ಸಾರಾಂಶ
ವಿದುಷಿ ಮಾನಸಿ ಸುಧೀರ್ ಕವಿ ಬಿ.ಆರ್. ಲಕ್ಷ್ಮಣರಾವ್ ಅವರ ಕವನದ ಸಾಲುಗಳನ್ನು ಸುಶ್ರಾವ್ಯವಾಗಿ ಹಾಡಿ ನೆರೆದವರ ಮನಸ್ಸುಗಳಿಗೆ ನವಚೈತನ್ಯ ಮೂಡಿಸಿದರು.
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನಲ್ಲಿ ಇತ್ತೀಚೆಗೆ ವಾರ್ಷಿಕೋತ್ಸವ ನಡೆಯಿತು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಂತಾರ ಸಿನಿಮಾ ಖ್ಯಾತಿಯ ವಿದುಷಿ ಮಾನಸಿ ಸುಧೀರ್ ಮಾತನಾಡಿ, ಜೀವನದ ಲವಲವಿಕೆಯನ್ನು ಹಸಿರಾಗಿಟ್ಟುಕೊಳ್ಳಲು ಯುವ ಸಮುದಾಯ ಶ್ರಮಿಸಬೇಕು. ಸಮುದಾಯ ಪ್ರಜ್ಞೆ ನಮ್ಮ ಎಲ್ಲ ಚಟುವಟಿಕೆಗಳಲ್ಲಿ ಸ್ಥಾಯಿ ಭಾವವಾಗಿದ್ದಾಗ ಜೀವನದ ಉನ್ನತ ಮೆಟ್ಟಿಲುಗಳನ್ನು ಸರಾಗವಾಗಿ ಏರಬಹುದು ಎಂದು ತಮ್ಮ ಜೀವನದ ಯಶಸ್ಸಿನ ಗುಟ್ಟನ್ನು ವಿದ್ಯಾರ್ಥಿಗಳಿಗೆ ಹಂಚಿ ಕವಿ ಬಿ.ಆರ್. ಲಕ್ಷ್ಮಣರಾವ್ ಅವರ ಕವನದ ಸಾಲುಗಳನ್ನು ಸುಶ್ರಾವ್ಯವಾಗಿ ಹಾಡಿ ನೆರೆದವರ ಮನಸ್ಸುಗಳಿಗೆ ನವಚೈತನ್ಯ ಮೂಡಿಸಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಮುಂಬೈಯ ಹಳೆವಿದ್ಯಾರ್ಥಿ ಸಂಘ ಅಧ್ಯಕ್ಷ ಉದಯ ಸುಂದರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಸಮುದಾಯವನ್ನು ಧನಾತ್ಮಕವಾಗಿ ರೂಪಿಸಲು ಸರಿಯಾದ ಮಾರ್ಗದರ್ಶನ ಅತ್ಯಗತ್ಯ, ಕಾಲೇಜಿನ ಬೆಳವಣಿಗೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ಸದಾ ಸಹಕಾರಿಯಾಗಿದ್ದು, ಅವಶ್ಯಕ ಜವಾಬ್ದಾರಿಗಳನ್ನು ನಿಭಾಯಿಸುತ್ತಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ವೈ.ಭಾಸ್ಕರ ಶೆಟ್ಟಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಮಿಥುನ್ ಚಕ್ರವರ್ತಿ, ಶೈಕ್ಷಣಿಕ ವರ್ಷ ೨೦೨೩-೨೪ರ ವಾರ್ಷಿಕ ವರದಿಯನ್ನು ವಾಚಿಸಿದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಸೋನಾ ಎಚ್.ಸಿ. ಸ್ವಾಗತಿಸಿದರು. ವಿದ್ಯಾರ್ಥಿ ನಾಯಕ ಅಭಿಲಾಷ್, ಕಾರ್ಯದರ್ಶಿ ವರ್ಷಾ, ಜೊತೆ ಕಾರ್ಯದರ್ಶಿ ಶ್ರೇಯಾ ವೇದಿಕೆಯಲ್ಲಿದ್ದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ವೃಂದ, ಅಂಗ ಸಂಸ್ಥೆಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.