ಸರ್ಕಾರೇತರ ವ್ಯವಸ್ಥೆಯಲ್ಲಿ ದುಡಿಯುತ್ತಿರುವ ಶೇ.75 ರಷ್ಟು ಜನ

| Published : Aug 19 2025, 01:01 AM IST

ಸರ್ಕಾರೇತರ ವ್ಯವಸ್ಥೆಯಲ್ಲಿ ದುಡಿಯುತ್ತಿರುವ ಶೇ.75 ರಷ್ಟು ಜನ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದನ್ನೇ ಮಾಡುವಾಗ ಹೊಸದನ್ನು ಮಾಡಬೇಕು. ಮಾಡುವುದನ್ನು ಮೊದಲು ಹಾಗೂ ವೇಗವಾಗಿ ಮಾಡಬೇಕು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಗತ್ತಿನ ಶೇ.75 ರಷ್ಟು ಜನ ಸರ್ಕಾರೇತರ ವ್ಯವಸ್ಥೆಯಲ್ಲಿ ದುಡಿಯುತ್ತಿದ್ದು, ಕೃಷಿ ಹಾಗೂ ಇತರೆ ಉದ್ಯಮದಲ್ಲಿ ತೊಡಗಿದ್ದಾರೆ. ತಮ್ಮ ಆರ್ಥಿಕ ವ್ಯವಸ್ಥೆಯ ಸುಸ್ಥಿರತೆಗಾಗಿ ಎಲ್ಲರೂ ದುಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯಪುರದ ಚಾಣಕ್ಯ ಕರಿಯರ ಅಕಾಡೆಮಿ ಸಂಸ್ಥಾಪಕರಾದ ಎನ್.ಎಂ.ಬಿದಾರಾರ ಹೇಳಿದರು.

ರಾಯಚೂರು ಜಿಲ್ಲೆಯ ಮಾನವಿ ಪಟ್ಟಣದಲ್ಲಿ ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿ, ಯಾವುದನ್ನೇ ಮಾಡುವಾಗ ಹೊಸದನ್ನು ಮಾಡಬೇಕು. ಮಾಡುವುದನ್ನು ಮೊದಲು ಹಾಗೂ ವೇಗವಾಗಿ ಮಾಡಬೇಕು. ಮಾಡುವ ಕೆಲಸ ಇತರರಿಗಿಂತ ವಿಭಿನ್ನವಾಗಿ ಮಾಡಬೇಕು. ಆಗಲೇ ಸಮಾಜದಲ್ಲಿ ಮಾತ್ರವಲ್ಲ ಜಗತ್ತಿನಲ್ಲೇ ಉತ್ತಮ ಸಾಧಕನಾಗಲು ಸಾಧ್ಯ ಎಂದು ಯಶಸ್ಸು ಸಾಧಿಸುವ ಮಾರ್ಗಗಳ ಕುರಿತು ವಿವರಿಸಿದರು.

ಮನೆ, ಮನ ಹಾಗೂ ಮನಿ (ಹಣ) ಚೆನ್ನಾಗಿದ್ದರೇ ಸಮಾಜದಲ್ಲಿ ಆದರ್ಶದ ಜೀವನ ಸಾಗಿಸಲು ಸಾಧ್ಯ. ಕುಟುಂಬ ಸದೃಢವಾಗಿದ್ದಲ್ಲಿ ಸಮಾಜದಲ್ಲಿ ನೆಮ್ಮದಿಯ ಜೀವನ ಸಾಗಿಸುವಂತಾಗುವಲ್ಲಿ ಕುಟುಂಬದ ಎಲ್ಲ ಸದಸ್ಯರು ಒಗ್ಗೂಡು ಬದುಕುವುದರಿಂದ ಸಾಧ್ಯವಾಗುತ್ತದೆ. ಕನಿಷ್ಟ ಕುಟುಂಬದ ಎಲ್ಲ ಸದಸ್ಯರು ಕೂಡಿ ಊಟ ಮಾಡುವ ಮಟ್ಟಿಗಾದರೂ ನಿತ್ಯವೂ ಬೆರೆತಲ್ಲಿ ಕೌಟುಂಬಿಕ ಸದಸ್ಯರ ನೋವು, ನಲಿವುಗಳ ಅರಿವಾಗಿ ಸ್ಪಂದಿಸುವ ಕೆಲಸವಾಗುತ್ತದೆ ಎಂದರು.

ಧಾರ್ಮಿಕ, ಭಕ್ತಿ ಪರಂಪರೆಯ ಮನಸ್ಥಿತಿಯಿಂದ ಧಾರ್ಮಿಕ ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಕು. ಸಾಮಾಜಿಕ ಸಂಬಂಧ ಸರಿಯಾಗಿರಬೇಕು. ನೆರೆಯವರೊಂದಿಗೆ ಉತ್ತಮ ಸಹಕಾರ ಬಾಂಧವ್ಯ ಹೊಂದಿರಬೇಕು‌. ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಲ್ಲಿ ಕುಟುಂಬವೂ ನೆಮ್ಮದಿಯಿಂದ ಬದುಕುವ ಜೊತೆಗೆ ನಾವೂ ಕೂಡ ಮಾದರಿಯಾದ ಆದರ್ಶಮಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಹಕಾರಿ ಮನೋಭಾವ ಹೊಂದಿದ ಆರ್ಥಿಕ ಜೀವನ ಸಮಾಜದಲ್ಲಿ ಸಂತೃಪ್ತ ಜೀವನ ನಡೆಸುವಲ್ಲಿ ಸಹಕಾರಿ ಸಾಧ್ಯ. ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿದವರು ಜಾಗತಿಕ ಮಟ್ಟದಲ್ಲಿ ಅದ್ಭುತ ಸಾಧನೆ ಮಾಡಿರುವ ನೂರಾರು ನಿದರ್ಶನ ನಮ್ಮ ಮುಂದಿವೆ. ಬಡತನಕ್ಕೆ ಸೋಮಾರಿತವೇ ಮೂಲ ಕಾರಣ ಎಂದರು.

