ಕನ್ನಡಪ್ರಭ ವಾರ್ತೆ ಬಾಗಲಕೋಟೆನಗರದ ಶಹರ ಗಜಾನನೋತ್ಸವ ಮಂಡಳಿ 75ನೇ ವರ್ಷದ ಅಮೃತ ಮಹೋತ್ಸವವು ಆಚರಿಸಲಿದ್ದು ಈ ಬಾರಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಮಂಡಳಿ ಅಧ್ಯಕ್ಷ ದಿನೇಶ ಬಾರ್ಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಗರದ ಶಹರ ಗಜಾನನೋತ್ಸವ ಮಂಡಳಿ 75ನೇ ವರ್ಷದ ಅಮೃತ ಮಹೋತ್ಸವವು ಆಚರಿಸಲಿದ್ದು ಈ ಬಾರಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಮಂಡಳಿ ಅಧ್ಯಕ್ಷ ದಿನೇಶ ಬಾರ್ಶಿ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ವಲ್ಲಭಬಾಯಿ ಚೌಕದಲ್ಲಿ ಇದೇ ಸೆ.14 ರಿಂದ 20 ರವರೆಗೆ 7 ದಿನಗಳ ಕಾಲ ಗಣಪತಿ ಪ್ರತಿಷ್ಠಾಪನೆ ಮಾಡಲಾಗುವುದು. ಸೆ.15,17,19ರಂದು ಗಣಹೋಮ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಸೆ.14 ರಿಂದ 20 ರವರೆಗೆ ನಿತ್ಯ ಮಧ್ಯಾಹ್ನ ಹಾಗೂ ಸಂಜೆ ಗಜಾನನೋತ್ಸವ ಮಹಾಪೂಜೆ ಜರುಗುವುದು ಎಂದರು.

ಅಮೃತ ಮಹೋತ್ಸವದ ಪ್ರಯುಕ್ತ ಈ ಬಾರಿ 7 ದಿನಗಳ ಕಾಲ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಇದರ ಜತೆಗೆ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆರ್ಥಿಕವಾಗಿ ಹಿಂದುಳಿದ 75 ಕುಟುಂಬಗಳಿಗೆ ಸಹಾಯ ಹಸ್ತ ನೀಡಲು ನಿರ್ಧರಿಸಲಾಗಿದೆ. ಸಮಾಜದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವ ಮೂಲಕ ಅವರ ಬದುಕಿನಲ್ಲಿ ಆಶಾಕಿರಣ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಧಾರ್ಮಿಕ ಆಚರಣೆಯೊಂದಿಗೆ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಯುವ ನಿಟ್ಟಿನಲ್ಲಿ ಮಂಡಳಿಯು ಈ ಮಹತ್ವದ ಸೇವಾ ಕಾರ್ಯವನ್ನು ಕೈಗೊಂಡಿದೆ ಎಂದರು.

ಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸೈಕಲ್ ನೀಡಲು ಉದ್ದೇಶ ಹೊಂದಿದ್ದು, ಆ ನಿಟ್ಟಿನಲ್ಲಿ ದಾನಿಗಳು ಬಹಳ ಮುಂದೆ ಬಂದಿದ್ದು, ನಗರದ ಬಡ ವಿದ್ಯಾರ್ಥಿ/ನಿಯರಿಗೆ 100ಕ್ಕೂ ಹೆಚ್ಚು ಸೈಕಲ್‌ ಗಳನ್ನು ವಿತರಿಸಲಾಗುವುದು ಎಂದರು.

ಮಂಡಳಿಯ ಸದಸ್ಯ ಅಶೋಕ ಲಿಂಬಾವಳಿ ಮಾತನಾಡಿ, ಹಿರಿಯರು ಹಾಕಿಕೊಟ್ಟ ಪವಿತ್ರ ಹಾದಿಯಲ್ಲಿ ಇಂದಿನ ಯುವ ಪೀಳಿಗೆಯನ್ನು ಧಾರ್ಮಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮುನ್ನಡೆಸಲಾಗುತ್ತಿದ್ದು, ಪ್ರಸ್ತುತ ಅಧ್ಯಕ್ಷರಾದ ದಿನೇಶ ಬಾರ್ಶಿ ಹಾಗೂ ಮಂಡಳಿಯ ನೇತೃತ್ವದಲ್ಲಿ ಮಂಡಳಿಯ 75 ನೇ ವರ್ಷದ ಗಜಾನನೋತ್ಸವವನ್ನು ಐತಿಹಾಸಿಕವಾಗಿ ಆಚರಿಸಲಾಗುವುದು ಎಂದರು.

ಶಹರ ಗಜಾನನೋತ್ಸವ ಮಂಡಳಿಯ 75 ವರ್ಷಗಳ ಸಾರ್ಥಕ ಪಯಣವು ಬಾಗಲಕೋಟೆಯ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚರಿತ್ರೆಯ ಹೆಮ್ಮೆಯ ಅಧ್ಯಾಯ. ಗತಕಾಲದ ಹಿರಿಯರ ತ್ಯಾಗವನ್ನು ಸ್ಮರಿಸುತ್ತಾ, ವರ್ತಮಾನದ ಭಕ್ತರ ಸಹಕಾರವನ್ನು ಗೌರವಿಸುತ್ತಾ ಮುಂದಿನ ತಲೆಮಾರಿಗೆ ಈ ಭವ್ಯ ಪರಂಪರೆಯನ್ನು ದಾಟಿಸುವ ಸಂಕಲ್ಪವೇ ಈ ಅಮೃತ ಮಹೋತ್ಸವದ ನಿಜವಾದ ಸಂದೇಶ ಎಂದರು.ಗೋಷ್ಠಿಯಲ್ಲಿ ಸಂಜೀವ ವಾಡಕರ, ನಾಗರಾಜ್ ಹದ್ಲಿ, ಶಿವಕುಮಾರ ನಂದಿಕೋಲಮಠ, ನಾರಾಯಣ ದೇಸಾಯಿ, ರಮೇಶ ಅಂಬೋರೆ, ಸೋಮು ಅಂಗಡಿ ಮತ್ತಿತರರು ಇದ್ದರು.