ಸಾರಾಂಶ
ಚಿಕ್ಕಪ್ಪನಹಳ್ಳಿ ಷಣ್ಮುಖ
ಚಿತ್ರದುರ್ಗ : ಲಿಂಗನಮಕ್ಕಿ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆ ನಂತರ ಸಮುದ್ರಕ್ಕೆ ಹರಿದು ಹೋಗುವ ಸುಮಾರು 40 ಟಿಎಂಸಿ ನೀರನ್ನು ಬಳಸಿಕೊಂಡು ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಸರ್ಕಾರ ಮುಂದಾಗಿದೆ. ಈ ಸಂಬಂಧ ಸಮೀಕ್ಷೆ ನಡೆಸಿ ಕಾರ್ಯಸಾಧು (ಫೀಸಿಬಿಲಿಟಿ) ವರದಿ ಪಡೆಯಲು ವಿಶ್ವೇಶ್ವರಯ್ಯ ಜಲ ನಿಗಮ ಟೆಂಡರ್ ಕರೆದಿದ್ದು, ಬೆಂಗಳೂರಿನ ಈಐ ಟೆಕ್ನೋಲಾಜಿಸ್ ಪ್ರೆವೇಟ್ ಕಂಪನಿ, 73 ಲಕ್ಷಕ್ಕೆ ಟೆಂಡರ್ ಪಡೆದು ಸಮೀಕ್ಷೆಗೆ ಮುಂದಾಗಿದೆ.
ಬೆಂಗಳೂರು ಸೇರಿ ರಾಜ್ಯದ ಮಧ್ಯ ಕರ್ನಾಟಕ ಹಾಗೂ ಪೂರ್ವ ಭಾಗದ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವುದು ಹಾಗೂ ಈ ಭಾಗದ ಕೆರೆಗಳ ಭರ್ತಿಗೆ ಈ ನೀರನ್ನು ಬಳಕೆ ಮಾಡಿಕೊಳ್ಳುವುದು ಈ ಯೋಜನೆಯ ಉದ್ದೇಶ. ಯಾವುದೇ ಜಲ ವಿವಾದಗಳಿಲ್ಲದ, ಪಶ್ಚಿಮಾಭಿಮುಖವಾಗಿ ಹರಿಯುವ ಶರಾವತಿ ನದಿಯ ನೀರನ್ನು ಬಳಸಿಕೊಳ್ಳುವುದು, ಶರಾವತಿ ಜಲವಿದ್ಯುತ್ ಯೋಜನೆಗೆ ತೊಂದರೆಯಾಗದಂತೆ, ಸಮುದ್ರಕ್ಕೆ ಹರಿದು ಹೋಗುವ ಹೆಚ್ಚುವರಿ ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳುವುದು ಸರ್ಕಾರದ ಉದ್ದೇಶ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟಿ, ವರ್ಷವಿಡಿ ಎಲ್ಲ ಕಾಲದಲ್ಲಿಯೂ ಹರಿಯುವ ನದಿ ಶರಾವತಿ. ಈ ಮಧ್ಯೆ, ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ಭವಿಷ್ಯದಲ್ಲಿ ಸಾಕಾಗುವಷ್ಟು ಕಾವೇರಿ ನೀರನ್ನು ಪೂರೈಸುವುದು ಕಷ್ಟ. ಹೀಗಾಗಿ, ಮಧ್ಯ ಕರ್ನಾಟಕದ ಬಯಲು ಸೀಮೆಯ ಪ್ರದೇಶಗಳಿಗೆ ನೀರುಣಿಸುವ ಎರಡು ಮಹತ್ವದ ಭದ್ರಾ ಮೇಲ್ಡಂಡೆ ಹಾಗೂ ಎತ್ತಿನಹೊಳೆ ಯೋಜನೆಗೆ ಹಾಲಿ ಸೃಜಿಸಲಾಗಿರುವ ಜಾಲಗಳನ್ನು ಬಳಸಿಕೊಂಡೇ ಶರಾವತಿ ಯೋಜನೆ ಜಾರಿಗೊಳಿಸುವ ಉದ್ದೇಶ ಸರ್ಕಾರಕ್ಕಿದೆ. ಇದರಿಂದ ಹೆಚ್ಚು ವೆಚ್ಚ ಕೂಡಾ ತಗಲುವುದಿಲ್ಲ. ಮುಂಗಾರು ಹಂಗಾಮಿನ ನಂತರ ಕಾಲುವೆಗಳ ಮೂಲಕ ನೀರು ಸಂಗ್ರಹ ಮಾಡುವುದು ಉದ್ದೇಶ.
