ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ಬಡವರಿಗೋಸ್ಕರ ವಿಶೇಷವಾಗಿ ಆರೋಗ್ಯ ಭಾಗ್ಯವನ್ನು ಕಲ್ಪಿಸುವ ಉದ್ದೇಶದಿಂದ ಆಯೋಜಿಸಿರುವ ಈ ಆರೋಗ್ಯ ಮೇಳ ಯಶಸ್ವಿಯಾಗಿರುವುದರ ಜೊತೆಗೆ ೮ ಸಾವಿರ ಜನರು ಈ ಮೇಳದ ಲಾಭವನ್ನು ಪಡೆದುಕೊಂಡಿರುವುದು ಖುಷಿ ತಂದಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಪಂ ಸಹಯೋಗದೊಂದಿಗೆ ಹಮ್ಮಿಕೊಂಡ ಬೃಹತ್ ಆರೊಗ್ಯ ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರದ ಯೋಜನೆಗಳನ್ನು ಬಡವರ ಮನೆಗೆ ತಲುಪಿಸುವಂತ ಕಾರ್ಯ ಮಾಡಲಾಗುತ್ತಿದೆ. ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಜೊತೆಗೆ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೂ ಸಹ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡುರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ವ್ಯವಸ್ಥೆಗೆ ಶಿಕ್ಷಣ ಮತ್ತು ಆರೋಗ್ಯ ಬಹಳ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ನಮ್ಮ ಸರಕಾರ ಬಡಜನರ ಸಮೀಪಕ್ಕೆ ಹೋಗಿ ಆರೋಗ್ಯ ಸೇವೆ ಮಾಡುತ್ತಿದೆ ಎಂದರು. ಸೂಕ್ತ ಸಮಯದಲ್ಲಿ ನಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಂಡಲ್ಲಿ ನಮಗೆ ಮುಂದೆ ಎದುರಾಗುವ ಅನಾರೋಗ್ಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯ ಎಂದರು. ಆ ನಿಟ್ಟಿನಲ್ಲಿ ಜನರ ಮನೆ ಬಾಗಿಲಿಗೆ ಬಂದು ಈ ಬೃಹತ್ ಆರೋಗ್ಯ ಮೇಳವನ್ನು ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಸವದತ್ತಿಯಲ್ಲಿ ₹೬೬ ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಆಸ್ಪತ್ರೆ ಉನ್ನತೀಕರಣಗೊಳಿಸಲಾಗುತ್ತಿದೆ. ಅದರಂತೆ ರಾಮದುರ್ಗ ಮತ್ತು ಕಿತ್ತೂರಿನಲ್ಲಿ ನೂತನ ಸಾರ್ವಜನಿಕ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಕರ್ನಾಟಕದಲ್ಲಿಯೇ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಬೆಳಗಾವಿಯಲ್ಲಿ ಇನ್ನೊಂದು ಜಿಲ್ಲಾ ಆಸ್ಪತ್ರೆ ನಿರ್ಮಿಸುವ ಗುರಿ ಹೊಂದಲಾಗಿದ್ದು, ಬರುವಂತ ದಿನಗಳಲ್ಲಿ ಗೋಕಾಕದಲ್ಲಿ ಇನ್ನೊಂದು ಜಿಲ್ಲಾ ಆಸ್ಪತ್ರೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದರು. ಬರುವ ತಿಂಗಳಲ್ಲಿ ಗೃಹ ಆರೋಗ್ಯ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಪ್ರಾರಂಭಿಸಲಾಗುತ್ತಿದೆ. ಈ ಯೋಜನೆಯಲ್ಲಿ ಜಿಲ್ಲೆಯ ಪ್ರತಿಯೊಂದು ಕುಟುಂಬದ ಸದಸ್ಯರನ್ನು ಭೇಟಿಯಾಗಿ ಅವರನ್ನು ತಪಾಸಣೆ ಮಾಡುವ ಮೂಲಕ ಜನರಿಗೆ ಸೂಕ್ತ ಆರೋಗ್ಯ ರಕ್ಷಣೆ ಮಾಡಲಾಗುತ್ತಿದೆ ಎಂದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಘನ ಸರಕಾರವು ಸವದತ್ತಿಯಲ್ಲಿ ಆರೋಗ್ಯ ಮೇಳವನ್ನು ಮಾಡಲು ಅವಕಾಶ ಕಲ್ಪಿಸಿರುವುದು ನಮ್ಮ ಭಾಗ್ಯ ಎಂದರು. ಬಡವರಿಗೆ ಮತ್ತು ದೀನ-ದಲಿತರಿಗೆ ಈ ಆರೋಗ್ಯ ಮೇಳ ಅತ್ಯಂತ ಅನುಕೂಲವಾಗಿದ್ದು, ೮ ಸಾವಿರಕ್ಕೂ ಅಧಿಕ ಜನರು ಈ ಮೇಳದ ಲಾಭವನ್ನು ಪಡೆದುಕೊಂಡಿದ್ದಾರೆ. ೮೦ ಜನರಿಗೆ ಬೇರೆ ಕಡೆಗೆ ಚಿಕಿತ್ಸೆ ನೀಡಲು ಶಿಫಾರಸ್ಸು ಮಾಡಲಾಗಿದೆ. ಸವದತ್ತಿ ಶಿಥಿಲಾವಸ್ಥೆಯಲ್ಲಿರುವ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಹೈಟೆಕ್ ಆಸ್ಪತ್ರೆಯನ್ನಾಗಿ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿದರು. ವೇದಿಕೆ ಮೇಲೆ ಕ್ಷಯ ಮುಕ್ತ ಗ್ರಾಪಂಗಳಾದ ಬಡ್ಲಿ, ಚಚಡಿ, ಗೊರವನಕೊಳ್ಳ, ಹಿರೇಕುಂಬಿ, ಹೂಲಿ, ಹೊಸೂರ, ಇನಾಮಹೊಂಗಲ, ಮಬನೂರ, ಮದ್ಲೂರ, ಸುತಗಟ್ಟಿ, ಉಗರಗೋಳ ಪಂಚಾಯತಿಗಳ ಅಧ್ಯಕ್ಷರುಗಳಿಗೆ ಸನ್ಮಾನಿಸಲಾಯಿತು. ಸಾಂಕೇತಿಕವಾಗಿ 5 ವಿದ್ಯಾರ್ಥಿಗಳಿಗೆ ಕನ್ನಡಕ ವಿತರಿಸಲಾಯಿತು. ರಾಷ್ಟ್ರೀಯ ಶ್ರವಣದೋಷ ನಿವಾರಣಾ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಫಲಾನುಭವಿಗಳಿಗೆ ಶ್ರವಣ ಸಾಧನಗಳನ್ನು ವಿತರಿಸಲಾಯಿತು. ಕಾಂಕ್ಲಿಯರ್ ಇಂಪ್ಯಾಂಟ್ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಮಕ್ಕಳನ್ನು ಪ್ರೋತ್ಸಾಹಿಸಲಾಯಿತು.
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ಆರೋಗ್ಯ ಇಲಾಖೆ ಆಯುಕ್ತ ಶಿವಕುಮಾರ, ಡಾ.ಪುಷ್ಪಾ ಎಚ್.ಆರ್, ಜಿಪಂ ಸಿಇಒ ರಾಹುಲ ಶಿಂಧೆ, ಡಿಎಚ್‌ಒ ಡಾ.ಐ.ಪಿ.ಗಡಾದ, ಡಾ.ಎಸ್.ಎಸ್.ಗಡೇದ, ತಹಸೀಲ್ದಾರರಾದ ಮಲ್ಲಿಕಾರ್ಜುನ ಹೆಗ್ಗಣ್ಣವರ, ಎಂ.ವಿ.ಗುಂಡಪ್ಪಗೋಳ, ತಾಪಂ ಇಒ ಆನಂದ ಬಡಕುಂದ್ರಿ, ಟಿಎಚ್‌ಒ ಡಾ.ಶ್ರೀಪಾದ ಸಬನೀಸ, ಚಂದ್ರು ಜಂಬ್ರಿ, ಸಿ.ಬಿ.ಬಾಳಿ ಇತರರು ಉಪಸ್ಥಿತರಿದ್ದರು. ಶಿವಾನಂದ ತಾರೀಹಾಳ ನಿರೂಪಿಸಿ, ಡಾ.ಮಲ್ಲನಗೌಡ ಪಾಟೀಲ ವಂದಿಸಿದರು.