ಉಡುಪಿ ನಗರಸಭೆ ಅಧ್ಯಕ್ಷರಾಗಿ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆಯಾಗಿ ರಜನಿ ಹೆಬ್ಬಾರ್

| Published : Aug 24 2024, 01:29 AM IST

ಸಾರಾಂಶ

ಬಿಜೆಪಿ ಉಡುಪಿ ನಗರಸಭೆಯ ಒಟ್ಟು 35 ಸದಸ್ಯರಲ್ಲಿ 32 ಬಲದೊಂದಿಗೆ ಸಂಪೂರ್ಣ ಬಹುಮತ ಹೊಂದಿರುವುದರಿಂದ ವಿಪಕ್ಷ ಕಾಂಗ್ರೆಸ್‌ನಿಂದ ಸ್ಪರ್ಧೆ ಇಲ್ಲದೆ, ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಸಹಾಯಕ ಕಮೀಷನರ್ ಮಹೇಶ್ಚಂದ್ರ ಚುನಾವಣೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ನಗರಸಭೆಯ ನೂತನ ಅಧ್ಯಕ್ಷರಾಗಿ ಗುಂಡಿಬೈಲು ವಾರ್ಡಿನ ಬಿಜೆಪಿ ಸದಸ್ಯ ಪ್ರಭಾಕರ್ ಪೂಜಾರಿ ಹಾಗೂ ಉಪಾದ್ಯಕ್ಷೆಯಾಗಿ ಒಳಕಾಡು ವಾರ್ಡಿನ ಬಿಜೆಪಿ ಸದಸ್ಯೆ ರಜನಿ ಹೆಬ್ಬಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರಭಾಕರ ಪೂಜಾರಿ 2ನೇ ಬಾರಿ ನಗರಸಭೆ ಸದಸ್ಯರಾಗಿದ್ದರೆ, ರಜನಿ ಹೆಬ್ಬಾರ್ ಮೊದಲ ಬಾರಿ ನಗರಸಭೆ ಪ್ರವೇಶಿಸಿದ್ದಾರೆ.

ಶುಕ್ರವಾರ ನಗರಸಭೆಯ ಸತ್ಯಮೂರ್ತಿ ಸ್ಮಾರಕ ಸಭಾಭವನದಲ್ಲಿ ಈ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ‌ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ನಿಗದಿಯಾಗಿತ್ತು.ಬಿಜೆಪಿ ಉಡುಪಿ ನಗರಸಭೆಯ ಒಟ್ಟು 35 ಸದಸ್ಯರಲ್ಲಿ 32 ಬಲದೊಂದಿಗೆ ಸಂಪೂರ್ಣ ಬಹುಮತ ಹೊಂದಿರುವುದರಿಂದ ವಿಪಕ್ಷ ಕಾಂಗ್ರೆಸ್‌ನಿಂದ ಸ್ಪರ್ಧೆ ಇಲ್ಲದೆ, ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಸಹಾಯಕ ಕಮೀಷನರ್ ಮಹೇಶ್ಚಂದ್ರ ಚುನಾವಣೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ನಗರಸಭಾ ಪೌರಾಯುಕ್ತ ರಾಯಪ್ಪ ಉಪಸ್ಥಿತರಿದ್ದರು.

-------ಬ್ರಾಹ್ಮಣ ಸಂಘಟನೆಗಳಿಂದ ಒತ್ತಡ

ಈ ಬಾರಿ ನಗರಸಭೆಯ ಅಧ್ಯಕ್ಷ ಸ್ಥಾನವನ್ನು ಬ್ರಾಹ್ಮಣ ಸಮುದಾಯಕ್ಕೆ ನೀಡಬೇಕು ಎಂದು ವಿವಿಧ ಬ್ರಾಹ್ಮಣ ಸಂಘಟನೆಗಳಿಂದ ಒತ್ತಡ ಹೇರಲಾಗಿತ್ತು. ಗುರುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿಯ ಎಲ್ಲ ನಗರಸಭಾ ಸದಸ್ಯರ ವೈಯಕ್ತಿಕ ಅಭಿಪ್ರಾಯವನ್ನು ಪಡೆದ ರಾಜ್ಯ ಬಿಜೆಪಿಯ ವೀಕ್ಷಕರಾಗಿ ಆಗಮಿಸಿದ್ದ ಗಣೇಶ್ ಕಾರ್ಣಿಕ್, ಅಂತಿಮ ಹೆಸರುಗಳನ್ನು ಘೋಷಿಸಿದ್ದರು. ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ, ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಸೇರಿದಂತೆ ಮೊದಲಾದವರು ಕೋರ್ ಕಮಿಟಿಯಲ್ಲಿದ್ದರು. ಉಪಾಧ್ಯಕ್ಷ ಸ್ಥಾನವನ್ನು ಬ್ರಾಹ್ಮಣ ಸಮುದಾಯಕ್ಕೆ ನೀಡಲಾಗಿದೆ.----ವಿದ್ಯುತ್ ಬಿಲ್ ಗಿಂತಲೂ ನೀರಿನ ಬಿಲ್ಲಿನ ಮೊತ್ತ ಜಾಸ್ತಿಯಾಗಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಬಿಲ್‌ಗಳನ್ನು ಪುನರ್ ಪರಿಶೀಲಿಸಲಾಗುವುದು. ನೀರಿನ ಸಮಸ್ಯೆಗಳನ್ನು ಬಗೆಹರಿಸಲು ನೀರಿನ ಅದಾಲತ್ ನಡೆಸಲಾಗುವುದು. ಭ್ರಷ್ಟಾಚಾರ ರಹಿತ ಆಡಳಿತ ನೀಡುವುದೇ ನಮ್ಮ ಗುರಿಯಾಗಿದೆ. ಯುಜಿಡಿ ಸಮಸ್ಯೆಗಳಿಗೆ ಯೋಜನೆಯೂ ಡಿಪಿಆರ್ ಹಂತದಲ್ಲಿದೆ. ನಗರಸಭೆಗೆ ನೂತನ ಕಟ್ಟಡ ನಿರ್ಮಾಣವಾಗಿಬೇಕಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಶಾಸಕರು, ಸದಸ್ಯರು, ವಿರೋಧ ಪಕ್ಷ, ಅಧಿಕಾರಿಗಳ ಸಹಕಾರದೊಂದಿಗೆ ನಡೆಸುತ್ತೇನೆ.। ಪ್ರಭಾಕರ್ ಪೂಜಾರಿ, ನೂತನ ಅಧ್ಯಕ್ಷರು