ಬಿಬಿಎಂಪಿಯ ಪೌರಕಾರ್ಮಿಕ ನೇಮಕಾತಿ ಪ್ರಕ್ರಿಯೆ ಬಹುತೇಕ ಅಂತಿಮಗೊಂಡಿದ್ದು, ಕಾಯಂಗೊಂಡಿರುವ 12 ಸಾವಿರ ಹುದ್ದೆಗಳ ಪೈಕಿ ಸುಮಾರು 8 ಸಾವಿರ ಮಹಿಳಾ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿಯ ಪೌರಕಾರ್ಮಿಕ ನೇಮಕಾತಿ ಪ್ರಕ್ರಿಯೆ ಬಹುತೇಕ ಅಂತಿಮಗೊಂಡಿದ್ದು, ಕಾಯಂಗೊಂಡಿರುವ 12 ಸಾವಿರ ಹುದ್ದೆಗಳ ಪೈಕಿ ಸುಮಾರು 8 ಸಾವಿರ ಮಹಿಳಾ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಬಿಬಿಎಂಪಿಯಲ್ಲಿ ಗುತ್ತಿಗೆ ಹಾಗೂ ನೇರ ಪಾವತಿಯಡಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಎರಡು ಹಂತದಲ್ಲಿ ನೇಮಕ ಮಾಡಿಕೊಳ್ಳಲಾಗಿದ್ದು, ಒಟ್ಟು 14980 ಪೌರಕಾರ್ಮಿಕರನ್ನು ಕಾಯಂಗೊಳಿಸವುದಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಪೈಕಿ ಇದೀಗ 12,699 ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಇದರಲ್ಲಿ ಬಹುತೇಕ 7,500 ರಿಂದ 8 ಸಾವಿರ ಮಹಿಳಾ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲಿ ನೇಮಕಾತಿ ಪತ್ರ ವಿತರಣೆ ಮಾಡಲಾಗುವುದು ಎಂದು ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತ ಮಂಜುನಾಥ ಸ್ವಾಮಿ ಮಾಹಿತಿ ನೀಡಿದ್ದಾರೆ.

ಹಲವು ವರ್ಷದಿಂದ ಮಹಿಳಾ ಪೌರ ಕಾರ್ಮಿಕರು ಗುತ್ತಿಗೆ ಹಾಗೂ ನೇರ ಪಾವತಿಯಡಿ ಕಾರ್ಯ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದರು. ಕಾಯಂಗೊಳಿಸುವುದಕ್ಕೆ ಕನಿಷ್ಠ ಎರಡು ವರ್ಷ ಅರ್ಹತೆ ಸೂಚಿಸಲಾಗಿತ್ತು.

2281 ಹುದ್ದೆ ಖಾಲಿ:

ಬಿಬಿಎಂಪಿಯು ಮೊದಲ ಹಂತದಲ್ಲಿ 3,673 ಹುದ್ದೆ, ಎರಡನೇ ಹಂತದಲ್ಲಿ 11,307 ಹುದ್ದೆ ಸೇರಿ ಒಟ್ಟು 14,980 ಹುದ್ದೆ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಮೀಸಲಾತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ನೇಮಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಮೀಸಲಾತಿ ಪಾಲನೆಗೆ ವಿನಾಯಿತಿ ಪಡೆಯಲಾಗಿತ್ತು. ಹಾಗಾಗಿ ಇನ್ನೂ 2281 ಹುದ್ದೆ ಖಾಲಿ ಇವೆ. ಈ ಹುದ್ದೆಗೆ ಗ್ರಾಮೀಣ ಅಭ್ಯರ್ಥಿ, ಅಂಗವಿಕಲ, ಮಾಜಿ ಸೈನಿಕ ಸೇರಿದಂತೆ ಮೊದಲಾದ ಮೀಸಲಾತಿಗೆ ಭರ್ತಿ ಸಾಧ್ಯವಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ವಲಯವಾರು ನೇಮಕಾತಿ ವಿವರ

ವಲಯ ನೇಮಕಾತಿ ಸಂಖ್ಯೆ

ಪಶ್ಚಿಮ2564

ಪೂರ್ವ2341

ದಕ್ಷಿಣ3012

ಆರ್‌ಆರ್‌ನಗರ1118

ಮಹದೇವಪುರ1369

ಬೊಮ್ಮನಹಳ್ಳಿ1019

ದಾಸರಹಳ್ಳಿ468

ಯಲಹಂಕ808

ಒಟ್ಟು12,699