ಸಾರಾಂಶ
ಕನ್ನಡಪ್ರಭ ವಾರ್ತೆ ಕಾರಟಗಿ
ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ಸೋಮವಾರ ತಾಲೂಕಿನಲ್ಲಿ ಶಾಂತಿಯುತವಾಗಿ ಶೇ.೮೧.೮೨ರಷ್ಟು ಮತದಾನವಾಗಿದೆ.ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಸಿದ್ದಾಪುರ ಗ್ರಾಮದ ಗ್ರಾಪಂ ಕಚೇರಿ ಸೇರಿ ಒಟ್ಟು ಎರಡು ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.
ಸೋಮವಾರ ಬೆಳಗ್ಗೆ ೮ ಗಂಟೆಗೆ ಸರಿಯಾಗಿ ಮತದಾನ ಪ್ರಕ್ರಿಯೆ ಪ್ರಾರಂಭವಾಯಿತು. ಪದವೀಧರ ಮತದಾರರು ಬೆಳಗ್ಗೆಯೇ ಮತದಾನಕ್ಕಾಗಿ ಆಗಮಿಸಿದರು. ಎರಡು ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.ತಾಲೂಕಿನಲ್ಲಿ ಒಟ್ಟು ೧೧೫೮ ಪದವೀಧರ ಮತದಾರರು ಇದ್ದು, ಆ ಪೈಕಿ ಕಾರಟಗಿ ಮತಗಟ್ಟೆ ವ್ಯಾಪ್ತಿಗೆ ೭೬೪ ಮತ್ತು ಸಿದ್ದಾಪುರದಲ್ಲಿ ೩೯೪ ಜನ ಮತದಾರರು ಇದ್ದಾರೆ. ಕಾರಟಗಿಯಲ್ಲಿ ೪೪೯ ಪುರುಷರು, ೧೭೨ ಮಹಿಳೆಯರು ಸೇರಿ ಒಟ್ಟು ೬೨೧ ಜನರು ಮತದಾನ ಮಾಡಿದರೆ, ಸಿದ್ದಾಪುರದಲ್ಲಿ ೨೩೩ ಪುರುಷರು ಮತ್ತು ೯೪ ಮಹಿಳೆಯರು ಸೇರಿ ೩೨೭ ಜನರು ಮತ ಚಲಾಯಿಸಿದರು. ಆ ಮೂಲಕ ಕಾರಟಗಿ ಕೇಂದ್ರದಲ್ಲಿ ಶೇ.೮೧.೨೮ ಮತ್ತು ಸಿದ್ದಾಪುರದಲ್ಲಿ ಶೇ.೮೨.೯೯ರಷ್ಟು ಮತದಾನವಾಗಿದ್ದು, ತಾಲೂಕುವಾರ ಒಟ್ಟು ೮೧.೮೨ರಷ್ಟು ಮತದಾನವಾಗಿದೆ.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಮತಗಟ್ಟೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮತದಾನ ಮಾಡಿದರು.ಕನಕಗಿರಿಯಲ್ಲಿ ಶಾಂತಿಯುತ ಮತದಾನ:
ಈಶಾನ್ಯ ಪದವೀಧರ ಚುನಾವಣೆ ನಿಮಿತ್ತ ಸೋಮವಾರ ತಾಲೂಕು ವ್ಯಾಪ್ತಿಯ ಮೂರು ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು.