ಇನ್ನೊಂದೆರಡು ದಿನಗಳಲ್ಲಿ ‘ಶತಮಾನದ ಧೂಮಕೇತು’ ಬಾಹ್ಯಾಕಾಶದಲ್ಲಿ ಪ್ರತ್ಯಕ್ಷ: ಅ. 12ರಂದು ಭೂವಿಗೆ ಅತ್ಯಂತ ಸಮೀಪಕ್ಕೆ

| Published : Sep 19 2024, 02:00 AM IST / Updated: Sep 19 2024, 11:32 AM IST

ಇನ್ನೊಂದೆರಡು ದಿನಗಳಲ್ಲಿ ‘ಶತಮಾನದ ಧೂಮಕೇತು’ ಬಾಹ್ಯಾಕಾಶದಲ್ಲಿ ಪ್ರತ್ಯಕ್ಷ: ಅ. 12ರಂದು ಭೂವಿಗೆ ಅತ್ಯಂತ ಸಮೀಪಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಚಿನ್ಸನ್-ಅಟ್ಲಾಸ್ ಎಂಬ ಧೂಮಕೇತು ಸೆಪ್ಟೆಂಬರ್ ಅಂತ್ಯದಲ್ಲಿ ಸೂರ್ಯನ ಹತ್ತಿರದಿಂದ ಹಾದುಹೋಗಲಿದ್ದು, ಸೆಪ್ಟೆಂಬರ್ 27 ರಂದು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುತ್ತದೆ.  

 ಉಡುಪಿ :  ಇನ್ನೊಂದೆರಡು ದಿನಗಳಲ್ಲಿ ‘ಈ ಶತಮಾನದ ಧೂಮಕೇತು’ ಬಾಹ್ಯಾಕಾಶದಲ್ಲಿ ಕಾಣಿಸಿಕೊಳ್ಳಲಿದೆ.

ಈ ಧೂಮಕೇತುವಿನ ಹೆಸರು ‘ಸುಚಿನ್ಸನ್ - ಅಟ್ಲಾಸ್ ’. 2023 ರ ಜನವರಿಯಲ್ಲಿ ಮೊದಲ ಬಾರಿಗೆ ದೂರದರ್ಶಕದಲ್ಲಿ ಈ ಧೂಮಕೇತು ಭೂಮಿಯಿಂದ ಸುಮಾರು 100 ಕೋಟಿ ಕಿ.ಮೀ. ದೂರದಲ್ಲಿ ಗೋಚರಿಸಿತ್ತು.

ನಮ್ಮ ಸೌರವ್ಯೂಹದ ಹೊರಗಿರುವ ಊರ್ಸ್ ಕ್ಲೌಡ್ ನಿಂದ ಪ್ರತಿ ಸೆಕೆಂಡಿಗೆ 80 ಕಿ.ಮೀ ವೇಗದಲ್ಲಿ ಸೂರ್ಯ ಕಡೆಗೆ ಧಾವಿಸಿ ಬರುತ್ತಿರುವ ಈ ಧೂಮಕೇತು ಸೆಪ್ಟಂಬರ್ ಕೊನೆಗೆ ಸೂರ್ಯ ಸಮೀಪದಿಂದ ಹಾದು ಹೋಗಲಿದೆ.

ಸುಮಾರು 80 ಸಾವಿರ ವರ್ಷಕ್ಕೊಮ್ಮೆ ಸೂರ್ಯನನ್ನು ಸುತ್ತುವ ಸುಚಿನ್ಸನ್ - ಅಟ್ಲಾಸ್, ಸೆ. 27 ರಂದು ಸೂರ್ಯನ ಅತೀ ಸಮೀಪಕ್ಕೆ ಬರಲಿದ್ದು, ಸೂರ್ಯೋದಯದ ಹೊತ್ತಿಗೆ ಚೆಂದವಾಗಿ ಬರಿಗಣ್ಣಿಗೆ ಕಾಣಿಸಲಿದೆ. ಇದಕ್ಕಾಗಿ ಖಗೋಳಶಾಸ್ತ್ರಜ್ಞರು, ಖಗೋಳಾಸಕ್ತರು ವರ್ಷಗಳಿಂದ ಕಾಯುತ್ತಿದ್ದಾರೆ.

ಅದಕ್ಕೆ ಮೊದಲು ಸುಚಿನ್ಸನ್ - ಅಟ್ಲಾಸ್ ಅ. 12 ರಂದು ಭೂವಿಗೆ ಅತ್ಯಂತ ಸಮೀಪಕ್ಕೆ ಬರಲಿದೆ. ಈ ಕೆಲವು ದಿನಗಳಲ್ಲಿ ಸಂಜೆಯ ಪಶ್ಚಿಮ ಆಕಾಶದಲ್ಲಿ ಬರಿಕಣ್ಣಿಗೆ ಕಾಣಿಸಲಿದೆ. ಬೃಹತ್ ಬಾಲ ಬೀಸಿ ವಿಸ್ಮಯ ತೋರಿಸಲಿದೆ.

