ ನಾಗರೀಕರು, ಮಹಿಳೆಯರು, ಅಂಗವಿಕಲರು, ಕ್ರೀಡಾಪಟುಗಳಿಗೆ ರದ್ದುಪಡಿಸಿದ್ದ ರೈಲ್ವೆ ಪ್ರಯಾಣ ರಿಯಾತಿಯನ್ನು ಪುನರ್ ಸ್ಥಾಪಿಸಬೇಕು, ರೈಲ್ವೆ ಖಾಸಗೀಕರಣ ನಿಲ್ಲಿಸಬೇಕು, ಆಹಾರ ಭದ್ರತೆ, ಪೋಷಕಾಂಶ ಸುರಕ್ಷತೆಯನ್ನು ಖಾತರಿಪಡಿಸಬೇಕು, ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೊಳಿಸಬೇಕು, ಜೀವನಾವಶ್ಯಕ ಅಗತ್ಯ ವಸ್ತುಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ವಿತರಿಸಬೇಕು, ನೇರ ನಗದು ವರ್ಗಾವಣೆ ರದ್ದುಪಡಿಸಬೇಕು. ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ, ಉಚಿತ ನೀರು ಮತ್ತು ನೈರ್ಮಲ್ಯವನ್ನು ಮೂಲಭೂತ ಹಕ್ಕಾಗಿ ಒದಗಿಸಬೇಕು, ಜನ ವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ ರದ್ದಾಗಬೇಕು. ಪ್ರತಿಯೊಬ್ಬರಿಗೂ ವಸತಿ ಹಕ್ಕು ಖಾತ್ರಿಪಡಿಸಬೇಕು, ಬಲವಂತದ ಭೂ ಸ್ವಾಧೀನ ನಿಲ್ಲಿಸಬೇಕು
ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಒತ್ತಾಯಿಸಿದೆ.