ಸಾರಾಂಶ
ನದಿ ತೀರದಲ್ಲಿ ಹಲುವಾಗಲು, ಗರ್ಭಗುಡಿ, ತಾವರಗೊಂದಿ, ನಿಟ್ಟೂರು, ನಿಟ್ಟೂರು-ಬಸ್ಸಾಪುರ, ವಟ್ಲಹಳ್ಳಿ, ಕಡತಿ, ನಂದ್ಯಾಲ ಹೀಗೆ ಎಂಟು ಗ್ರಾಮಗಳು ಪ್ರವಾಹದ ಭೀತಿಯಲ್ಲಿವೆ.
ಹರಪನಹಳ್ಳಿ: ತುಂಗಭದ್ರಾ ನದಿ ಉಕ್ಕಿ ಹರಿದ ಪರಿಣಾಮ ತಾಲೂಕಿನ ಹಲುವಾಗಲು -ಗರ್ಭಗುಡಿ ಗ್ರಾಮಗಳ ಮಧ್ಯೆ ರಸ್ತೆ ಬಂದ್ ಆಗಿದೆ.ನದಿ ತೀರದಲ್ಲಿ ಹಲುವಾಗಲು, ಗರ್ಭಗುಡಿ, ತಾವರಗೊಂದಿ, ನಿಟ್ಟೂರು, ನಿಟ್ಟೂರು-ಬಸ್ಸಾಪುರ, ವಟ್ಲಹಳ್ಳಿ, ಕಡತಿ, ನಂದ್ಯಾಲ ಹೀಗೆ ಎಂಟು ಗ್ರಾಮಗಳು ಪ್ರವಾಹದ ಭೀತಿಯಲ್ಲಿವೆ. ದಿನದಿಂದ ದಿನಕ್ಕೆ ನದಿಯಲ್ಲಿ ನೀರು ಹೆಚ್ಚುತ್ತಿದೆ. ಇದರಿಂದ ಈ ಭಾಗದ ಜನತೆ ಆತಂಕದ ಕ್ಷಣ ಎದುರಿಸುತ್ತಿದ್ದಾರೆ.
ನೋಡಲ್ ಅಧಿಕಾರಿಗಳ ನೇಮಕ:ಪ್ರವಾಹ ಪರಿಸ್ಥಿತಿ ಎದುರಿಸಲು ನದಿ ಪಾತ್ರದ ಜನರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಗ್ರಾಮವಾರು ನೋಡಲ್ ಅಧಿಕಾರಿಗಳನ್ನು ವಿಜಯನಗರ ಜಿಲ್ಲಾಧಿಕಾರಿ ನೇಮಕ ಮಾಡಿದ್ದಾರೆ.
ವಟ್ಲಹಳ್ಳಿ- ಲೋಕೋಪಯೋಗಿ ಎಇಇ, ಕಡತಿ -ಪುರಸಭಾ ಮುಖ್ಯಾಧಿಕಾರಿ, ನಂದ್ಯಾಲ -ಶಿಶು ಅಭಿವೃದ್ದಿ ಯೋಜನಾಧಿಕಾರಿ, ನಿಟ್ಟೂರು -ಹಡಗಲಿಯ ನರೇಗಾದ ಸಹಾಯಕ ನಿರ್ದೆಶಕ, ನಿಟ್ಟೂರು ಬಸ್ಸಾಪುರ -ಪಶು ಇಲಾಖೆಯ ಸಹಾಯಕ ನಿರ್ದೇಶಕ, ತಾವರಗೊಂದಿ -ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ, ಹಲುವಾಗಲು ಹಾಗೂ ಗರ್ಭಗುಡಿ ಗ್ರಾಮಗಳಿಗೆ ಬಿಇಒ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.ಹಲುವಾಗಲುದಲ್ಲಿ ಕಾಳಜಿ ಕೇಂದ್ರ:
ನದಿ ತೀರದ ಗ್ರಾಮಗಳಲ್ಲಿ ನದಿ ತೀರಕ್ಕೆ ಯಾರೂ ಹೋಗಬಾರದು., ಜಾನುವಾರುಗಳನ್ನು ಬಿಡಬಾರದೆಂದು ಡಂಗೂರ ಸಾರಲಾಗಿದೆ. ಒಂದು ವೇಳೆ ಪ್ರವಾಹ ಬಂದಲ್ಲಿ ಮೊದಲು ಹಲುವಾಗಲು ಮೊರಾರ್ಜಿ ವಸತಿ ಶಾಲೆಯಲ್ಲಿ ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಾವರಗೊಂದಿ ನೋಡಲ್ ಅಧಿಕಾರಿ ರೇಣುಕಾದೇವಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ತಾಲೂಕಿನ ಎಂಟು ಗ್ರಾಮಗಳಲ್ಲಿ ಸಹ ಕಾಳಜಿ ಕೇಂದ್ರ ತೆರೆಯಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ನದಿ ತೀರದಲ್ಲಿ ಹಗಲು-ರಾತ್ರಿ ನಿಗಾ ವಹಿಸಲಾಗಿದೆ ಎಂದು ತಹಶೀಲ್ದಾರ ಬಿ.ವಿ.ಗಿರೀಶಬಾಬು ತಿಳಿಸಿದ್ದಾರೆ.