ರೋಣ ಮತ್ತು ಗಜೇಂದ್ರಗಡ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲಾದ ಈರುಳ್ಳಿ, ಮೆಕ್ಕೆಜೋಳ, ಹೆಸರು, ಸೂರ್ಯಕಾಂತಿ, ತೊಗರಿ ಸೇರಿದಂತೆ ಅನೇಕ ಬೆಳೆಗಳು ಮಳೆ ಕೊರತೆಯಿಂದ ಶೇ. 80ರಷ್ಟು ಹಾನಿಯಾಗಿದೆ.
ರೋಣ: ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಹಾನಿಗೊಳಗಾದ ಬೆಳೆ ಸಮೀಕ್ಷೆ ಕೈಗೊಂಡಿದ್ದು, ರೋಣ ಮತ್ತು ಗಜೇಂದ್ರಗಡ ತಾಲೂಕಿನಲ್ಲಿ ಅಪಾರ ಬೆಳೆಹಾನಿಯಾಗಿದ್ದು, ಎರಡು ತಾಲೂಕನ್ನು ಬರಪೀಡಿತ ತಾಲೂಕನ್ನಾಗಿಸಲು ವರದಿ ಸಿದ್ಧಗೊಳಿಸಿ, ಆ. 12ರಂದು ಜರುಗುವ ಕ್ಯಾಬಿನೆಟ್ ಸಭೆಗೆ ಸಲ್ಲಿಸಲಾಗುವುದು ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಶನಿವಾರ ಪಟ್ಟಣದ ತಾಪಂ ಸಭಾಭವನದಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕು ಬರ ಪರಿಸ್ಥಿತಿ ಪರಿಶೀಲನೆ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.ರೋಣ ಮತ್ತು ಗಜೇಂದ್ರಗಡ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲಾದ ಈರುಳ್ಳಿ, ಮೆಕ್ಕೆಜೋಳ, ಹೆಸರು, ಸೂರ್ಯಕಾಂತಿ, ತೊಗರಿ ಸೇರಿದಂತೆ ಅನೇಕ ಬೆಳೆಗಳು ಮಳೆ ಕೊರತೆಯಿಂದ ಶೇ. 80ರಷ್ಟು ಹಾನಿಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ವರದಿ ಸಿದ್ಧಪಡಿಸಿ, ಆ. 11ರೊಳಗೆ ನನಗೆ ಸಲ್ಲಿಸಲಿದ್ದು, ಈ ವರದಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ಆ. 12ರಂದು ಜರುಗಲಿರುವ ಕ್ಯಾಬಿನೆಟ್ ಸಭೆಯಲ್ಲಿ ಸಲ್ಲಿಸಲಾಗುವುದು ಎಂದರು.ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವಂತೆ, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಕೃಷಿ ಎಡಿ ತೀವ್ರ ತರಾಟೆಗೆ:ಸಭೆ ಪ್ರಾರಂಭಗೊಳ್ಳುತ್ತಿದಂತೆ ಕೃಷಿ ಇಲಾಖೆಯಿಂದ ಮಾಹಿತಿ ಕೇಳಿದ ಸಚಿವ ರಾಯರಡ್ಡಿ ಅವರಿಗೆ ಮಾಹಿತಿ ನೀಡಲು ಮುಂದಾದ ರೋಣ ಸಹಾಯಕ ಕೃಷಿ ನಿರ್ದೇಶಕ ಬಸವರಾಜ ಮಾಳೇದ ಅವರು ಸಚಿವರಿಗೆ ಸಮರ್ಪಕ ಮಾಹಿತಿ ನೀಡುವಲ್ಲಿ ಗೊಂದಲ ಮಾಡಿಕೊಂಡಿದ್ದಲ್ಲದೇ, ತಾವು ಹೇಳುವ ಅಂಕಿ ಅಂಶಗಳು ಒಂದಕ್ಕೊಂದು ತಾಳೆಯಾಗದನ್ನು ಗಮನಿಸಿದ ಸಚಿವರು, ಬಸವರಾಜ ಮಳೆದ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಸಭೆಯ ಗಂಭೀರತೆಯನ್ನು ಅರಿಯದೇ ತಮಗೆ ತಿಳಿದಂತೆ ಮಾಹಿತಿ ನೀಡಿದಲ್ಲಿ ತಪ್ಪಾಗುವದಿಲ್ಲವೇ? ಏನೇ ಮಾಹಿತಿ ನೀಡಿದರೂ ನಿಖರತೆಯಿರಬೇಕು. ಕಾಟಾಚಾರಕ್ಕೆ ಸಭೆಗೆ ಬರದೇ, ಸಮಗ್ರ ಮಾಹಿತಿ ಸಂಗ್ರಹಿಸಿಕೊಂಡು ಬರಬೇಕು ಎಂದ ಸಚಿವರು, ಇವರಿಗೆ ನೋಟಿಸ್ ನೀಡಿ, ಇನ್ನೊಮ್ಮೆ ಹೀಗಾಗದಂತೆ ನೀವೆ ಸರಿಯಾಗಿ ಬುದ್ಧಿ ಹೇಳಿ ಎಂದು ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಅವರಿಗೆ ಸೂಚಿಸಿದರು.ಸಭೆಗೆ ಸಮರ್ಪಕ ಮಾಹಿತಿ ನೀಡಿದ ಜಿಪಂ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ರೇಷ್ಮೀ ನಡುವುನಮನಿ, ತಾಪಂ ಇಒ ಚಂದ್ರಶೇಖರ ಕಂದಕೂರ, ತೋಟಗಾರಿಕೆ ಸಹಾಯಕ ನಿರ್ದೇಶಕ ಗಿರೀಶ ಹೊಸೂರ, ರೋಣ ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ, ಸಚಿವ ರಾಯರಡ್ಡಿ ಅವರು, ಈ ಬಗ್ಗೆ ಸಭೆಯ ನಡಾವಳಿ ಪತ್ರದಲ್ಲಿ ಈ ಬಗ್ಗೆ ಬರೆಯುವಂತೆಯೂ ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಅಪರ ಜಿಲ್ಲಾಧಿಕಾರಿ ದುರಗೇಶ ಕೆ.ಆರ್, ಜಿಪಂ ಉಪಕಾರ್ಯದರ್ಶಿ ಸಿ. ಆರ್. ಮುಂಡರಗಿ ಉಪವಿಭಾಗಾಧಿಕಾರಿ ಗಂಗಪ್ಪ ಎಂ., ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ, ಗಜೇಂದ್ರಗಡ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶರಣಪ್ಪ ಬೆಟಗೇರಿ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತೋಟಗಾರಿಕೆ ಜಂಟಿ ನಿರ್ದೇಶಕ ಚಿದಾನಂದ, ರೋಣ ತಹಸೀಲ್ದಾರ್ ನಾಗರಾಜ ಕೆ., ತಾಪಂ ಇಒ ಚಂದ್ರಶೇಖರ ಕಂದಕೂರ ಮುಂತಾದವರು ಉಪಸ್ಥಿತರಿದ್ದರು.