ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಭಾನುವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಡೆಯಿತು. ದಕ್ಷಿಣ ಕನ್ನಡ- ಕೊಡಗು ಗಡಿ ಸಂಪಾಜೆಯಿಂದ ಬೈಕ್ ಜಾಥಾ ಆರಂಭಗೊಂಡು ಕೊಡಗು- ಹಾಸನ ಗಡಿ ಭಾಗದ 73 ಕಿ.ಮೀ ವರೆಗೆ ಮಾನವ ಸರಪಳಿ ನಡೆಯಿತು. ಕೊಡಗು ಜಿಲ್ಲೆಯಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರ ಮಂದಿ ಪಾಲ್ಗೊಂಡರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಕೊಡಗು ಜಿಲ್ಲೆ ವತಿಯಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ನೇತೃತ್ವದಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಗಳನ್ನು ಸ್ಮರಿಸುವ ಮೂಲಕ ನಮನಗಳನ್ನು ಸಲ್ಲಿಸಲಾಯಿತು.
ಸಂವಿಧಾನದ ಆಶಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರಜಾಪ್ರಭುತ್ವ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕೆಂದು ಈ ಸಂದರ್ಭದಲ್ಲಿ ಸಂದೇಶ ನೀಡಲಾಯಿತು.ಅಧಿಕಾರಿಗಳು, ಮುಖಂಡರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದ್ದರು.
ಉಸ್ತುವಾರಿ ಸಚಿವ ಬೋಸರಾಜು ಮಾತನಾಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಮೂಲಕ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಾತಿ, ಧರ್ಮದ ಬೇಧವಿಲ್ಲದೆ ಎಲ್ಲರೂ ಒಗಟ್ಟಿನಿಂದ ಬದುಕುವಂತೆ ಅವರು ಕರೆ ನೀಡಿದರು.ಇಡೀ ರಾಜ್ಯದಲ್ಲಿ ಏಕಕಾಲದಲ್ಲಿಪ ಪ್ರಜಾಪ್ರಭುತ್ವ ದಿವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲೂ ಸುಮಾರು 73 ಕಿ.ಮೀ ವರೆಗೆ ಮಾನವ ಸರಪಳಿ ಕಾರ್ಯಕ್ರಮ ನಡೆಸಲಾಗಿದೆ. ಸುಮಾರು 30 ಸಾವಿರ ಮಂದಿ ಪಾಲ್ಗೊಂಡಿದ್ದಾರೆ. ಅರಣ್ಯ ಇಲಾಖೆಯಿಂದ ಸುಮಾರು 5 ಸಾವಿರ ಗಿಡಗಳನ್ನು ನೆಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ ಪ್ರಜಾಪ್ರಭುತ್ವದಡಿಯಲ್ಲಿ ಯಶಸ್ವಿಯಾದ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿರುವ ಸಮಾನತೆ ಹಾಗೂ ಸ್ವಾತಂತ್ರ್ಯವಾಗಿ ಜೀವಿಸಲು ಇರುವ ಹಕ್ಕನ್ನು ಮರೆಯಬಾರದು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಆಧಾರವನ್ನು ಪಾಲಿಸಿಕೊಂಡು ಹೋಗಬೇಕೆಂದು ಕರೆ ನೀಡಿದರು.ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಯಾರೂ ಕೂಡ ಮರೆಯಲು ಸಾಧ್ಯವಿಲ್ಲ. ದೇಶದಲ್ಲಿರುವ ಎಲ್ಲ ಜನರಿಗೆ ಮತದಾನದ ಅವಕಾಶ ನೀಡುವ ಮೂಲಕ ಸಮಾನತೆ ಕಲ್ಪಿಸಲಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಸ್ವಾತಂತ್ರ್ಯ ಬಂದ ಎಷ್ಟೋ ದೇಶಗಳಲ್ಲಿ ಇಂದಿಗೂ ಸಮಾನತೆ ಬಂದಿಲ್ಲ. ಆದರೆ ಭಾರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಂದಾಗಿ ಎಲ್ಲರಿಗೂ ಮತದಾನದ ಹಕ್ಕು ದೊರಕಿದೆ. ಇದರಿಂದ ದೇಶದಲ್ಲಿ ಎಲ್ಲರಿಗೂ ಸಮಾನತೆಯಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರನ್ನೂ ಸಮಾಜದ ಮುಖ್ಯ ವಾಹಿನಿಗೆ ತರಲು ಅವಕಾಶವಿದೆ ಎಂದು ತಿಳಿಸಿದರು.ವೇದಿಕೆಯಲ್ಲಿ ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಹಸ್ತಾಂತರಿಸಲಾಯಿತು. ಅಪರ ಜಿಲ್ಲಾಧಿಕಾರಿ ಐಶ್ವರ್ಯ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಬೈಕ್ ಜಾಥಾ: ಭಾನುವಾರ ಬೆಳಗ್ಗೆ ಪೊಲೀಸ್ ಇಲಾಖೆಯಿಂದ ಆರಂಭವಾದ ಬೈಕ್ ಜಾಥಾ ಮಡಿಕೇರಿ ತಲುಪಿತು. ಪೊಲೀಸ್ ಇಲಾಖೆ ಹಾಗೂ ತಹಶೀಲ್ದಾರರಿಂದ ಪ್ರಜಾಪ್ರಭುತ್ವ ದಿನದ ಧ್ವಜವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಎಸ್ ಭೋಸರಾಜು ಅವರಿಗೆ ಹಸ್ತಾಂತರಿಸಲಾಯಿತು. ನಗರದ ಸುದರ್ಶನ ವೃತ್ತದಲ್ಲಿ ಸಚಿವರು ಸೇರಿದಂತೆ ಶಾಸಕರು, ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ ನಮ್ಮ ದೇಶ ನಮ್ಮ ಹೆಮ್ಮೆ ಎಂದು ಸಂದೇಶ ಸಾರಿದರು.
ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಚೈನ್ ಗೇಟ್ ವರೆಗೆ ವಿದ್ಯಾರ್ಥಿಗಳಿಂದ ಮಾನವ ಸರಪಳಿ ಕಂಡುಬಂತು. ನಗರದ ಜೂನಿಯರ್ ಕಾಲೇಜು ವಿದ್ಯಾರ್ಥಿಗಳು ವಿವಿಧ ನಾಯಕರ ವೇಷ ಧರಿಸಿ ಗಮನ ಸೆಳೆದರು. ಬಸವನಹಳ್ಳಿ ಆಶ್ರಮ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಬ್ಯಾಂಡ್ ಇತ್ತು. ಶಿವಮೊಗ್ಗದ ಜ್ಯೋತಿ ಬಂಜಾರ ಕಲಾತಂಡದಿಂದ ಲಂಬಾಣಿ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳಿಂದ ವಿವಿಧ ಕಲಾ ಪ್ರಕಾರಗಳು ಮಾನವ ಸರಪಳಿಯಲ್ಲಿ ಭಾಗಿಯಾದವು.