ಅಖಂಡ ಗಂಗಾವತಿ ತಾಲೂಕಿನಲ್ಲಿ 80ರಷ್ಟು ಭತ್ತ ನಾಶ

| Published : Apr 18 2025, 12:31 AM IST

ಅಖಂಡ ಗಂಗಾವತಿ ತಾಲೂಕಿನಲ್ಲಿ 80ರಷ್ಟು ಭತ್ತ ನಾಶ
Share this Article
  • FB
  • TW
  • Linkdin
  • Email

ಸಾರಾಂಶ

10ರಿಂದ 15 ದಿನಗಳು ಕಳೆದಿದ್ದರೆ ಭತ್ತದ ಫಸಲು ರೈತರ ಕೈ ಸೇರುತ್ತಿತ್ತು. ನೀರಿನ ಅಭಾವ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ರೈತರು ಏ. 20ರ ವರಿಗೆ ಎಡದಂಡೆ ಕಾಲುವೆಗೆ ನೀರು ಬಿಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರು. ಆದರೆ, ಕಾಲುವೆಗೆ ನೀರು ಹರಿಯುವುದು ಸ್ಥಗಿತವಾಗುವ ಮೊದಲೇ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಭತ್ತ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಮಮೂರ್ತಿ ನವಲಿ

ಗಂಗಾವತಿ:

ತುಂಗಭದ್ರಾ ಜಲಾಶಯದ ನೀರಿಗೆ ಅವಲಂಬಿತರಾಗಿ ಭತ್ತ ಬೆಳೆದಿದ್ದ ರೈತರಿಗೆ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆ ಮತ್ತು ಬಿರುಗಾಳಿಗೆ ಸುಮಾರು 10000 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆ ನೆಲಕಚ್ಚಿದೆ. ಭತ್ತದ ಕಣಜ ಎನಿಸಿಕೊಂಡಿದ್ದ ಅಖಂಡ ಗಂಗಾವತಿ ತಾಲೂಕು ಈಗ ಖಾಲಿ ಕಣಜವಾಗಿ ಉಳಿದಿದೆ.

ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ವರ್ಷದ ತುತ್ತು ಒಂದೇ ಮಳೆಗೆ ಕೊಚ್ಚಿ ಹೋಯಿತು ಎಂದು ಅವರು ಮರುಕ ವ್ಯಕ್ತಪಡಿಸುತ್ತಿದ್ದಾರೆ.

10ರಿಂದ 15 ದಿನಗಳು ಕಳೆದಿದ್ದರೆ ಭತ್ತದ ಫಸಲು ರೈತರ ಕೈ ಸೇರುತ್ತಿತ್ತು. ನೀರಿನ ಅಭಾವ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ರೈತರು ಏ. 20ರ ವರಿಗೆ ಎಡದಂಡೆ ಕಾಲುವೆಗೆ ನೀರು ಬಿಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರು. ಆದರೆ, ಕಾಲುವೆಗೆ ನೀರು ಹರಿಯುವುದು ಸ್ಥಗಿತವಾಗುವ ಮೊದಲೇ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಭತ್ತ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗಂಗಾವತಿ, ಕನಕಗಿರಿ, ಕಾರಟಗಿ ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಗಂಗಾ ಕಾವೇರಿ, ಆರ್‌ಎನ್‌ಆರ್ ತಳಿಯ ಭತ್ತ ನಾಟಿ ಮಾಡಲಾಗಿತ್ತು. ಇರದಲ್ಲಿ ಶೇ. 80ರಷ್ಟು ಬೆಳೆ ಹಾನಿಯಾಗಿದೆ.

