ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಹೆಣ್ಣು ಮಕ್ಕಳು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಕರಾಟೆ ಕಲಿಕೆ ಅತ್ಯಂತ ಪ್ರಯೋಜನಕಾರಿಯಾಗಿದ್ದು, ಏಕಾಗ್ರತೆಯು ಸಹ ಹೆಚ್ಚಾಗುತ್ತದೆ ಎಂದು ಪುರಸಭೆ ಸದಸ್ಯೆ ಪ್ರೇಮಾ ಟೋಕಪ್ಪ ಹೇಳಿದರು.ಶುಕ್ರವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಹಮ್ಮಿಕೊಂಡ ಕರಾಟೆ ತರಬೇತಿ ಆರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳು ಸಂಕೋಚಪಡದೆ ಕರಾಟೆ ಯನ್ನು ಶ್ರದ್ಧೆಯಿಂದ ಕಲಿಯಬೇಕು. ಯಾರಾದರೂ ಆಕ್ರಮಣ ಮಾಡಿದರೆ ಅದರಿಂದ ಪಾರಾಗಲು ಅನುಕೂಲವಾಗುತ್ತದೆ ಎಂದರು.ಸಾಗರ ಕರಾಟೆ ಇನ್ಸ್ಟಿಟ್ಯೂಟ್‌ನ ಕರಾಟೆ ತರಬೇತುದಾರ ಶಿಹಾನ್ ಪಂಚಪ್ಪ ಮಾತನಾಡಿ, ಕರಾಟೆ ಕಲಿಕೆಯಿಂದ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯ ವಾಗಿರಲು ಸಾಧ್ಯವಾಗುತ್ತದೆ, ಓದಿನಲ್ಲೂ ಆಸಕ್ತಿ ಮೂಡಲು ಸಹ ಅನುಕೂಲವಾಗುತ್ತದೆ. ಕರಾಟೆಯಲ್ಲಿ ಸಾಧನೆ ಮಾಡಿದರೆ ಉನ್ನತ ಶಿಕ್ಷಣ ಪಡೆಯಲು ಮೀಸಲಾತಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಆಸಕ್ತಿಯಿಂದ ಕರಾಟೆ ಕಲಿಯಬೇಕು ಎಂದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಮತ್ತು ಶಿಕ್ಷಣ ಇಲಾಖೆಯಿಂದ ಶೂ ವಿತರಿಸಲಾಯಿತು. ನಂತರ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಯಿತು.ಶಾಲೆಯ ಮುಖ್ಯ ಶಿಕ್ಷಕಿ ಬಿ.ಗೀತಾ ಪ್ರಾಸ್ತಾವಿಕ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತ್ಯಾಗರಾಜ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಭವಾನಿ, ಸಿಆರ್‌ಪಿ ಸುಧಾ, ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯಾಧಿಕಾರಿ ಎಚ್.ವೈ. ರಕ್ಷಿತಾ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಎಂ. ಶೀಲಾ, ಶಿಕ್ಷಕಿಯರಾದ ವಿದ್ಯಾ, ಜ್ಯೋತಿ, ಸುನಿತಾ, ರೂಪಾ, ಅಮೃತಾ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ತುಳಸಾ ನಾಯ್ಕ್ ಸ್ವಾಗತಿಸಿ, ಮುದಿಗೌಡರ್ ವಂದಿಸಿ, ಅರುಣ್ ಕುಮಾರ್ ನಿರೂಪಿಸಿದರು.