ಸಾರಾಂಶ
ಶಿರಸಿ: ಬ್ಲಾಕ್‌ಮೇಲ್ ಮೂಲಕ ಉದ್ಯಮಿಯ ಪುತ್ರನ ಆತ್ಮಹತ್ಯೆಗೆ ಕಾರಣರಾದ ನಕಲಿ ಪತ್ರಕರ್ತರನ್ನು ಇನ್ನೂ ಬಂಧಿಸದ ಬಗ್ಗೆ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಇಲ್ಲಿಯ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನೂರಕ್ಕೂ ಅಧಿಕ ಕಾರ್ಯಕರ್ತರು, ಪೊಲೀಸ್ ಇಲಾಖೆಯ ನಿರ್ಲಕ್ಷ್ಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ನಗರ ಘಟಕ ಅಧ್ಯಕ್ಷ ಆನಂದ ಸಾಲೇರ, ನಗರದ ಚಿನ್ನದ ಅಂಗಡಿ ಉದ್ಯಮಿ ಪ್ರಕಾಶ ಪಾಲನಕರ ಪ್ರಾಮಾಣಿಕವಾಗಿ ವ್ಯವಹಾರ ಮಾಡಿಕೊಂಡು ಬಂದಿದ್ದಾರೆ. ನಕಲಿ ಪತ್ರಕರ್ತರಾದ ರವೀಶ ಹೆಗಡೆ, ಗಣೇಶ ಆಚಾರಿ ಹಾಗೂ ಓಂ ಹೆಗಡೆ ಬ್ಲಾಕ್ ಮೇಲ್ ಮಾಡಿದ್ದರು.ಕೊನೆಗೆ ಪ್ರಕಾಶ ಪಾಲನಕರ ಅವರ ಪುತ್ರ ಪ್ರೀತಂ ಪಾಲನಕರ್ ಅವರಿಗೆ ಬ್ಲಾಕ್‌ಮೇಲ್ ಮಾಡಿದ್ದರಿಂದ ಪ್ರೀತಂ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಂ ಅವರ ಸಾವಿಗೆ ಕಾರಣರಾದ ಆರೋಪಿಗಳನ್ನು ಪೊಲೀಸ್ ಇಲಾಖೆ ಇನ್ನೂ ಬಂಧಿಸಿಲ್ಲ. ಇದು ಪೊಲೀಸ್ ಇಲಾಖೆಯ ಮೇಲೆ ಸಂಶಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ಈ ನಕಲಿ ಪತ್ರಕರ್ತರ ಗ್ಯಾಂಗ್ ಈಗಾಗಲೇ ಕೆಡಿಸಿಸಿ ಬ್ಯಾಂಕಿಗೂ ಮೋಸ ಮಾಡಿದೆ. ಬ್ಲಾಕ್‌ಮೇಲ್‌ಗೆ ಒಳಗಾದ ಯುವಕ ಪ್ರೀತಂ ಆತ್ಮಹತ್ಯೆ ಮಾಡಿಕೊಂಡು ೨೦ ದಿನಗಳು ಕಳೆದಿದ್ದರೂ ಆರೋಪಿಗಳ ಬಂಧನ ಆಗಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಇಂತಹ ಘಟನೆ ಜೋರಾಗಿದೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಏಕೆ ಹೆದರುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಆರೋಪಿಗಳಿಗೆ ಯಾರ ರಾಜಕೀಯ ರಕ್ಷಣೆ ಇದೆ ಎಂಬುದು ಬಹಿರಂಗಗೊಳ್ಳಬೇಕು. ಈ ನಕಲಿ ಪತ್ರಕರ್ತರು ಪ್ರಾಮಾಣಿಕ ಪತ್ರಕರ್ತರ ಹೆಸರನ್ನೂ ಹಾಳು ಮಾಡಿ ಕಪ್ಪುಚುಕ್ಕೆ ಮೂಡಿಸುತ್ತಿದ್ದಾರೆ. ಪ್ರೀತಂ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಆರಂಭದಲ್ಲಿ ಪೊಲೀಸ್ ಇಲಾಖೆ ಚುರುಕಾಗಿದ್ದರೂ ನಂತರ ಮಂಕಾಗಿದೆ. ತನಿಖೆ ಚುರುಕು ಮಾಡಿ ಆರೋಪಿಗಳನ್ನು ತಕ್ಷಣ ಬಂಧಿಸುವ ನಗರದ ಪೊಲೀಸ್ ಇಲಾಖೆ ಈಗ ಏಕೆ ಮಂಕಾಗಿದೆ? ಈಗಲೂ ನಕಲಿ ಪತ್ರಕರ್ತರಿಗೆ ರಕ್ಷಣೆ ನೀಡಿದರೆ ಮುಂದೆ ಬೃಹತ್ ಮರವಾಗಿ ಅವರು ಬೆಳೆಯಲಿದ್ದಾರೆ ಎಂದರು.