ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಭಾರತ ಬ್ರಿಟಿಷರಿಂದ ಸ್ವತಂತ್ರವಾಯಿತು. ಬಡತನಮುಕ್ತ ಭಾರತ, ಹಸಿವುಮುಕ್ತ ಭಾರತ, ಜಾತೀಯತೆಯ ಭೂತ ಹೋಗಿದೆಯಾ?, ಲಿಂಗತಾರತಮ್ಯದಿಂದ ಪಾರಾಗಿದೆಯಾ? ನಿರುದ್ಯೋಗ ಸಮಸ್ಯೆ ಪರಿಹಾರವಾಗಿದೆಯಾ?, ಶೋಷಣೆ ವಿರುದ್ಧ ಧ್ವನಿ ಗಟ್ಟಿಯಾಗಿದೆಯಾ? ದೌರ್ಜನ್ಯದ ನಿಗ್ರಹದ ಕಡೆ ಗಮನ ಹರಿದಿದೆಯಾ?. ಹಿಂಸೆಯ ವಿರುದ್ಧ ಬಂಡೇಳುವ ಪ್ರವೃತ್ತಿ ಜಾಗೃತವಾಗಿದೆಯಾ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರದ ಹುಡುಕಾಟದಲ್ಲಿಯೇ ನಾವಿದ್ದೇವೆ ಎಂದು ಜಾನಪದ ವಿದ್ವಾಂಸ ಡಾ. ಎಂ.ಬೈರೇಗೌಡ ಹೇಳಿದರು.ನಗರದ ನೇಟಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಈ ದೇಶ ಮತ್ತು ನಾವು ಪಡೆಯಬೇಕಾದ ಸ್ವಾತಂತ್ರ್ಯಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಮ್ಮ ಮತ್ತು ಮುಂದಿನ ತಲೆಮಾರಿನ ಉಳುವಿಗಾಗಿ ನಾವು ಒಟ್ಟಾಗಿ ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜಾಗುವ ಕಾಲಘಟ್ಟದಲ್ಲಿ ನಿಂತಿದ್ದೇವೆ. ಈ ಅರಿವನ್ನು ಮನನ ಮಾಡಿಕೊಳ್ಳುತ್ತಾ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸೋಣ ಎಂದು ಕರೆ ನೀಡಿದರು.ಪಟೇಲ್ ಆಂಗ್ಲ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ : ರಾಮನಗರ: ನಗರದ ಪಟೇಲ್ ಆಂಗ್ಲ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ನ ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯರಾದ ಮಮತಾರವರು ಧ್ವಜಾರೋಹಣ ನೆರವೇರಿಸಿದರು.ಅಧ್ಯಕ್ಷತೆ ವಹಿಸಿದ್ದ ರಾಮನಗರ ರೋಟರಿ ಸಂಸ್ಥೆಯ ಅಧ್ಯಕ್ಷ ಶಿವಣ್ಣ ಮಾತನಾಡಿ, ಶಾಲಾ ಮಕ್ಕಳು ಸ್ನೇಹಮಯಿ ಜೀವಿಗಳಾಗಿ ಇಂದು ಭಾರತ ದೇಶ ಪ್ರಪಂಚದಲ್ಲಿ ಒಂದು ಉನ್ನತ ಸ್ಥಾನವನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಸಮಾರಂಭ ಉದ್ಘಾಟಿಸಿದ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಪಟೇಲ್ ಸಿ. ರಾಜು , ಶಾಲಾ ಮಕ್ಕಳು ದೇಶಪ್ರೇಮಿಗಳಾಗಿ ಬಾಳಬೇಕು, ದೇಶದ ಬಗ್ಗೆ ಪ್ರತಿಯೊಬ್ಬರೂ ಹೆಮ್ಮೆಪಡುವಂತವಾಗಬೇಕು. ಇಂದು ಭಾರತ ದೇಶ 140 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ವಿಶ್ವದಲ್ಲಿ ಮೂರನೇ ಒಂದು ಭಾಗದಷ್ಟಿದೆ. ಭಾರತ ರಾಷ್ಟ್ರವಿಂದು ಪ್ರಪಂಚದಲ್ಲಿ ಮಧ್ಯಸ್ಥಿಕೆ ವಹಿಸುವಂತಹ ಒಂದು ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಿದೆ. ಪ್ರಪಂಚದಲ್ಲಿ ಮುಂದುವರಿದ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ರೋಟರಿ ನಿಕಟ ಪೂರ್ವ ಅಧ್ಯಕ್ಷ ಪಿ. ಉಮೇಶ್ , ಜಯಕುಮಾರ್ , ಸಿದ್ದಪ್ಪ , ಶಿವಕುಮಾರ್ ಹಾಗೂ ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.
ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ರಾಮನಗರ: ನಗರದ ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಎಚ್. ಚಂದ್ರಶೇಖರ್ ಮಾತನಾಡಿ, ಹಿರಿಯರ ಹೋರಾಟದ ಫಲವಾಗಿ ಬಂದ ಸ್ವಾತಂತ್ರ್ಯವನ್ನು ನಾವು ಇಂದು ಸ್ವೇಚ್ಛಾಚಾರಕ್ಕಾಗಿ ನಾವು ಅನುಭವಿಸುತ್ತಿದ್ದೇವೆ. ಇತರರ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ ನಡೆದುಕೊಂಡರೆ ಅದು ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ನೀಡುವ ಗೌರವವಾಗಿದೆ ಹಾಗಾಗಿ ಭವಿಷ್ಯದ ನಾಯಕರಾದ ನೀವು ಬೇರೆಯವರ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ ಜೀವನ ನಡೆಸಬೇಕು. ದೇಶದ ಬೆಳವಣಿಗೆಗೆ ಸಹಾಯಕವಾಗುವಂತ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯ ಎಲ್ಲಾ ವಿಭಾಗದ ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.