ಕನಕಗಿರಿಯಲ್ಲಿ ೩೪೮, ಹುಲಿಹೈದರದಲ್ಲಿ ೧೩೮ ಹಾಗೂ ನವಲಿಯಲ್ಲಿ ೧೦೩ ಪದವೀಧರರು ಹಕ್ಕು ಚಲಾಯಿಸಿದರು. ೬೬೮ ಮತಗಳ ಪೈಕಿ ೫೮೯ ಮತದಾರರು ಮತದಾನ ಮಾಡಿದ್ದಾರೆ. ಮೂರು ಬೂತ್‌ಗಳಲ್ಲಿ ವಿದ್ಯುತ್ ಸಂಪರ್ಕ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಹಾಗೂ ಮುಂಜಾಗ್ರತಾ ಕ್ರಮವಾಗಿ ಮತಗಟ್ಟೆ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.ತಹಸೀಲ್ದಾರ ವಿಶ್ವನಾಥ ಮುರುಡಿ, ಗ್ರೇಡ್-೨ ತಹಸೀಲ್ದಾರ ವಿ.ಎಚ್. ಹೊರಪೇಟೆ ಜಂಟಿಯಾಗಿ ಕನಕಗಿರಿ, ನವಲಿ ಹಾಗೂ ಹುಲಿಹೈದರ ಬೂತ್‌ಗಳಿಗೆ ತೆರಳಿ ಮತದಾನದ ವ್ಯವಸ್ಥೆ ಪರಿಶೀಲಿಸಿದರು. ಮತದಾರರಿಗೆ ಆಗುವ ಸಣ್ಣ-ಪುಟ್ಟ ತೊಂದರೆಗಳನ್ನು ಸರಿಪಡಿಸಿ ಅಚ್ಚುಕಟ್ಟಾದ ಮತದಾನ ನಡೆಸುವಂತೆ ಸಿಬ್ಬಂದಿಗೆ ಸೂಚಿಸಿದರು.ಈ ವೇಳೆ ಪಿಐ ಎಂ.ಡಿ ಪೈಜುಲ್ಲಾ, ಪಿಡಿಒಗಳಾದ ಅಮರೇಶ ರಾಠೋಡ, ವೀರಣ್ಣ ನಕ್ರಳ್ಳಿ ಸೇರಿದಂತೆ ಚುನಾವಣಾ ಸಿಬ್ಬಂದಿಯವರು ಇದ್ದರು.ಅರ್ಜಿ ಸಲ್ಲಿಸಿದರೂ ಸಿಗದ ಅವಕಾಶ:ಪಟ್ಟಣದ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಪದವೀಧರರು ಈಶಾನ್ಯ ಪದವೀಧರ ಚುನಾವಣೆಗೆ ಮತದಾನದ ಹಕ್ಕು ಪಡೆಯಲು ಅರ್ಜಿ ಸಲ್ಲಿಸಿದರೂ ಅವಕಾಶ ದೊರೆತಿಲ್ಲ. ತಹಸೀಲ್ದಾರ್ ಕಚೇರಿಯಲ್ಲಿ ಪದವೀಧರರು ಅರ್ಜಿಯೊಂದಿಗೆ ತಮ್ಮ ದಾಖಲೆ ನೀಡಿ, ಸ್ವೀಕೃತಿ ಪ್ರತಿ ಪಡೆದಿದ್ದರೂ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಲ್ಲ. ಇದರಿಂದಾಗಿ ಸುಮಾರು ನೂರಾರು ಪದವೀಧರರು ಮತದಾನದಿಂದ ವಂಚಿತರಾಗುವಂತಾಗಿದೆ.ನಡೆದ ವಾರದ ಸಂತೆ:ಈಶಾನ್ಯ ಪದವೀಧರ ಚುನಾವಣೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಾತ್ರೆ ಹಾಗೂ ಸಂತೆ ನಡೆಸದಂತೆ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ಆದೇಶ ಪಟ್ಟಣದಲ್ಲಿ ಉಲ್ಲಂಘನೆಯಾಗಿದೆ. ಪ್ರತಿ ಸೋಮವಾರ ನಡೆಯುವ ವಾರದ ಸಂತೆ ಎಪಿಎಂಸಿ ಯಾರ್ಡಿನಲ್ಲಿ ನಡೆದಿದ್ದು, ತರಕಾರಿ, ಮಸಾಲೆ, ಹಣ್ಣು, ಕಿರಾಣಿ ಸೇರಿ ನಾನಾ ದಿನಸಿ ವ್ಯಾಪಾರ ಪ್ರತಿ ವಾರದಂತೆ ನಡೆಯಿತು.