ಸಾರಾಂಶ
ಸಮಾಜ ಮತ್ತು ಅಭಿವೃದ್ಧಿ ಪ್ರತಿಯೊಂದು ಹಂತಗಳಲ್ಲಿಯೂ ವಿಶೇಷ ಚೇತನರ ಹಕ್ಕುಗಳು ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಾಗಮಂಗಲ : ಸಮಾಜ ಮತ್ತು ಅಭಿವೃದ್ಧಿ ಪ್ರತಿಯೊಂದು ಹಂತಗಳಲ್ಲಿಯೂ ವಿಶೇಷ ಚೇತನರ ಹಕ್ಕುಗಳು ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ 18 ಮಂದಿ ವಿಶೇಷ ಚೇತನ ಅರ್ಹ ಫಲಾನುಭವಿಗಳಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 22.38ಲಕ್ಷ ರು. ವೆಚ್ಚದ ಯಂತ್ರಚಾಲಿತ 18 ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.
ಸಮಾಜದ ಎಲ್ಲ ಜನರಂತೆ ವಿಶೇಷ ಚೇತನ ವ್ಯಕ್ತಿಗಳೂ ಸಹ ಸರ್ಕಾರದ ಸವಲತ್ತುಗಳನ್ನು ಪಡೆದು ಶಾಂತಿ, ನೆಮ್ಮದಿಯ ಬದುಕು ನಡೆಸಬೇಕು. ಇದಕ್ಕೆ ಪೂರಕವಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
2023-24ನೇ ಸಾಲಿನಲ್ಲಿ ಆಯ್ಕೆಯಾಗಿರುವ ಕ್ಷೇತ್ರದ 18 ಮಂದಿ ಅರ್ಹ ಫಲಾನುಭವಿಗಳಿಗೆ ತಲಾ 1.24ಲಕ್ಷ ರು.ಗಳ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಫಲಾನುಭವಿಗಳನ್ನು ಗುರುತಿಸಿ ತ್ರಿಚಕ್ರ ವಾಹನ ಸೇರಿದಂತೆ ಹಲವು ಸವಲತ್ತುಗಳನ್ನು ನೀಡಲಾಗುವುದು ಎಂದು ಹೇಳಿದರು.
ತಾಲೂಕಿನ ಎ.ನಾಗತಿಹಳ್ಳಿ ಡಂಕಣಾಚಾರಿ, ಮಾವಿನಕೆರೆ ಪಟ್ಟಸ್ವಾಮಿ, ಅರೇಹಳ್ಳಿ ಚಂದನ್‌ಕುಮಾರ್, ಜೋಡಿನೇರಲಕೆರೆ ಪಾರ್ವತಿ, ಕಾರಬೈಲು ಲಕ್ಕಣ್ಣಗೌಡ, ದೊಡ್ಡಯ್ಯಗಟ್ಟಿ ನಾಗರಾಜು, ಲಾಳನಕೆರೆ ರಾಮಲಿಂಗೇಗೌಡ, ಹೂವಿನಹಳ್ಳಿ ಪುಟ್ಟರಾಜು, ಭೀಮನಹಳ್ಳಿ ಕುಮಾರ, ಕೆಂಪನಕೊಪ್ಪಲು ಕೆ.ಆರ್.ಯೋಗೇಶ, ಕನ್ನೇನಹಳ್ಳಿ ಕೆ.ಎಚ್.ರಾಕೇಶ್, ಅಳೀಸಂದ್ರ ನರಸಿಂಹೇಗೌಡ, ಮೈಲನಹಳ್ಳಿಯ ಜಿತೇಂದ್ರ, ಶಿಖರನಹಳ್ಳಿಯ ಸಂದೇಶ್, ಹೊಸಗಾವಿ ಗ್ರಾಮದ ಬಿಳಿಯಪ್ಪ, ಕೊಪ್ಪ ಗ್ರಾಮದ ಚಿಕ್ಕಯ್ಯ, ಹೊಸಕೊಪ್ಪಲು ಭೈರೇಗೌಡ ಹಾಗೂ ಗೂಳೂರಿನ ಶ್ರೀನಿವಾಸ್ ಎಂಬ ಫಲಾನುಭವಿಗಳಿಗೆ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ಸಚಿವರು ವಿತರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ತಾಪಂ ಮಾಜಿ ಅಧ್ಯಕ್ಷ ಆರ್.ಕೃಷ್ಣೇಗೌಡ, ಮುಖಂಡರಾದ ಸಂಪತ್‌ಕುಮಾರ್, ತ್ಯಾಪೇನಹಳ್ಳಿ ಶ್ರೀನಿವಾಸ್ ಸೇರಿ ಹಲವರು ಇದ್ದರು.