ಸಾರಾಂಶ
ಚಿತ್ರದುರ್ಗ: ಏಕೀಕರಣ ಕರ್ನಾಟಕದ ರುವಾರಿ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ನಿವಾಸ ಖರೀದಿಸಿರುವ ರಾಜ್ಯ ಸರ್ಕಾರ ಭವಿಷ್ಯದಲ್ಲಿ ಸುಂದರ ಮ್ಯೂಜಿಯಂ ಮಾಡುವ ನಿಟ್ಟಿನ ಅಗತ್ಯ ಕ್ರಮಗಳಿಗೆ ಮುಂದಾಗಿದೆ. ಲಭ್ಯವಿರುವ 80 ಲಕ್ಷ ರುಗಳನ್ನು ಆರಂಭದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಸೋಮವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರುಗಳು ಶ್ವೇತಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಿವಾಸದ ಕೀಯನ್ನು ನಿಜಲಿಂಗಪ್ಪ ಸ್ಮಾರಕ ಟ್ರಸ್ಟಿ ಕೆಇಬಿ ಷಣ್ಮುಖಪ್ಪ ಅವರಿಂದ ಸ್ವೀಕರಿಸಿದರು. ಮನೆ ಹೊರಗೆ ಹಾಗೂ ಒಳಭಾಗದಲ್ಲಿನ ಪರಿಸ್ಥಿತಿಯ ಖುದ್ದ ಅವಲೋಕಿಸಿದ ಜಿಲ್ಲಾಧಿಕಾರಿ ತುರ್ತಾಗಿ ಮಾಡಬೇಕಾದ ಕೆಲಸದ ಬಗ್ಗೆ ಚರ್ಚಿಸಿದರು. ಮನೆಯ ಒಳಾಂಗಣದ ಹಾಲ್ ಹೊರತು ಪಡಿಸಿ ಉಳಿದ ಕೊಠಡಿ ಹಾಗೂ ಅಡುಗೆ ಮನೆಗಳು ಶಿಥಿಲಾವಸ್ಥೆಯಲ್ಲಿ ಇರುವಂತೆ ಭಾಸವಾಯಿತು. ಮನೆಯನ್ನು ಮರಳಿ ಶ್ವೇತಭವನ ಸ್ಥಿತಿಗೆ ತರಲು ಒಂದಿಷ್ಟು ರಿಸ್ಕ್‌ಗಳು ಇರುವುದು ವೆಂಕಟೇಶ್ ಮನನ ಮಾಡಿಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ವಾಸವಿದ್ದ ಮನೆಯನ್ನು ಸರ್ಕಾರದಿಂದ ಖರೀದಿ ಮಾಡಿ ಸಂರಕ್ಷಣೆ ಮಾಡಿ, ಸ್ಮಾರಕ ಮಾಡಬೇಕು ಎಂಬ ಬೇಡಿಕೆ ಹಿನ್ನಲೆಯಲ್ಲಿ ಕಳೆದ ವಾರ ಖರೀದಿ ಮಾಡಲಾಗಿದೆ. ಪುನರುಜ್ಜೀವನ ಮಾಡುವ ಉದ್ದೇಶದಿಂದ ಎಸ್.ನಿಜಲಿಂಗಪ್ಪ ಅವರ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು. ನಿಜಲಿಂಗಪ್ಪ ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡುವ ನಿಟ್ಟಿನಲ್ಲಿ ಎಂಜಿನಿಯರ್‌ಗಳೊಂದಿಗೆ ಚರ್ಚಿಸಿ, ಮೊಟ್ಟ ಮೊದಲನೇಯದಾಗಿ ಸಿವಿಲ್ ಕಾಮಗಾರಿಗಳನ್ನು ಕೈಗೊಂಡು ದುರಸ್ತಿ ಪಡಿಸಲಾಗುವುದು. ನಂತರ ಸರ್ಕಾರದೊಂದಿಗೆ ಚರ್ಚಿಸಿ, ಮುಂದಿನ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಸ್ಮಾರಕ ಮಾಡುವ ನಿಟ್ಟಿನಲ್ಲಿ ತುರ್ತಾಗಿ ಎಸ್ಟಿಮೆಟ್ ಮಾಡಲು ಎಂಜಿನಿಯರ್‌ಗಳಿಗೆ ಸೂಚಿಸಲಾಗಿದ್ದು, ತಕ್ಷಣದಿಂದಲೇ ಪರಿಶೀಲನೆ ನಡೆಸುವರೆಂದರು. ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಅಂದಾಜಿಸಿದಂತೆ 4.18 ಕೋಟಿ ರುಗಳಿಗೆ ಎಸ್.ನಿಜಲಿಂಗಪ್ಪನವರ ವಾರಸುದಾರರಿಂದ ಮನೆ ಖರೀದಿ ಮಾಡಲಾಗಿದೆ. ಇನ್ನೂ 80 ಲಕ್ಷ ರು. ಅನುದಾನ ಉಳಿಕೆಯಾಗಿದ್ದು, ಈ ಅನುದಾನದಲ್ಲಿ ಸಿವಿಲ್ ಕಾಮಗಾರಿಗಳನ್ನು ನಿರ್ವಹಣೆ ಮಾಡಲಾಗುವುದು. ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದರೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ನಿಜಲಿಂಗಪ್ಪ ಅವರ ನಿವಾಸದಲ್ಲಿ ನಿಜಲಿಂಗಪ್ಪ ಅವರಿಗೆ ಸಂಬಂಧಪಟ್ಟ ಫೋಟೋಗ್ರಾಫಿ, ಉಡುಗೊರೆಗಳು ಹಾಗೂ ಅವರು ಉಪಯೋಗಿಸುತ್ತಿದ್ದ ವಸ್ತುಗಳು ಇವೆ. ಅವುಗಳನ್ನು ಯಥಾವತ್ತಾಗಿ ಪ್ರಾಚ್ಯ ವಸ್ತು ಸಂಗ್ರಾಲಯದ ಸಹಯೋಗದೊಂದಿಗೆ ಸಂರಕ್ಷಣೆ ಮಾಡಿ, ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿ, ಸಾರ್ವಜನಿಕರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.