ಹೆತ್ತವರು ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸು ಕಾಣುವುದು ತಮ್ಮ ಕರುಳ ಬಳ್ಳಿಗಳು ಸಮಾಜದಲ್ಲಿ ಉನ್ನತ ಸ್ಥಾಯಿಗೆ ಹೋಗಲು ಎಂದಷ್ಟೆ. ಇದನ್ನು ಮಕ್ಕಳು ಒತ್ತಡವೆಂದು ಭಾವಿಸುವ ಬದಲು ಮುಕ್ತ ಮನಸಿನಿಂದ ಹಿತವಚನ ಸ್ವೀಕರಿಸಿದಲ್ಲಿ ಬದುಕಿನಲ್ಲಿ ಯಶಸ್ಸು ಸಾಧ್ಯ. ದುಶ್ಚಟಗಳಿಲ್ಲದ ಕುಟುಂಬ ನೆಮ್ಮದಿಯಿಂದ ಬದುಕುವ ಜೊತೆಗೆ ಸಮಾಜದಲ್ಲಿ ಆದರ್ಶಮಯವಾಗಿ ಗೌರವ ಪಡೆಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಿರ್ಮಲ ಮನಸ್ಸು ಹಾಗೂ ಆರ್ಥಿಕ ಶಿಸ್ತು ಹೊಂದಿದಲ್ಲಿ ನೆಮ್ಮದಿ ಜೀವನ ಸಾಧ್ಯವಿದೆ ಎಂದು ಸಲಹೆ ನೀಡಿದರು.

ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶ್ರೀಗಳು, ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ರಾಯಚೂರು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ವಿಶ್ವನಾಥ ಪಾಟೀಲ, ಹಿರಿಯ ವಕೀಲ ಮಲ್ಲನಗೌಡ ನಕ್ಕುಂದಿ ಇದ್ದರು. ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಶಂಕರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕಿನ ಸಿಇಒ ವೀರೇಶ ಎನ್.ಹೊಸೂರ ವಾರ್ಷಿಕ ವರದಿ ಮಂಡಿಸಿದರು.

ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶರಣಪ್ಪ ಮಲ್ಲಾಪುರ, ಮಲ್ಲಿಕಾರ್ಜುನ ಕೊಂಕಲ್, ಶರಣಗೌಡ ಹಿರೇಗೌಡರ, ಶರಣಪ್ಪ ಪಾಟೀಲ, ಜಯರಾಜ, ಸಿ.ಡಿ.ವಿಜಯಕುಮಾರ, ಎಸ್.ಎನ್.ಮಲ್ಲಿಕಾರ್ಜುನ, ಕೇಮ್ಯಾ ನಾಯಕ, ಕೇಶವ, ಬಸಮ್ಮ ಕಮತರ, ಗಂಗಮ್ಮ ರಾಮದುರ್ಗ, ಹಿರಿಯ ಸಲಹೆಗಾರ ಎಸ್.ಶರಣಪ್ಪ, ಕಾನೂನು ಸಲಹೆಗಾರ ವೀರನಗೌಡ ಪೋತ್ನಾಳ, ಭೂಪನಗೌಡ ಕರಡಕಲ್, ರವಿಕುಮಾರ ಅಳ್ಳುಂಡಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯಕುಮಾರ ಸ್ವಾಗತಿಸಿದರು. ದೇವಯ್ಯ ನಿರೂಪಿಸಿದರು. ಮಂಜುನಾಥ ಕಮತರ ಪರಿಚಯಿಸಿದರು. ನಿರ್ಮಲಾ ಅಶೋಕ ಮಳ್ಳಿ ವಂದಿಸಿದರು.

ಪತ್ರಿಕೆಗಳ ಓದು ನಿಮ್ಮಲ್ಲಿ ಹೊಸತನದ ಹಾಗೂ ವೈಚಾರಿಕ ಪ್ರಜ್ಞೆ ಹಾಗೂ ವಿನೂತನ ಕಲಿಕೆಗೆ ಸಹಕಾರಿ ಆಗುತ್ತದೆ. ಕೃಷಿ, ವಾಣಿಜ್ಯ, ಉದ್ಯಮ, ತಾಂತ್ರಿಕತೆ ಹೀಗೆ ಹಲವು ವೈವಿಧ್ಯಮಯ ಆವಿಷ್ಕಾರಗಳ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ, ಅದರಲ್ಲೂ ವಿದ್ಯಾವಂತ ಯುವಜನರು ಪತ್ರಿಕೆ, ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಎನ್.ಎಂ.ಬಿದಾರಾರ ಹೇಳಿದರು.