ಸಾರಾಂಶ
63 ಕನ್ನಡ ಭಾಷೆ, 2 ಮೂಕಿ ಚಿತ್ರ, 1 ಕೊಡವ, 1 ಹಿಂದಿ, 4 ತಮಿಳು ಹಾಗೂ 1 ಲಂಬಾಣಿ ಭಾಷೆಯ ಕಿರುಚಿತ್ರಗಳು ಬಂದಿರುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಚಲನಚಿತ್ರೋತ್ಸವ 2024ರ ಅಂಗವಾಗಿ ಕಿರುಚಿತ್ರಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸಂಬಂಧವಾಗಿ ಕಿರುಚಿತ್ರ ಸ್ಪರ್ಧೆಗೆ ಬಂತಂಹ 72 ಕಿರುಚಿತ್ರಗಳನ್ನು ಚಲನಚಿತ್ರ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವವರು ಉತ್ತಮ ಕಿರುಚಿತ್ರಗಳ ಆಯ್ಕೆ ಸಂಬಂಧ ಸೋಮವಾರ ವೀಕ್ಷಿಸಿದರು.ಈ ಬಾರಿಯ ದಸರಾ ಚಲನಚಿತ್ರೋತ್ಸವದಲ್ಲಿ ಕಿರುಚಿತ್ರ ತಯಾರಿಕೆ ಸ್ಪರ್ಧೆ ಸೇರಿದಂತೆ ಹಲವು ವಿಶೇಷತೆಗಳನ್ನು ನೀಡಲು ಚಲನಚಿತ್ರೋತ್ಸವ ಉಪ ಸಮಿತಿ ಸಿದ್ಧತೆ ನಡೆಸಿದ್ದು, ತೀರ್ಪುಗಾರರಿಂದ ಆಯ್ಕೆಯಾದ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಅತ್ಯುತ್ತಮ ಕಿರುಚಿತ್ರಗಳನ್ನು ಐನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗುವುದು. ಕಿರುಚಿತ್ರಗಳ ಸ್ಪರ್ಧೆಗೆ 63 ಕನ್ನಡ ಭಾಷೆ, 2 ಮೂಕಿ ಚಿತ್ರ, 1 ಕೊಡವ, 1 ಹಿಂದಿ, 4 ತಮಿಳು ಹಾಗೂ 1 ಲಂಬಾಣಿ ಭಾಷೆಯ ಕಿರುಚಿತ್ರಗಳು ಬಂದಿರುತ್ತದೆ. ಕಿರುಚಿತ್ರ ಸ್ಪರ್ಧೆಗೆ ಬಂದಂತಹ ಕಿರುಚಿತ್ರಗಳ ಆಯ್ಕೆ ಸಂಬಂಧ ತೀರ್ಪುಗಾರರಾಗಿ ರಂಗಭೂಮಿ ಹಾಗೂ ಚಲನಚಿತ್ರ ನಟ ಅರವಿಂದ್ ಜಾಧವ್, ಹಿರಿಯ ಚಲನಚಿತ್ರ ಛಾಯಾಗ್ರಹಕ ಹಾಗೂ ನಿರ್ದೇಶಕ ಜನಾರ್ಧನ್, ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್. ಸಪ್ನಾ, ಛಾಯಾಗ್ರಾಹಕ, ನಟ ಕೆ.ಜೆ. ಪವನ್ ಅವರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ದಸರಾ ಚಲನಚಿತ್ರೋತ್ಸವ ಉಪ ವಿಶೇಷಾಧಿಕಾರಿಯಾದ ಡಿಸಿಎಫ್ ಡಾ.ಕೆ.ಎನ್. ಬಸವರಾಜ, ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಸಮಿತಿಯ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್, ಚಲನಚಿತ್ರೋತ್ಸವದ ಸಹ ಸಂಯೋಜಕ ಶ್ರೇಯಸ್ ಇದ್ದರು.