ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ : ರಾಜ್ಯಪಾಲರ ವಾಪಸಾತಿಗೆ ಒತ್ತಾಯ

| Published : Aug 24 2024, 01:29 AM IST / Updated: Aug 24 2024, 09:35 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ : ರಾಜ್ಯಪಾಲರ ವಾಪಸಾತಿಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳಬೇಕು.

ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳಬೇಕು ಮತ್ತು ಪ್ರಾಸಿಕ್ಯೂಸನ್‌ ಅನುಮತಿ ನೀಡಿದ ರಾಜ್ಯಪಾಲರ ನಡೆಯನ್ನು ಖಂಡಿಸಿ ಅಹಿಂದ ಯುವ ವೇದಿಕೆ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಮುಖ್ಯಮಂತ್ರಿ ವಿರುದ್ಧ ರಾಜಕೀಯ ದುರುದ್ದೇಶದಿಂದ ಬಿಜೆಪಿ-ಜೆಡಿಎಸ್‌ನವರು ಪಾದಯಾತ್ರೆ ನಡೆಸಿದ್ದಾರೆ. ದೂರುದಾರರು ದೂರು ಸಲ್ಲಿಸಿದ ಬಳಿಕ ಒಂದೇ ದಿನಕ್ಕೆ ಮುಖ್ಯಮಂತ್ರಿ ಅವರಿಗೆ ಶೋಕಾಸ್‌ ನೋಟಿಸ್ ನೀಡಲಾಗಿದೆ. ರಾಜ್ಯಪಾಲರು ಈ ಪ್ರಕರಣದಲ್ಲಿ ಅವಸರ ಮಾಡಿದ್ದಾರೆ. ಮುಖ್ಯಮಂತ್ರಿ ಅವರ ಧರ್ಮಪತ್ನಿ ಪಾರ್ವತಮ್ಮ ಅವರು 3.16 ಎಕರೆ ಜಾಗವನ್ನು ಕಳೆದುಕೊಂಡಿದ್ದಾರೆ. ಮುಡಾದವರು ಈ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರ ಬದಲಿಗೆ ನಿಯಮಾನುಸಾರ 14 ಸೈಟ್‌ಗಳನ್ನು ನೀಡಿದ್ದಾರೆ. ಇದರಲ್ಲಿ ಯಾವುದೇ ಹಗರಣ ಅಡಗಿಲ್ಲ. ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಅಧಿಕಾರದಲ್ಲೂ ಇರಲಿಲ್ಲ. ಎಲ್ಲ ಪ್ರಕ್ರಿಯೆಗಳು ನಡೆದಿರುವುದು ಬಿಜೆಪಿ ಆಡಳಿತಾವಧಿ ಕಾಲದಲ್ಲೇ. ಹೀಗಿದ್ದರೂ ಸುಖಾಸುಮ್ಮನೆ ಮುಡಾ ಹಗರಣ ನಡೆದಿದೆ ಎಂದು ಸುಳ್ಳು ಸೃಷ್ಟಿ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲರನ್ನು ರಾಷ್ಟ್ರಪತಿ ಕೂಡಲೇ ವಾಪಸ್‌ ಕರೆಸಿಕೊಳ್ಳಬೇಕು. ಮುಡಾ ಹಗರಣ ಎಂದು ಸೃಷ್ಟಿ ಮಾಡಲಾಗಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ ನೀಡುವ ಮುನ್ನ ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ರಾಜ್ಯಪಾಲರ ಮೇಲೆ ಒತ್ತಡ ಹೇರಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರ ತಪ್ಪಿಲ್ಲ. ಹೀಗಿದ್ದರೂ ಪ್ರಾಸಿಕ್ಯೂಷನ್‌ ನೀಡಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಷ್ಟ್ರಪತಿಯವರಿಗೆ ಮನವಿಪತ್ರ ರವಾನಿಸಲಾಯಿತು.

ಹುಡಾ ಅಧ್ಯಕ್ಷ ಇಮಾಮ್‌ ನಿಯಾಜಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಕಾಂಗ್ರೆಸ್‌ ಪಕ್ಷದ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಡಿ. ವೆಂಕಟರಮಣ, ಅಹಿಂದ ಯುವ ವೇದಿಕೆ ಅಧ್ಯಕ್ಷ ಕುಬೇರ ದಲ್ಲಾಲಿ, ಮುಖಂಡರಾದ ಬುಡ್ಡಿ ಬಸವರಾಜ್‌, ಗಂಟೆ ಉಮೇಶ್, ಮಂಜುನಾಥ್, ನಾಗರಾಜ್, ದೇವರಾಜ್, ದಿಲ್ ಶಾದ್, ಲಕ್ಷ್ಮಕ್ಕ, ಮೇಘರಾಜ್, ವಿ.ಗಾಳೆಪ್ಪ, ಬಾಷಾ, ರಘು, ಲಕ್ಷ್ಮಿಪತಿ, ರಾಮು ಮತ್ತಿತರರಿದ್ದರು.