ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮರು ಸ್ಥಾಪನೆ ಆಗ್ರಹ ಹಾಸ್ಯಾಸ್ಪದ: ಶಶಿಧರ್‌

| Published : Aug 24 2024, 01:29 AM IST

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮರು ಸ್ಥಾಪನೆ ಆಗ್ರಹ ಹಾಸ್ಯಾಸ್ಪದ: ಶಶಿಧರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಪತ್ರದ ಅಧಿಸೂಚನೆಯಂತೆ ಕುಶಾಲನಗರ ಪುರಸಭೆ ಘೋಷಣೆಯಾಗಿದ್ದು, ಇದೀಗ ಪುರಸಭೆಯಲ್ಲಿ ವಿಲೀನಗೊಂಡಿರುವ ಮುಳ್ಳುಸೋಗೆ ಗ್ರಾಮ ಪಂಚಾಯತಿಯನ್ನು ಪುನರ್ ಸ್ಥಾಪಿಸುವಂತೆ ಆಗ್ರಹಿಸುತ್ತಿರುವುದು ಹಾಸ್ಯಾಸ್ಪದ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕರ್ನಾಟಕ ರಾಜ್ಯ ಪತ್ರದ ಅಧಿಸೂಚನೆಯಂತೆ ಕುಶಾಲನಗರ ಪುರಸಭೆ ಘೋಷಣೆಯಾಗಿದ್ದು, ಇದೀಗ ಪುರಸಭೆಯಲ್ಲಿ ವಿಲೀನಗೊಂಡಿರುವ ಮುಳ್ಳುಸೋಗೆ ಗ್ರಾಮ ಪಂಚಾಯತಿಯನ್ನು ಪುನರ್ ಸ್ಥಾಪಿಸುವಂತೆ ಆಗ್ರಹಿಸುತ್ತಿರುವುದು ಹಾಸ್ಯಾಸ್ಪದ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಮತ್ತು ಇತರರು ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಯಥಾ ಸ್ಥಿತಿಯಲ್ಲಿ ಮತ್ತೆ ಸ್ಥಾಪಿಸಬೇಕೆಂದು ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಕುಶಾಲನಗರ ಪಟ್ಟಣ ಪಂಚಾಯಿತಿಯ ಎರಡನೇ ‌ಅವಧಿಯ ಚುನಾವಣೆಯ ವಿಷಯದಲ್ಲಿ ಕ್ಷೇತ್ರದ ಶಾಸಕರನ್ನು ಅನಾವಶ್ಯಕವಾಗಿ ಪ್ರಸ್ತಾಪಿಸಿರುವುದು ಖಂಡನೀಯ. ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಪೆಟಿಷನ್ ಸಲ್ಲಿಸಿ ಚುನಾವಣೆಗೆ ತಡೆಯಾಜ್ಞೆಯನ್ನು ಶಿವಾನಂದ ಅವರೇ ತಂದಿರುತ್ತಾರೆ. ಅಲ್ಲದೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ 2022 ರಲ್ಲಿ ನಿರ್ಣಯ ಕೈಗೊಂಡು ತಮ್ಮ ಆಡಳಿತ ರದ್ದುಗೊಳಿಸುವ ಮೂಲಕ ಪುರಸಭೆ ರಚನೆಗೆ ಅವಕಾಶ ಮಾಡಿ ಕೊಟ್ಟಿರುತ್ತಾರೆ ಎಂದು ಹೇಳಿದರು.

ಪುರಸಭೆಗೆ ವಿಲೀನಗೊಂಡ ವೇಳೆಗೆ ಗ್ರಾಮ ಪಂಚಾಯಿತಿ ಸದಸ್ಯತ್ವ ರದ್ದಾಗಿದೆ.

ಇದೀಗ ಮಾಜಿ ಸದಸ್ಯ ಮತ್ತು ಕೆಲವರು ಅಜ್ಞಾನದ ಪ್ರದರ್ಶನ ಮಾಡುತ್ತಿದ್ದಾರೆ ಹಾಗೂ ಜನರಲ್ಲಿ ಗೊಂದಲ ಉಂಟು ಮಾಡುತ್ತಿರುವ ಹೇಳಿಕೆ ನೀಡುತ್ತಿರುವುದು ಅವಿವೇಕತನವಾಗಿದೆ ಎಂದು ಹೇಳಿದರು.

ಶಾಸಕರು ಮುಳ್ಳುಸೋಗೆ ಗ್ರಾಮ ವ್ಯಾಪ್ತಿಯ ನಾಗರಿಕರನ್ನು ಕಡೆಗಣನೆ ಮಾಡುತ್ತಿರುವ ಆರೋಪ ಸುಳ್ಳು ಎಂದ ಶಶಿಧರ್, ಕಳೆದ ಹಲವು ಸಮಯದಿಂದ ಮುಳ್ಳುಸೋಗೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಜನಪರ ಕಾರ್ಯ ನಡೆಯುತ್ತಿದೆ ಎಂದರು.

ಪುರಸಭೆ ನಾಮಕರಣ ವಿಷಯದಲ್ಲಿ ಸಂಶಯವಿದ್ದಲ್ಲಿ ಹುಸಿ ಭರವಸೆಗಳನ್ನು ನೀಡಿದ ಮಾಜಿ ಶಾಸಕರಲ್ಲಿ ಸ್ಪಷ್ಟೀಕರಣ ಕೇಳಲಿ ಎಂದು ಶಶಿಧರ್ ಹೇಳಿದರು.

ಮುಳುಸೋಗೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಕುಶಾಲನಗರ ಪುರಸಭೆಯ ನಾಲ್ಕು ಅಧಿಕಾರಿಗಳು ಮತ್ತು ಸಿಬ್ಬಂದಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಸಮಗ್ರ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ಈ ನಡುವೆ ಪುರಸಭೆಗೆ ನಾಮನಿರ್ದೇಶನ ಗೊಂಡ ಸದಸ್ಯರು ಕೂಡ ನಿರಂತರವಾಗಿ ಗ್ರಾಮದ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಿದ್ದಾರೆ ಎಂದು ಶಶಿಧರ್ ಹೇಳಿದರು.

ಪುರಸಭೆಗೆ ನಾಮ ನಿರ್ದೇಶಿತ ಸದಸ್ಯರಾಗಿರುವ ಜಿ ಬಿ ಜಗದೀಶ್, ಹರೀಶ್, ನವೀನ್ ಪ್ರಕಾಶ್ , ಪದ್ಮ ಮಾತನಾಡಿ, ಮುಳ್ಳುಸೋಗೆ ಗ್ರಾಮ ಶಾಸಕರ ಸಲಹೆ ಸೂಚನೆಯಂತೆ ಸಮಗ್ರ ಅಭಿವೃದ್ಧಿ ಕಾಣುತ್ತಿದೆ. ಶಾಸಕರನ್ನು ಅನಾವಶ್ಯಕವಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವಿಷಯದಲ್ಲಿ ಎಳೆದು ತರುವುದು ಬೇಡ. ತಮ್ಮ ಅವಧಿಯಲ್ಲಿ ನಡೆಸಿದ ಕೆಲಸ ಕಾರ್ಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.