ಕನ್ನಡಪ್ರಭ ವಾರ್ತೆ ಬೆಳಗಾವಿ ಮರಾಠಾ ಲಘು ಪದಾದತಿ ದಳ(ಎಂಎಲ್‌ಐಆರ್‌ಸಿ)ದಲ್ಲಿ ಅಗ್ನಿಪಥ್ ಯೋಜನೆಯಡಿ ತರಬೇತಿ ಪೂರ್ಣಗೊಳಿಸಿದ ಅಗ್ನಿವೀರರ 7ನೇ ಬ್ಯಾಚ್‌ನ ಪ್ರಮಾಣ ವಚನ ಸ್ವೀಕಾರ ಹಾಗೂ ತರಬೇತಿ ಪೂರ್ಣ ಪರೇಡ್ ಶನಿವಾರ ಯಶಸ್ವಿಯಾಗಿ ನೆರವೇರಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮರಾಠಾ ಲಘು ಪದಾದತಿ ದಳ(ಎಂಎಲ್‌ಐಆರ್‌ಸಿ)ದಲ್ಲಿ ಅಗ್ನಿಪಥ್ ಯೋಜನೆಯಡಿ ತರಬೇತಿ ಪೂರ್ಣಗೊಳಿಸಿದ ಅಗ್ನಿವೀರರ 7ನೇ ಬ್ಯಾಚ್‌ನ ಪ್ರಮಾಣ ವಚನ ಸ್ವೀಕಾರ ಹಾಗೂ ತರಬೇತಿ ಪೂರ್ಣ ಪರೇಡ್ ಶನಿವಾರ ಯಶಸ್ವಿಯಾಗಿ ನೆರವೇರಿತು.

ಸಂಪೂರ್ಣ ಮಿಲಿಟರಿ ಸಂಪ್ರದಾಯದೊಂದಿಗೆ ನಡೆದ ಈ ಆಕರ್ಷಕ ಪೆರೇಡ್‌ನಲ್ಲಿ 24 ವಾರಗಳ ಕಠಿಣ ಮಿಲಿಟರಿ ತರಬೇತಿಯನ್ನು ಅಧಿಕೃತವಾಗಿ ಪೂರ್ಣಗೊಳಿಸಿದ ಒಟ್ಟು 765 ಅಗ್ನಿವೀರರು ರಾಷ್ಟ್ರಧ್ವಜ, ರೆಜಿಮೆಂಟಲ್ ಧ್ವಜ ಹಾಗೂ ವಿವಿಧ ಧರ್ಮಗಳ ಪವಿತ್ರ ಗ್ರಂಥಗಳ ಸಾಕ್ಷಿಯಾಗಿ ಅಗ್ನಿವೀರರು ದೇಶನಿಷ್ಠೆಯ ಪ್ರಮಾಣ ವಚನ ಸ್ವೀಕರಿಸಿದರು.

ಎಂಎಲ್‌ಐಆರ್‌ಸಿ ಕಮಾಂಡೆಂಟ್ ಬ್ರಿಗೇಡಿಯರ್ ಗಿರೀಶ್‌ ಉಪಾಧ್ಯ ಪೆರೇಡ್‌ನ್ನು ಪರಿಶೀಲನೆ ನಡೆಸಿದರು. ಅಗ್ನಿವೀರ್‌ ಸಂಕೇತ ಸಿಂಗ್ ಪೆರೇಡ್ ಮುನ್ನಡೆಸಿದರೆ, ಮೇಜರ್ ಗಜಾನನ್ ಪಾಟೀಲ ಪೆರೇಡ್ ಅಡ್ಜುಟೆಂಟ್ ಆಗಿ ಕಾರ್ಯನಿರ್ವಹಿಸಿದರು.

ಯುವ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಬ್ರಿಗೇಡಿಯರ್ ಗಿರೀಶ್ ಉಪಾಧ್ಯ, ಭಾರತೀಯ ಸೇನೆಯ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ರೆಜಿಮೆಂಟ್‌ಗಳಲ್ಲಿ ಒಂದಾದ ಮರಾಠಾ ಲೈಟ್ ಇನ್‌ಫೆಂಟ್ರಿಯ ಶ್ರೀಮಂತ ಇತಿಹಾಸ ಮತ್ತು ವೀರ ಪರಂಪರೆಯನ್ನು ಸೈನಿಕರು ಸದಾ ನೆನಪಿನಲ್ಲಿಡಬೇಕು. ಪ್ರತಿಯೊಬ್ಬ ಸೈನಿಕನ ಜೀವನದಲ್ಲೂ ಶಿಸ್ತು ಮತ್ತು ದೈಹಿಕ ಸಾಮರ್ಥ್ಯ ಅತ್ಯಂತ ಮುಖ್ಯ ಎಂದು ಕಿವಿಮಾತು ಹೇಳಿದರು.

ತರಬೇತಿ ಅವಧಿಯಲ್ಲಿನ ಒಟ್ಟಾರೆ ಅತ್ಯುತ್ತಮ ಪ್ರದರ್ಶನಕ್ಕಾಗಿ ಅಗ್ನಿವೀರ್‌ ಘೋಲಪ್ ಆದರ್ಶಗೆ ಪ್ರತಿಷ್ಠಿತ ನಾಯಕ್ ಯಶವಂತ್ ಗಾಡಗೆ ವಿಕ್ಟೋರಿಯಾ ಕ್ರಾಸ್ ಮೆಡಲ್ ನೀಡಿ ಗೌರವಿಸಲಾಯಿತು.

ಪೆರೇಡ್ ನಂತರ ಶರ್ಕತ್ ಯುದ್ಧ ಸ್ಮಾರಕಕ್ಕೆ ತೆರಳಿದ ಅಧಿಕಾರಿಗಳು ಮತ್ತು ನೂತನ ಸೈನಿಕರು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಪುಷ್ಪಗುಚ್ಛ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ವೇಳೆ, ತಮ್ಮ ಮಕ್ಕಳನ್ನು ದೇಶಸೇವೆಗೆ ಕಳುಹಿಸಲು ಪ್ರೇರೆಪಿಸಿದ ಹೆಮ್ಮೆಯ ಪೋಷಕರಿಗೆ ಗೌರವ ಪದಕ ನೀಡಿ ಸನ್ಮಾನಿಸಿದರು.