ಮೇಲುಕೋಟೆ ದೇಗುಲಕ್ಕೆ 75 ಲಕ್ಷ ರು. ಮೌಲ್ಯದ ಚಿನ್ನಾಭರಣ ನೀಡಿದ ಮೈಸೂರಿನ ಭಕ್ತೆ..!

| Published : Jul 10 2024, 12:35 AM IST

ಮೇಲುಕೋಟೆ ದೇಗುಲಕ್ಕೆ 75 ಲಕ್ಷ ರು. ಮೌಲ್ಯದ ಚಿನ್ನಾಭರಣ ನೀಡಿದ ಮೈಸೂರಿನ ಭಕ್ತೆ..!
Share this Article
  • FB
  • TW
  • Linkdin
  • Email

ಸಾರಾಂಶ

ಚೆಲುವನಾರಾಯಣಸ್ವಾಮಿ ಭಕ್ತೆಯಾದ ವಯೋವೃದ್ಧ ಡಾ.ಲಕ್ಮಮ್ಮ ಮನೆಯಲ್ಲಿ ಬಳಸಿದ ಚಿನ್ನ ಮತ್ತು ಬೆಳ್ಳಿ ಎರಡು ಟ್ರಂಕ್‌ನಲ್ಲಿ ತುಂಬಿದ ಆಭರಣವನ್ನು ದೇವಾಲಯದ ಇಒ ಮಹೇಶ್‌ಗೆ ಹಸ್ತಾಂತರ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಮೈಸೂರು ಕುವೆಂಪುನಗರದ ನಿವಾಸಿ ಡಾ.ಲಕ್ಷಮ್ಮ ಎಂಬ ಭಕ್ತರು ಸುಮಾರು 75 ಲಕ್ಷ ರು. ಮೌಲ್ಯದ ಚಿನ್ನಾಭರಣ ನೀಡಿದ್ದಾರೆ.

ಚೆಲುವನಾರಾಯಣಸ್ವಾಮಿ ಭಕ್ತೆಯಾದ ವಯೋವೃದ್ಧ ಡಾ.ಲಕ್ಮಮ್ಮ ಮನೆಯಲ್ಲಿ ಬಳಸಿದ ಚಿನ್ನ ಮತ್ತು ಬೆಳ್ಳಿ ಎರಡು ಟ್ರಂಕ್‌ನಲ್ಲಿ ತುಂಬಿದ ಆಭರಣವನ್ನು ದೇವಾಲಯದ ಇಒ ಮಹೇಶ್‌ಗೆ ಹಸ್ತಾಂತರ ಮಾಡಿದ್ದಾರೆ.

ಸ್ಥಳೀಯ ಅಕ್ಕಸಾಲಿಗರನ್ನು ಕರೆಸಿದ ಕಾರ್ಯನಿರ್ವಾಹಕ ಅಧಿಕಾರಿ ಚಿನ್ನ ಮತ್ತು ಬೆಳ್ಳಿಯ ಮೌಲ್ಯಮಾಪನ ಮಾಡಿಸಿದ್ದಾರೆ. ದೀಪದ ಕಂಬ, ಚೊಂಬು, ಆರತಿ ತಟ್ಟೆ, ಸೇರಿದಂತೆ ಅಂದಾಜು 25 ಕೆ.ಜಿ ಬೆಳ್ಳಿ, ಬಂಗಾರದ ಬಳೆ ಸರ ಸೇರಿದಂತೆ 250 ಗ್ರಾಂ ಬಂಗಾರದ ಆಭರಣಗಳನ್ನು ತೂಕದ ಮೂಲಕ ಲೆಕ್ಕಾಚಾರ ಮಾಡಿ ಟ್ರಂಕ್‌ನಲ್ಲಿ ಇರಿಸಿ ದೇವಾಲಯದ ಕಚೇರಿಯಲ್ಲಿ ಡಿಸಿ ಭದ್ರ ಮಾಡಿದ್ದಾರೆ. ಚೆಲುವನಾರಾಯಣ ಭಕ್ತೆ ವಯೋವೃದ್ಧರಾಗಿದ್ದು ಆಭರಣಗಳು ಅನ್ಯರ ಪಾಲಾಗುವ ಬದಲು ದೇವಾಲಯಕ್ಕೆ ಸೇರಲಿ ಎಂಬ ಆಶಯದಿಂದ ಸಮರ್ಪಿಸಿದ್ದೇನೆ ಎಂದಿದ್ದಾರೆ.