ಎಕರೆಗೆ ₹ 45 ಸಾವಿರ ಖರ್ಚು:

ಒಂದು ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡ ಬೇಕಾದರೆ ಕನಿಷ್ಠ ₹ 42ರಿಂದ ₹ 45 ಸಾವಿರ ಬೇಕು. ಗೊಬ್ಬರ, ಔಷಧ, ಟಿಲ್ಲರ್, ಪೆಡ್ಲರ್ ಮತ್ತು ಪ್ರಮುಖವಾಗಿ ಸಸಿ ನೆಡುವ ಕಾರ್ಯ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ₹ 45 ಸಾವಿರ ವೆಚ್ಚವಾಗುತ್ತದೆ. ಅಲ್ಲದೆ ಗದ್ದೆ ಮಾಲೀಕಗೆ ಗುತ್ತಿಗೆ ಹಣ ನೀಡಬೇಕು. ಈಗ ಹಾನಿಯಾಗಿದ್ದರಿಂದ ರೈತರು ಖರ್ಚು ಮಾಡಿದ ಹಣವೂ ಹೋಯಿತು, ಮಾಲೀಕನಿಗೆ ಗುತ್ತಿಗೆ ಹಣ ನೀಡವುದು ತಪ್ಪುವುದಿಲ್ಲ ಎಂಬ ಕೊರಗು ರೈತರನ್ನು ಕಾಡುತ್ತಿದೆ.

ಕನಿಷ್ಠ ವೆಚ್ಚ ನೀಡಿ:

ಭತ್ತ ಹಾನಿಯಾದ ಬಗ್ಗೆ ಕೃಷಿ ಮತ್ತು ಕಂದಾಯ ಇಲಾಖೆಗಳು ಸರ್ವೇ ಮಾಡಿ ಪರಿಹಾರ ನೀಡುವುದಕ್ಕೆ ಪ್ರಸ್ತಾವನೆ ಸಿದ್ಧಪಡಿಸಿವೆ. ಆದರೆ, ರೈತರು ಭತ್ತದ ಲಾಭ ಬೇಡ, ಕೊನೆಗೆ ಕೃಷಿ ಚಟುವಟಿಕೆಗಳಿಗೆ ವೆಚ್ಚ ಮಾಡಿದ ಹಣವನ್ನಾದರೂ ನೀಡಿ ಎಂದು ಒತ್ತಾಯಿಸಿದ್ದಾರೆ.

ಭತ್ತದ ಕಣಜ ಎನಿಸಿಕೊಂಡಿರುವ ಅಖಂಡ ಗಂಗಾವತಿ ತಾಲೂಕು ಈಗ ಖಾಲಿ ಕಣಜವಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ರೈತರ ಸಮಸ್ಯೆಗೆ ಸ್ಪಂದಿಸಬೇಕು ಎನ್ನುವುದು ರೈತರ ಧ್ವನಿಯಾಗಿದೆ.ಅಖಂಡ ಗಂಗಾವತಿ ತಾಲೂಕಿನಲ್ಲಿ ಆಲಿಕಲ್ಲು ಮಳೆಯಿಂದಾಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆ ಹಾನಿಯಾಗಿದೆ. ಇದರಿಂದ ರೈತ ಸಮುದಾಯ ಸಂಕಷ್ಟಕ್ಕೆಸಿಲುಕಿದೆ. ಇನ್ನಾದರೂ ಸರ್ಕಾರ ರೈತರಿಗೆ ಖರ್ಚು ಮಾಡಿದ ಹಣ ನೀಡಿದರೆ ಉಸಿರಾಡುವಂತೆ ಆಗುತ್ತದೆ.

ವೈ, ಆನಂದರಾವ ಪ್ರಗತಿಪರ ರೈತ, ಜಂಗಮರ ಕಲ್ಗುಡಿಈಗಾಗಲೇ ಭತ್ತ ಹಾನಿಯಾಗಿರುವ ಬಗ್ಗೆ ಸರ್ವೇ ಮಾಡಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಸರ್ಕಾರ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಹೋಬಳಿ ಮಟ್ಟದಲ್ಲಿ ಭತ್ತ ಹಾನಿಯಾದ ಬಗ್ಗೆ ವರದಿ ಪಡೆಯಲಾಗಿದ್ದು, ಸರ್ಕಾರ ಕ್ರಮ ಕೈಗೊಳ್ಳುತ್ತದೆ.

ಸಂತೋಷ ಪಟ್ಟದಕಲ್ಲು, ಎಡಿಎ ಕೃಷಿ ಇಲಾಖೆ ಗಂಗಾವತಿ