ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಹಗಲು ಹೊತ್ತಿನಲ್ಲಿ ಸೊಳ್ಳೆಗಳ ಕಡಿತದಿಂದ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುವ ಕಾರಣ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳ ಕೊಠಡಿಗಳನ್ನು ಪರಿಶೀಲಿಸಿ ಸ್ವಚ್ಛತೆ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕಾಗಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿಯ ವೀಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ನಡೆದ ‘ಮುಂಗಾರು ಹಾಗೂ ಬರ ನಿರ್ವಹಣೆ’ಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಸ್ಪತ್ರೆಗಳ ಶಸ್ತ್ರಚಿಕಿತ್ಸೆ ಕೊಠಡಿಗಳು ಸೇರಿ ಆಸ್ಪತ್ರೆ ಆವರಣ ಸ್ವಚ್ಛತೆ ಕುರಿತಂತೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಅವರು, ಪಾವಗಡದಲ್ಲಿ ನಡೆದಂತಹ ಪ್ರಕರಣ ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು. ಜಿಲ್ಲೆಯ ಕುಡಿಯುವ ನೀರಿನ ಮೂಲಗಳ ಪರೀಕ್ಷೆ ನಡೆಸಲಾಗಿದ್ದು, ಕುಡಿಯುವ ನೀರಿನ ಪರೀಕ್ಷೆಯಲ್ಲಿ ನೀರಿನ ಅಶುದ್ಧತೆ ಬಗ್ಗೆ ವರದಿ ಬಂದ ತಕ್ಷಣ ಸಾರ್ವಜನಿಕರಿಗೆ ಅಶುದ್ಧ ಕುಡಿಯುವ ನೀರು ಪೂರೈಕೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಸೂಚಿಸಿದರಲ್ಲದೆ, ಪರ್ಯಾಯವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನೀರಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಿಪಟೂರು ತಾಲೂಕಿನ ಈಚನೂರು ಕೆರೆಗೆ ಮಲೀನಯುಕ್ತ ನೀರು ಸೇರುತ್ತಿರುವ ಬಗ್ಗೆ ಇಂದೇ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಉಪವಿಭಾಗಾಧಿಕಾರಿ ಸಪ್ತಶ್ರೀ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ರವೀಶ್ ಮಾತನಾಡಿ, ಜಿಲ್ಲೆಯಾದ್ಯಂತ 103 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿ ಮೂಲಕ ಹಾಗೂ 5 ಕಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಮಳೆಯಿಂದ ಕೊಳವೆಬಾವಿಗಳಿಗೆ ಜಲ ಮರುಪೂರ್ಣವಾಗಿ ಅಂತರ್ಜಲಮಟ್ಟ ಹೆಚ್ಚುತ್ತಿದ್ದು, ಈ ಬಗ್ಗೆ ಮರುಪರಿಶೀಲಿಸುವಂತೆ ಸೂಚಿಸಿದರು.ಕುಣಿಗಲ್ ತಹಸೀಲ್ದಾರ್ ಮಾತನಾಡಿ, ಮಳೆಯಿಂದ ತಾಲೂಕು ವ್ಯಾಪ್ತಿಯಲ್ಲಿ 3 ಮನೆಗಳು ಹಾನಿಗೀಡಾಗಿದ್ದು ಪರಿಶೀಲಿಸಲಾಗಿದೆ ಎಂದರು. ಗುಬ್ಬಿ ತಹಸೀಲ್ದಾರ್ ಆರತಿ ಮಾತನಾಡಿ, 15 ಮನೆಗಳು ಹಾನಿಯಾಗಿದ್ದು, ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ, ಒಬ್ಬ ವ್ಯಕ್ತಿ ಮೇಲೆ ಮರದ ಕೊಂಬೆ ಬಿದ್ದು ಕಾಲು ಮುರಿದಿದ್ದು, ಅಗತ್ಯ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಶಿರಾ ತಾಲೂಕಿನಲ್ಲಿ ಮಳೆಯಿಂದಾಗಿ ಒಂದು ಮರ ಉರುಳಿ ಬಿದ್ದಿದ್ದು ಅದನ್ನು ತೆರವುಗೊಳಿಸಲಾಗಿದೆ. ಉಳಿದಂತೆ ಮಳೆಯಿಂದ ಹಾನಿ ಸಂಭವಿಸಿಲ್ಲ ಎಂದು ತಹಸೀಲ್ದಾರ್ ಮಾಹಿತಿ ನೀಡಿದರು. ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯಲ್ಲಿ 170 ಮಿಮೀ ದಾಖಲೆಯ ಉತ್ತಮ ಮಳೆಯಾಗಿದೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದರು. ಪಾವಗಡ ತಹಸೀಲ್ದಾರ್ ಮಾಹಿತಿ ನೀಡುತ್ತಾ, ತಾಲೂಕಿನಾದ್ಯಂತ ಮಳೆಯಿಂದಾಗಿ 4 ಮನೆಗಳು ಹಾನಿಗೀಡಾಗಿದ್ದು, ಈಗಾಗಲೇ ಪರಿಹಾರ ಪಾವತಿಸಲಾಗಿದೆ ಹಾಗೂ ಭಾನುವಾರ ಸುರಿದ ಮಳೆಗೆ 3 ಮನೆಗಳು ಭಾಗಶಃ ಹಾನಿಯಾಗಿದ್ದು, ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ 38 ಹೆಕ್ಟರ್ ಪ್ರದೇಶದ ಅಡಿಕೆ ಹಾಗೂ ಬಾಳೆ, ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ ಎಂದರು.ಎಲ್ಲಾ ತಹಸೀಲ್ದಾರರಿಂದ ಮಾಹಿತಿ ಪಡೆದು ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಎಲ್ಲಾ ತಾಲೂಕು ತೋಟಗಾರಿಕೆ ಹಾಗೂ ಸಹಾಯಕ ಕೃಷಿ ನಿರ್ದೇಶಕರು ಮಳೆಯಿಂದ ಹಾನಿಯಾಗಿರುವ ಜಮೀನುಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ಮಹಜರ್ ನಡೆಸಿ ಅರ್ಹತೆ ಹೊಂದಿದ್ದರೆ ಅಂತಹ ಫಲಾನುಭವಿಗಳಿಗೆ ಶೀಘ್ರ ಪರಿಹಾರ ಮೊತ್ತ ಪಾವತಿಸುವಂತೆ ಸೂಚಿಸಿದರು.
ಜಿಲ್ಲೆಯ ಎಲ್ಲಾ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸಮರ್ಪಕ ಕುಡಿಯುವ ನೀರು ಪೂರೈಕೆ ಆಗುತ್ತಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಚರಂಡಿ ನೀರು, ಮಳೆ ನೀರು ಕುಡಿಯುವ ನೀರು ಪೂರೈಸುವ ಸಂಪರ್ಕಗಳಿಗೆ ಮಿಶ್ರಿತವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸೂಚಿಸಿದರಲ್ಲದೆ, ಆರೋಗ್ಯಾಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಒಟ್ಟಾಗಿ ನೀರಿನ ಸಂಗ್ರಹಾಗಾರಗಳನ್ನು ಪರಿಶೀಲಿಸುವಂತೆ ಸೂಚಿಸಿದರು.ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಾರದಮ್ಮ, ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಮೇವಿನ ಬ್ಯಾಂಕ್ ಅಗತ್ಯತೆ ಬಗ್ಗೆ ಸ್ಥಳ ಪರಿಶೀಲಿಸಿ:ಜಿಲ್ಲೆಯಾದ್ಯಂತ ಬರ ನಿರ್ವಹಣೆ ನಿಟ್ಟಿನಲ್ಲಿ ೨೧ ಮೇವಿನ ಬ್ಯಾಂಕುಗಳನ್ನು ಸ್ಥಾಪಿಸಲಾಗಿದ್ದು, ಪ್ರಸ್ತುತ ರೈತರಿಂದ ಬೇಡಿಕೆಯಿಲ್ಲದ 6 ಮೇವಿನ ಬ್ಯಾಂಕುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಗಿರೀಶ್ ಬಾಬು ರೆಡ್ಡಿ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಮೇವಿನ ಬ್ಯಾಂಕ್ ಅಗತ್ಯತೆ ಕುರಿತು ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಅವಶ್ಯಕತೆ ಇಲ್ಲದಿದ್ದಲ್ಲಿ ಅವುಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು.
ಜಿಲ್ಲೆಯ ಕೆಲವೆಡೆ ನಾಯಿ ಕಡಿತದಿಂದ ಸಾರ್ವಜನಿಕರು ಗಾಯಗೊಂಡಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಜಿಲ್ಲೆಯಾದ್ಯಂತ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ವರದಿ(ಎಬಿಸಿ)ಯನ್ನು ತ್ವರಿತವಾಗಿ ಪಡೆದು ಬೀದಿ ನಾಯಿಗಳ ಹಾವಳಿಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಗರ ಯೋಜನಾ ನಿರ್ದೇಶಕ ಅಂಜಿನಪ್ಪನವರಿಗೆ ಸೂಚಿಸಿದರು.