ಪೆಬ್ರವರಿಯಲ್ಲಿ ಕಾಣೆಯಾಗಿತ್ತು!

ಈ ಸುಚಿನ್ಸನ್ - ಅಟ್ಲಾಸ್ ಧೂಮಕೇತು ಇತ್ತೀಚೆಗೆ ಖಗೋಳಾಸಕ್ತರ ಆತಂಕ ಮತ್ತು ಆಸಕ್ತಿಗೆ ಕಾರಣವಾಗಿತ್ತು. ಸುಮಾರು 100 ಕೋಟಿ ಕಿ.ಮೀ. ದೂರದಲ್ಲಿದ್ದ ಇದು ಫೆಬ್ರವರಿ ಹೊತ್ತಿಗೆ ಇದ್ದಕ್ಕಿದ್ದಂತೆ ಕಾಣೆಯಾಗಿತ್ತು. ಖಗೋಳಜ್ಞರ ಎಂತೆಂತಹ ಪ್ರಬಲ ದೂರದರ್ಶಕಕ್ಕೂ ಇದು ಕಂಡಿರಲಿಲ್ಲ. ಆಗ ವಿಜ್ಞಾನಿಗಳು ಈ ಧೂಮಕೇತು ಸಿಡಿದೆ ಹೋಯಿತು ಎಂದೆ ಭಾವಿಸಿದ್ದರು. ಆದರೆ ಈಗ ಮತ್ತೆ ಗೋಚರಿಸಿದ್ದು, ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದು ಸುಚಿನ್ಸನ್ - ಅಟ್ಲಾಸ್ ಧೂಮಕೇತುವೇನಾ ಅಥವಾ ಅದು ಸಣ್ಣ ಭಾಗವೇ ಎಂಬ ಬಗ್ಗೆ ಚರ್ಚೆಯೂ ನಡೆಯುತ್ತಿದೆ.

ಧೂಮಕೇತುಗಳೆಂದರೆ ಅಲೆಮಾರಿಗಳು, ಇವುಗಳ ಚಲನವಲನ ಹೀಗೆಯೇ ಎನ್ನುವಂತಿಲ್ಲ, ಆದ್ದರಿಂದ ಅವು ಕಾಣೆಯಾಗುವ ಸಾಧ್ಯತೆ ಇದೆ.

ಶತಮಾನದ ಧೂಮಕೇತು ಅಂದರೆ ಅದು ಕೆಲ ತಿಂಗಳು ಆಕಾಶದಲ್ಲಿ ಬರೆಕಣ್ಣಿಗೆ ಕಂಡು ವಿಜೃಂಭಿಸುತ್ತವೆ, ವರ್ಷದ ಧೂಮಕೇತುವೆಂದರೆ ಕೆಲವೇ ದಿನವಷ್ಟೇ ಬರೆಕಣ್ಣಿಗೆ ಕಾಣುತ್ತವೆ. ಒಟ್ಟಾರೆ ಇದು ಶತಮಾನದ ಧೂಮಕೇತವೂ ಅಥವಾ ವರ್ಷದ ಧೂಮಕೇತುವೋ ಕೆಲವೇ ದಿನಗಳಲ್ಲಿ ತಿಳಿಯಲಿದೆ.

ಈ ಹಿಂದೆ ಬಂದು ಬರಿಗಣ್ಣಿಗೆ ಕಂಡ ಧೂಮಕೇತುಗಳು, 1996 ರಲ್ಲಿ ಹಯಾಕುಟಿಕೆ, 1997 ರಲ್ಲಿ ಹೇಲ್ ಬೂಪ್, 2003 ರಲ್ಲಿ ನೀಟ್, 2007 ರಲ್ಲಿ ಮಕ್ನಾಟ್, 2011 ರಲ್ಲಿ ಲವ್ಜಾಯ್ ಹಾಗೂ 2020ರಲ್ಲಿ ನಿಯೋವೈಸ್. ಈಗ ಬರುತ್ತಿರುವ ಧೂಮಕೇತು ಬರಿಗಣ್ಣಿಗೆ ಕಂಡು ಇವುಗಳ ಸಾಲಿಗೆ ಸೇರಲಿದೆಯೇ ಕಾದು ನೋಡಬೇಕಿದೆ.

ಮಾಹಿತಿ ನೀಡಿದವರು: ಉಡುಪಿಯ ಖ್ಯಾತ ಖಗೋಳ ತಜ್ಞ ಡಾ. ಎ. ಪಿ. ಭಟ್, 94483 09077