ಸಾರಾಂಶ
ಬೆಂಗಳೂರು ನಗರದಲ್ಲಿ 800 ಹೊಸ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರ ವ್ಯಾಪ್ತಿಯಲ್ಲಿ ಹೊಸದಾಗಿ 800 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಉದ್ದೇಶಿಸಿರುವುದಾಗಿ ತಿಳಿಸಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಹೈಕೋರ್ಟ್‌ಗೆ ಗುರುವಾರ ವರದಿ ಸಲ್ಲಿಸಿದೆ.ಬೆಂಗಳೂರು ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ಕೊರತೆ ಕುರಿತಂತೆ ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.
ವಿಚಾರಣೆ ವೇಳೆ ಕೆಎಸ್‌ಎಲ್‌ಎಸ್‌ಎ ಪರ ವಕೀಲ ಶ್ರೀಧರ್ ಪ್ರಭು, ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಬೆಂಗಳೂರು ಮಹಾನಗರದಲ್ಲಿನ ಶೌಚಾಲಯಗಳ ಸ್ಥಿತಿಗತಿ ಕುರಿತು ಪ್ರಾಧಿಕಾರ ನಡೆಸಿರುವ ಅಧ್ಯಯನ ವರದಿಯನ್ನು ಸಂಜೆಯ ವೇಳೆಗೆ ಸಲ್ಲಿಸಲಾಗುವುದು. ಜತೆಗೆ, ಅರ್ಜಿದಾರರು ಮತ್ತು ಸರ್ಕಾರದ ಪರ ವರದಿಯ ಪ್ರತಿಯನ್ನು ಒದಗಿಸಲಾಗುವುದು ಎಂದು ತಿಳಿಸಿದರು.ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಜ.24ಕ್ಕೆ ಮುಂದೂಡಿತು. ಮುಂದಿನ ವಿಚಾರಣೆ ವೇಳೆಗೆ ವರದಿ ಪರಿಶೀಲಿಸಿ ಅರ್ಜಿದಾರರ ಮತ್ತು ಸರ್ಕಾರದ ಪರ ವಕೀಲರು ತಮ್ಮ ಅಭಿಪ್ರಾಯ ತಿಳಿಸಬೇಕು ಎಂದು ಸೂಚಿಸಿತು.
ಇದಕ್ಕೂ ಮುನ್ನ ಪ್ರಾಧಿಕಾರದ ಪರ ವಕೀಲರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ ಒಟ್ಟು 803 ಶೌಚಾಲಯಗಳಿವೆ. ಪಾಲಿಕೆ ಹೊಸದಾಗಿ 800 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಹಾಲಿ ಇರುವ 196 ಶೌಚಾಲಯಗಳು ದುಸ್ಥಿತಿಯಲ್ಲಿದ್ದು, ಅವುಗಳನ್ನು ನವೀಕರಿಸಬೇಕಾಗಿದೆ. ನಗರದಲ್ಲಿ ಹೊಸದಾಗಿ 600 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೆ, 100 ಮಹಿಳಾ ಶೌಚಾಲಯಗಳ, 204 ಸಾರ್ವಜನಿಕ ಶೌಚಾಲಯಗಳು, 46 ‘ಒಡಿಎಫ್ ಪ್ಲಸ್ ಪ್ಲಸ್’ ಶೌಚಾಲಯಗಳನ್ನು ನಿರ್ಮಿಸುವ ಕುರಿತು ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಈ ಕುರಿತ ವಿವರಗಳು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.ಈ ವೇಳೆ ಪ್ರತಿಕ್ರಿಯಿಸಿದ ಬಿಬಿಎಂಪಿ ವಕೀಲರು, ಶೌಚಾಲಯಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದರು.
ಆಗ ನ್ಯಾಯಪೀಠ, ಎಷ್ಟು ಶೌಚಾಲಯಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂಬ ಬಗ್ಗೆ ವಿವರ ನೀಡಿ. ಶೌಚಾಲಯಗಳ ಸಂಖ್ಯೆ ನಮೂದಿಸದೆ ಸುಮ್ಮನೆ ಟೆಂಡರ್ ಕರೆದರೆ ಹೇಗೆ? ಅದೇ ಕಾರಣಕ್ಕೆ ಟೆಂಡರ್ ಪ್ರಕ್ರಿಯೆಗೆ ಕೋರ್ಟ್ ತಡೆ ನೀಡಬಹುದು. ಹಾಗಾಗಿ, ಎಷ್ಟು ಶೌಚಾಲಯಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂಬ ಮಾಹಿತಿ ನೀಡುವಂತೆ ಬಿಬಿಎಂಪಿಗೆ ಸೂಚಿಸಿತು.