ನೀರನ್ನು ತರುವುದು ಹೇಗೆ?:
ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಿಂದ ಮಾವಳ್ಳಿ ಗ್ರಾಮದ ಹತ್ತಿರ (ಆರ್ ಎಲ್ 522 ಮೀ) ಪಂಪ್ ಹೌಸ್ ನಿರ್ಮಿಸಿ, 98 ಅಡಿ ನೀರನ್ನು ಮೇಲಕ್ಕೆ ಎತ್ತಲಾಗುವುದು (ಆರ್ ಎಲ್ 630). ಅಲ್ಲಿಂದ 24 ಕಿ.ಮೀ.ರೇಸಿಂಗ್ ಮೇನ್ ಮೂಲಕ ಗುರುತ್ವಾಕರ್ಷಣೆಯಲ್ಲಿ ಶಂಕದ ಹೊಳೆ ಸಂಪರ್ಕಿಸುವ ಕಣಿವೆ ಮುಖಾಂತರ ತೀರ್ಥಹಳ್ಳಿ ಸಮೀಪದ ತುಂಗಾ ನದಿಗೆ ನೀರನ್ನು ಬಿಡಲಾಗುವುದು. ಇದಕ್ಕಾಗಿ 5 ಕಿ.ಮೀ.ನಷ್ಟು ಸುರಂಗ ಮಾರ್ಗದ ಅಗತ್ಯತೆಯನ್ನು ಪ್ರತಿಪಾದಿಸಲಾಗಿದೆ. ತುಂಗಾದಿಂದ, ಭದ್ರಾವರೆಗೆ ಈಗಾಗಲೇ ಭದ್ರಾ ಮೇಲ್ದಂಡೆ ನೆಟ್ ವರ್ಕ್ ಇದೆ. ಅಲ್ಲಿಂದ ಹಿರಿಯೂರು ತಾಲೂಕಿನ ವಿವಿ ಸಾಗರದವರೆಗೂ ಕಾಲುವೆ ಮೂಲಕ ನೀರು ಹರಿದು ಬಂದು, ವಿವಿ ಸಾಗರದಲ್ಲಿ ನೀರು ಸಂಗ್ರಹವಾಗಲಿದೆ.
ಬಳಿಕ, ಭದ್ರಾ ಮೇಲ್ದಂಡೆಯ ತುಮಕೂರು ಶಾಖಾ ಕಾಲುವೆ (47 ಕಿ.ಮೀ.)ಗೆ ನೀರನ್ನು ಲಿಫ್ಟ್ ಮಾಡಲಾಗುವುದು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪದ ಬೋರನಕಣಿವೆ ಡ್ಯಾಂಗೆ ಲಿಫ್ಟ್ ಮಾಡಿ, ತಾಲೂಕಿನ ತಿಮ್ಮನಹಳ್ಳಿ-ದಾಬಸ್‌ಪೇಟೆ ಮೂಲಕ ಅರ್ಕಾವತಿ ನದಿಯ ಹೆಸರಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ತುಂಬಿಸಲಾಗುತ್ತದೆ. ಅಲ್ಲಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶ ಯೋಜನೆಯಲ್ಲಿದೆ.
ಇದೇ ವೇಳೆ, ಭದ್ರಾ ಮೇಲ್ದಂಡೆಯ ತುಮಕೂರು ಶಾಖಾ ಕಾಲುವೆ ಮೂಲಕ ಅರಸೀಕೆರೆ ತಾಲೂಕಿನ ಎತ್ತಿನಹೊಳೆ ಗುರುತ್ವಾ ಕಾಲುವೆಗೂ ನೀರು ಬಿಡಲಾಗುವುದು. ಈಗಾಗಲೇ ನೇತ್ರಾವತಿ ಜಲಾನಯನ ಪ್ರದೇಶದಲ್ಲಿ ಸಮುದ್ರ ಸೇರುವ 10 ಟಿಎಂಸಿ ನೀರನ್ನು ಕೆಂಪುಹೊಳೆಯಿಂದ ಮೇಲೆತ್ತಿ, ಎತ್ತಿನಹೊಳೆ ಜಾಲಕ್ಕೆ ಬಿಡಲು ಚಿಂತಿಸಲಾಗಿದೆ. ಕುಮಾರಧಾರಾ ನದಿಯಿಂದ 5 ಟಿಎಂಸಿ ನೀರನ್ನು ಮೇಲೆತ್ತಿ, ಹೊಂಗದ ಹಳ್ಳ ಮೂಲಕ ಎತ್ತಿನಹೊಳೆ ಯೋಜನೆಗೆ ಸೇರ್ಪಡೆ ಮಾಡಲಾಗುತ್ತಿದೆ.
ನಾಲ್ಕೈದು ಸುರಂಗ, 8 ಕಡೆ ಪಂಪ್ ಹೌಸ್:
40 ಟಿಎಂಸಿ ನೀರನ್ನು ಬಳಸಿಕೊಳ್ಳಲು ನಾಲ್ಕೆದು ಸುರಂಗ ಮಾರ್ಗ ಹಾಗೂ ಎಂಟು ಕಡೆ ಲಿಫ್ಟ್ ಮಾಡಲು ಪಂಪ್ ಹೌಸ್ ನಿರ್ಮಿಸುವುದು ಅನಿವಾರ್ಯ. ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಯೋಜನೆ ಜಾರಿಗೆ ಕಾರ್ಯಸಾಧು ವರದಿ (ಫೀಸಿಬಿಲಿಟಿ ರಿಪೋರ್ಟ್) ಕೇಳಿದ್ದಾರೆ. ಸಾಧುವೆಂದಾದಲ್ಲಿ ಕುಡಿಯುವ ನೀರಿನ ಬೃಹತ್ ಜಾಲವೊಂದು ಇಡೀ ಮಧ್ಯ ಕರ್ನಾಟಕ ಹಾಗೂ ರಾಜ್ಯದ ಪೂರ್ವ ಜಿಲ್ಲೆಗಳಲ್ಲಿ ಪಸರಿಸಲಿದೆ. ಬೆಂಗಳೂರಿಗೆ ಕುಡಿವ ನೀರು ಪೂರೈಕೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿರುವ ವಿವಿ ಸಾಗರ ಜಲಾಶಯ ತೊಟ್ಟಿಯಾಗಿ ಬಳಕೆಯಾಗುವುದರಿಂದ, ವರ್ಷವಿಡೀ ಇಲ್ಲಿ ನೀರು ತುಂಬಿರುತ್ತದೆ. ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಬರುವ ತುಂಗಾ, ಹಾಗೂ ಭದ್ರಾ ಜಲಾಶಯಗಳೂ ಸದಾ ತುಂಬಿರಲಿವೆ.