ಭಕ್ತರು ದೇವಾಲಯಕ್ಕೆ ನೀಡಿದ ಲಕ್ಷಾಂತರ ರು. ಮೌಲ್ಯದ ಆಭರಣಗಳನ್ನು ಬೊಕ್ಕಸದ ವಹಿಯಲ್ಲಿ ದಾಖಲಿಸಿ ಬೊಕ್ಕಸದಲ್ಲಿ ಇಡಬೇಕಿದ್ದರೂ ಕೀ ಮತ್ತು ಬೊಕ್ಕಸದ ವಹಿ ಇಟ್ಟುಕೊಂಡಿದ್ದ ದೇವಾಲಯ ಪ್ರಥಮ ದರ್ಜೆ ಸಹಾಯಕ ಪ್ರಕಾಶ್ ಉಡಾಫೆ ಮಾಡಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಆಭರಣಗಳನ್ನು ಎರಡು ದಿನ ನಿಯಮ ಉಲ್ಲಂಘಿಸಿ ಕಚೇರಿಯಲ್ಲೇ ಇಡುವಂತಾಗಿದೆ.

ಡಾ.ಲಕ್ಷಮ್ಮ ಸೋಮವಾರ ಮಧ್ಯಾಹ್ನ ಆಭರಣ ನೀಡಿದ ನಂತರ ಮೌಲ್ಯಮಾಪನ ಮಾಡಿ ಸಾಮಗ್ರವಾಗಿ ಆಭರಣಗಳ ವಿವರವನ್ನು ಬೊಕ್ಕಸದವಹಿಯಲ್ಲಿ ದಾಖಲಿಸಿ ಸ್ಥಾನೀಕರು ಅರ್ಚಕ ಪರಿಚಾರಕರ ಸಮಕ್ಷಮ ಪರಿಶೀಲಿಸಿ ದೇವಾಲಯದ ಬೊಕ್ಕಸದಲ್ಲಿಟ್ಟು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕಾಗಿತ್ತು.

ಆದರೆ, ಸೋಮವಾರ ಮಧ್ಯಾಹ್ನ 3 ಗಂಟೆಗೆ ಪ್ರಥಮದರ್ಜೆ ಸಹಾಯಕ ಮನೆಗೆ ತೆರಳಿದ ಕಾರಣ ಈ ಕಾರ್ಯ ಆಗಲಿಲ್ಲ. ಮಂಗಳವಾರವೂ ಸಹ ಪ್ರಕಾಶ್ ಕರ್ತವ್ಯಕ್ಕೆ ಹಾಜರಾಗದ ಕಾರಣ ಲಕ್ಷಾಂತ ರು. ಮೌಲ್ಯದ ಆಭರಣಗಳು ಕಚೇರಿಯಲ್ಲೇ ಉಳಿಯುವಂತಾಗಿ ಭದ್ರತಾ ನಿಯಮ ಉಲ್ಲಂಘನೆಯಾಗಿದೆ.

ಪ್ರಥಮ ದರ್ಜೆ ಸಹಾಯಕ ದೇವಾಲಯದ ಕರ್ತವ್ಯಕ್ಕೆ ಕುಡಿದು ಹಾಜರಾಗುತ್ತಿದ್ದಾರೆ. ಈ ನೌಕರನನ್ನು ತಕ್ಷಣ ಜಿಲ್ಲಾಧಿಕಾರಿಗಳು ಬೇರೆಡೆ ವರ್ಗಾಯಿಸಿ ದೇವಾಲಯದ ಪಾವಿತ್ರತೆ ಕಾಪಾಡಬೇಕೆಂದು ಹೆಸರೇಳಲು ಇಚ್ಚಿಸದ ಕೈಂಕರ್ಯಪರರು ಮನವಿ ಮಾಡಿದ್ದಾರೆ.