ಪ್ರೀತಂ ಪಾಲನಕರ್ ಅವರ ತಂದೆ ಪ್ರಕಾಶ ಪಾಲನಕರ್, ಪ್ರಮುಖರಾದ ಶ್ರೀನಿವಾಸ ವೆರ್ಣೇಕರ್, ವಿನೋದಾ ಶೇಟ್, ಶ್ರೀಕಾಂತ ನಾಯ್ಕ, ನಾಗರಾಜ ನಾಯ್ಕ, ನಂದನ ಸಾಗರ ರಮಾಕಾಂತ ಭಟ್ ಇತರರಿದ್ದರು.ಎಲ್ಲ ಆಯಾಮದಲ್ಲಿ ತನಿಖೆ ನಡೆಯಲಿ
ಶಿರಸಿ: ಶಿರಸಿಯಲ್ಲಿ ಇತ್ತೀಚಿಗೆ ಸದ್ದು ಮಾಡುತ್ತಿರುವ ಪ್ರೀತಮ್ ಪಾಲನಕರ್ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರ ತನಿಖೆಯ ವಿರುದ್ಧ ಸಾಕಷ್ಟು ಅಸಮಾಧಾನ ವ್ಯಕ್ತವಾಗುತ್ತಿದೆ. ಕೇವಲ ಮೂರು ಆರೋಪಿಗಳ ಬಂಧನ ಮಾತ್ರವಲ್ಲದೇ ಎಲ್ಲ ಆಯಾಮದಲ್ಲಿ ತನಿಖೆ ನಡೆಯಲಿ ಎಂಬ ಆಗ್ರಹ ವ್ಯಕ್ತವಾಗಿದೆ.ಕಳೆದ ೧೫ ದಿನಗಳ ಹಿಂದೆ ಯುವ ಉದ್ಯಮಿ ಪ್ರೀತಂ ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೆ ಸಂಬಂಧಿಸಿ ಮೂವರು ಆರೋಪಿಗಳ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದೆ. ಕಾರಣ ಅವರನ್ನು ಬಂಧಿಸಬೇಕು ಎಂಬ ಒತ್ತಾಯ ಸಾಕಷ್ಟು ವ್ಯಕ್ತವಾಗಿದೆ. ಪಕ್ಷಾತೀತವಾಗಿ ಈ ಬಗ್ಗೆ ಹೋರಾಟ ನಡೆದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಮಾರುಕಟ್ಟೆ ಠಾಣೆಯ ಪಿಎಸ್ಐ ರತ್ನ ಕುರಿ ತನಿಖಾಧಿಕಾರಿಯಾಗಿ ಕೆಲಸ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರೀತಂ ಕುಟುಂಬದವರ ಹೇಳಿಕೆಯನ್ನೂ ಸಹ ಪಡೆದಿದ್ದರು ಎನ್ನಲಾಗಿದೆ. ಆದರೆ ಏಕಾಏಕಿಯಾಗಿ ಅವರನ್ನು ಬದಲಿಸಿ ಸಿಪಿಐ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಅವರು ಕೇವಲ ಆರೋಪಿಗಳ ಹುಡುಕಾಟದಲ್ಲಿದ್ದಾರೆ ಎನ್ನಲಾಗಿದೆ.ಆತ್ಮಹತ್ಯೆ ಪ್ರಕರಣದಲ್ಲಿ ಮುಖ್ಯ ಸಾಕ್ಷಿ ಆಗಿರುವ ಪ್ರೀತಂ ಮೊಬೈಲ್ ತನಿಖಾಧಿಕಾರಿ ಬಳಿಯಿದ್ದು, ಅದನ್ನು ಎಫ್ಎಸ್ಎಲ್ ವರದಿಗೆ ಕಳಿಸಿ ಪರಿಶೀಲನೆ ಮಾಡಿದಲ್ಲಿ ಸರಿಯಾದ ಕಾರಣ ತಿಳಿಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜತೆಗೆ ಕುಟುಂಬದವರ ಹೇಳಿಕೆ ಪಡೆದಲ್ಲಿ ಬೇರೆ ಬೇರೆ ಆಯಾಮದಲ್ಲಿ ತನಿಖೆ ನಡೆದಲ್ಲಿ ಪ್ರಕರಣಕ್ಕೆ ಇನ್ನೂ ಹೆಚ್ಚಿನ ಆದ್ಯತೆ ಬರಲಿದೆ. ಪೊಲೀಸರು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಿ ಎಂಬ ಆಗ್ರಹ ವ್ಯಕ್ತವಾಗಿದೆ.