ಸಾರಾಂಶ
ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮದ ರೈತರೊಬ್ಬರ ಶೇಂಗಾ ಬೆಳೆ ಹೊಲಕ್ಕೆ ಕೃಷಿ ಅಧಿಕಾರಿ ಜೆ.ಅಶೋಕ್ ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಜೂನ್ ಹಾಗೂ ಆಗಸ್ಟ್ ತಿಂಗಳಲ್ಲಿ ತಾಲೂಕಿನಾದ್ಯಂತ ಒಟ್ಟು ೪೯೬.೦೬ ಮಿ.ಮೀ ಮಳೆಯಾಗಿದ್ದು, ನಿಧಾನಗತಿಯಲ್ಲಿದ್ದ ಕೃಷಿ ಚಟುವಟಿಕೆಯಲ್ಲಿ ದಿಢೀರ್ ಚೇತರಿಕೆ ಕಂಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿ, ಪ್ರಸ್ತುತ ವರ್ಷ ತಾಲೂಕಿನಾದ್ಯಂತ ಉತ್ತಮ ಬಿತ್ತನೆಯಾಗಿದ್ದು, ಈ ಬಾರಿಯೂ ಸಹ ಒಂದಿಷ್ಟು ರೈತರು ಬಿತ್ತನೆಗೆ ಹಿಂದೇಟು ಹಾಕುವ ಕಾಲ ಒದಗಿತ್ತು. ಆದರೆ, ವರುಣನ ಕೃಪೆಯಿಂದ ತಾಲೂಕಿನಾದ್ಯಂತ ಒಟ್ಟು ೮೭೭೬೫ ಹೆಕ್ಟೇರ್‌ನಲ್ಲಿ ೭೮೧೧೯ ಹೆಕ್ಟೇರ್ ಬಿತ್ತನೆ ಕಾರ್ಯ ಅಂತ್ಯವಾಗಿದೆ. ಶೇ.೮೯ರಷ್ಟು ಬಿತ್ತನೆಯಾಗಿದ್ದು ಉತ್ತಮ ಬೆಳೆ ಪಡೆಯುವ ನಿಟ್ಟಿನಲ್ಲಿ ರೈತರಿಗೆ ಇಲಾಖೆ ಸಲಹೆ ನೀಡಿತ್ತಿದ್ದು ಪಾಲಿಸುವಂತೆ ಮನವಿ ಮಾಡಿದರು.ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಹಿನ್ನೆಲೆ ತೇವಾಂಶ ಹೆಚ್ಚಾಗಿದೆ. ಕೆಲವೊಂದು ರೋಗ ಕಾಣಿಸಿಕೊಳ್ಳುವ ಅಪಾಯವಿದೆ. ವಿಜ್ಞಾನಿಗಳು ತಿಳಿಸಿದ ರಸಗೊಬ್ಬರ ಬಳಸಬೇಕೆಂದು ಮನವಿ ಮಾಡಿದ್ದಾರೆ. ತಾಲೂಕಿನಾದ್ಯಂತ ೫೧೪೪೦ ಹೆಕ್ಟೇರ್ ಶೇಂಗಾ, ೧೧೨೪೨ ತೊಗರಿ, ೬೪೮೫ ಮೆಕ್ಕೆಜೋಳ, ೧೮೫೩ ಸಿರಿಧಾನ್ಯ ಹಾಗೂ ೩೬೦ ಹೆಕ್ಟೇರ್ ಹರಳು ಬಿತ್ತನೆಯಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ವಿಜ್ಞಾನಿಗಳ ಸೂಚನೆಯಂತೆ ೪೫ ರಿಂದ ೫೦ ದಿನದ ಅಂತರದಲ್ಲಿ ಶೇಂಗಾ ಬೆಳೆಗೆ ಮೇಲು ಗೊಬ್ಬರ ಹಾಕಬೇಕಿದೆ. ಯೂರಿಯಾ, ಎನ್‌ಪಿಕೆ, ಮಿಶ್ರಣ ಗೊಬ್ಬರ, ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ದ್ರವರೂಪದ ರಸಗೊಬ್ಬರಗಳ ಸಿಂಪಡಣೆಗೆ ಇದು ಸಕಾಲ ಎಂದಿದ್ದಾರೆ. ಹೆಚ್ಚಿನ ಮಾಹಿತಿಗೆ ಉಪಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಸಹಾಯಕರು ಹಾಗೂ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಲು ತಿಳಿಸಿದ್ದಾರೆ.