ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿರುವ 41.07 ಲಕ್ಷ ಮತದಾರರಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಡಿಯಲ್ಲಿ ಗಣತಿ ನಮೂನೆಗಳ ವಿತರಣೆ ಶೇ.100ರಷ್ಟು ಪೂರ್ಣಗೊಂಡಿದೆ. ಈವರೆಗೆ 33,10,399 ಮತದಾರರ ನಮೂನೆಗಳ ಡಿಜಿಟಲೀಕರಣ ಮುಗಿದಿದ್ದು, ಜಿಲ್ಲೆಯಲ್ಲಿ ಶೇ.80.60ರಷ್ಟು ಪ್ರಗತಿ ಸಾಧಿಸಲಾಗಿದೆ. ಇದು ರಾಜ್ಯದಲ್ಲೇ ಅತಿ ಹೆಚ್ಚಿನ ಪ್ರಗತಿಯಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 4,525 ಮತಗಟ್ಟೆ ಮಟ್ಟದ ಅಧಿಕಾರಿಗಳು ಹಗಲು-ರಾತ್ರಿ, ಬಿಸಿಲು-ಮಳೆ ಲೆಕ್ಕಿಸದೆ ಮನೆಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸಿದ್ದಾರೆ. ಪ್ರತಿ ಅಧಿಕಾರಿಗೆ ಸರಾಸರಿ 908 ಮತದಾರರ ಜವಾಬ್ದಾರಿ ನೀಡಲಾಗಿದೆ. ಶುಕ್ರವಾರ ಮಧ್ಯಾಹ್ನ 12 ಗಂಟೆಯವರೆಗೆ 33.10 ಲಕ್ಷ ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಪ್ರತಿ ಎರಡು ಗಂಟೆಗೆ ಸುಮಾರು ಶೇ.1.5ರಷ್ಟು ಕೆಲಸ ಪ್ರಗತಿಯಾಗುತ್ತಿದೆ. ರಾಜ್ಯದಲ್ಲಿ ಸರಾಸರಿ ಶೇ.70ರಷ್ಟಿದ್ದರೆ, ಬೆಳಗಾವಿ ಜಿಲ್ಲೆಯಲ್ಲಿ ಶೇ.80.60ರಷ್ಟು ಕೆಲಸ ಮುಗಿದಿದೆ ಎಂದರು.ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.91.08ರಷ್ಟು ಡಿಜಿಟಲೀಕರಣ ಪೂರ್ಣಗೊಂಡಿದೆ. ಬೈಲಹೊಂಗಲ ಶೇ.89.54, ಖಾನಾಪುರ ಶೇ.87.26, ನಿಪ್ಪಾಣಿ ಶೇ.87.02, ಸವದತ್ತಿ ಯಲ್ಲಮ್ಮ ಶೇ.86.72, ಕಿತ್ತೂರು ಶೇ.86.11, ಚಿಕ್ಕೋಡಿ-ಸದಲಗಾ ಶೇ.85.97, ಹುಕ್ಕೇರಿ ಶೇ.85.73, ಕಾಗವಾಡ ಶೇ.84.53, ರಾಯಬಾಗ ಶೇ.83.34 ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೇ.83.21ರಷ್ಟು ಪ್ರಗತಿ ದಾಖಲಾಗಿದೆ. ಅಥಣಿ ಶೇ.81.09, ರಾಮದುರ್ಗ ಶೇ.80.29, ಗೋಕಾಕ ಶೇ.74.72, ಅರಭಾವಿ ಶೇ.74.69, ಕುಡಚಿ ಶೇ.73.20, ಬೆಳಗಾವಿ ದಕ್ಷಿಣ ಶೇ.65.57 ಹಾಗೂ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಶೇ.59.62ರಷ್ಟು ಡಿಜಿಟಲೀಕರಣ ಪೂರ್ಣಗೊಂಡಿದೆ. ಕಡಿಮೆ ಪ್ರಗತಿ ಇರುವ ಕ್ಷೇತ್ರಗಳಲ್ಲಿ ಕೆಲಸವನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ನಮೂನೆ ಸಲ್ಲಿಸಲು 4 ದಿನ ಅವಕಾಶ:
ಮೊದಲ ಹಂತದಲ್ಲಿ ಸಂಗ್ರಹಿಸಲಾಗದ ನಮೂನೆಗಳನ್ನು ಪ್ರತ್ಯೇಕವಾಗಿ ಉಳಿಸಲಾಗಿದೆ. ಮತದಾರರು ಬೇರೆ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಅಥವಾ ಮತಗಟ್ಟೆ ವ್ಯಾಪ್ತಿಯಿಂದ ಹೊರಗಿದ್ದರೆ ತಕ್ಷಣ ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿ ಸಂಪರ್ಕಿಸಬೇಕು. ಇದಕ್ಕಾಗಿ ನಾಲ್ಕು ದಿನಗಳ ಕಾಲಾವಕಾಶವಿದೆ. ನಮೂನೆ ಸಲ್ಲಿಸದಿದ್ದರೆ ಅಂತಹ ಮತದಾರರನ್ನು ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಪತ್ತೆಯಾಗದವರು ಅಥವಾ ನಕಲಿ ಮತದಾರರು ಎಂಬ ವರ್ಗದಲ್ಲಿ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಲಾಗಿದ್ದು, ಪರಿಷ್ಕರಣೆ ಕಾರ್ಯದಲ್ಲಿನ ಕೆಲವು ನ್ಯೂನತೆಗಳ ಬಗ್ಗೆ ಅವರು ಗಮನ ಸೆಳೆದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 98 ಸಾವಿರ ಮತದಾರರು ಮೃತಪಟ್ಟಿರುವುದು, 4,021 ಮತದಾರರು ಪತ್ತೆಯಾಗದಿರುವುದು ಹಾಗೂ 1,06,539 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಕಂಡುಬಂದಿದೆ ಎಂದರು.ಮರಾಠಿ ಭಾಷಿಕರು ಬಹಿಷ್ಕರಿಸಬಾರದು:ಮರಾಠಿ ಭಾಷೆಯಲ್ಲಿ ಗಣತಿ ನಮೂನೆ ನೀಡಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ನಮೂನೆಯಲ್ಲಿ ಕ್ಯೂಆರ್ ಸಂಕೇತವಿದೆ. ಮರಾಠಿ ಭಾಷಿಕರಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮರಾಠಿ ಮಾದರಿ ನಮೂನೆಯನ್ನು ತೋರಿಸಲಿದ್ದಾರೆ. ಅದರ ಆಧಾರದ ಮೇಲೆ ಕನ್ನಡದಲ್ಲಿರುವ ಅಧಿಕೃತ ನಮೂನೆಯನ್ನು ಭರ್ತಿ ಮಾಡಬೇಕು. ನಮೂನೆ ಸಲ್ಲಿಸಿದರೆ ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಯಲಿದೆ. ಹೀಗಾಗಿ ಪರಿಷ್ಕರಣೆ ಕಾರ್ಯವನ್ನು ಬಹಿಷ್ಕರಿಸಬಾರದು. ಮೊದಲು ಮತದಾರರು ಮತ್ತು ದೇಶದ ನಾಗರಿಕರಾಗಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದರು.ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಲ್ಲಿ ಕೆಲ ಮತದಾರರ ಮತಗಟ್ಟೆ ಒಂದು ಕಡೆ ಇದ್ದು, ಅವರು ಬೇರೆ ಪ್ರದೇಶದಲ್ಲಿ ವಾಸಿಸುತ್ತಿರುವುದರಿಂದ ಅವರನ್ನು ಪತ್ತೆ ಹಚ್ಚುವುದು ಅಧಿಕಾರಿಗಳಿಗೆ ಕಷ್ಟವಾಗುತ್ತಿದೆ. ಆದರೂ ಮುಂದಿನ ನಾಲ್ಕೈದು ದಿನಗಳಲ್ಲಿ ಈ ಕ್ಷೇತ್ರಗಳಲ್ಲೂ ಹೆಚ್ಚಿನ ಪ್ರಗತಿ ಸಾಧಿಸಲಾಗುವುದು. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಶೇ.100ರಷ್ಟು ಕೆಲಸ ಪೂರ್ಣಗೊಳಿಸಿದ ಮೂವರು ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಸನ್ಮಾನಿಸಲಾಗಿದೆ. ಇದರಿಂದ ಅಧಿಕಾರಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಮೂಡಿದೆ ಎಂದರು.ಮಾಜಿ ದೇವದಾಸಿಯರ ಮಕ್ಕಳಿಗೆ ನೆರವು: ಮಾಜಿ ದೇವದಾಸಿಯರ ಮಕ್ಕಳ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎದುರಾಗುತ್ತಿರುವ ತೊಂದರೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಜಿಲ್ಲಾಡಳಿತದ ಬಳಿ ಮಾಜಿ ದೇವದಾಸಿಯರ ಪಟ್ಟಿಯಿದ್ದು, 18 ವರ್ಷ ಪೂರ್ಣಗೊಂಡ ಅವರ ಮಕ್ಕಳನ್ನು ಮತದಾರರ ಪಟ್ಟಿಗೆ ಸೇರಿಸಲು ಕಾನೂನುಬದ್ಧ ನೆರವು ನೀಡಲಾಗುವುದು. ಅಲೆಮಾರಿ ಸಮುದಾಯದವರ ಗುರುತು ದೃಢೀಕರಿಸುವ ಪರಿಚಿತರು ಸಹಿ ನೀಡಿದರೆ ಅವರ ಪರಿಷ್ಕರಣೆ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಗೋಷ್ಠಿಯಲ್ಲಿ ಪ್ರಶಿಕ್ಷಣಾರ್ಥಿ ಐಎಎಸ್ ಅಧಿಕಾರಿ ರೋಹಿತ್ ಸಿಂಗ್ ಹಾಗೂ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಉಪಸ್ಥಿತರಿದ್ದರು.