ಸಾರಾಂಶ
ಈ ವರ್ಷ ಮೇ ತಿಂಗಳಲ್ಲಿ ಅಲ್ಪ ಮಳೆಯಾಗಿದ್ದರಿಂದ ನರಗುಂದ ತಾಲೂಕಿನ ರೈತರು ಹೆಸರು ಬಿತ್ತನೆ ಮಾಡಿದ್ದು, ಈಗ ತೇವಾಂಶ ಕೊರತೆ ಉಂಟಾಗಿದೆ. ಹೀಗಾಗಿ ಸ್ಪ್ರಿಂಕ್ಲರ್ ಮೂಲಕ ಹೆಸರು ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ. ಬೆಳೆ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.
ಎಸ್.ಜಿ. ತೆಗ್ಗಿನಮನಿ
ನರಗುಂದ: ಈ ವರ್ಷ ಮೇ ತಿಂಗಳಲ್ಲಿ ಅಲ್ಪ ಮಳೆಯಾಗಿದ್ದರಿಂದ ರೈತರು ಹೆಸರು ಬಿತ್ತನೆ ಮಾಡಿದ್ದು, ಈಗ ತೇವಾಂಶ ಕೊರತೆ ಉಂಟಾಗಿದೆ. ಹೀಗಾಗಿ ಸ್ಪ್ರಿಂಕ್ಲರ್ ಮೂಲಕ ಹೆಸರು ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ.ನರಗುಂದ ತಾಲೂಕು ಹೆಚ್ಚು ನೀರಾವರಿ ಪ್ರದೇಶ ಹೊಂದಿದೆ. ಪ್ರಸಕ್ತ ವರ್ಷ ಮೇ ತಿಂಗಳಲ್ಲಿ ಕೆಲವು ರೈತರು ಹೆಸರು ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿ 10ರಿಂದ 12 ದಿವಸ ಗತಿಸಿದರೂ ಮಳೆ ಆಗಲೇ ಇಲ್ಲ. ಹೀಗಾಗಿ ಬಿತ್ತನೆ ಮಾಡಿದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಕೃಷಿ ಹೊಂಡದ ಮೊರೆ: ಈ ವರ್ಷ ತಾಲೂಕಿನಲ್ಲಿ ಮುಂಗಾರು ಮಳೆ ಆಗದೆ ರೈತರು ಕೃಷಿ ಹೊಂಡಗಳು ಖಾಲಿ ಖಾಲಿಯಾಗಿದ್ದವು. ಆದರೆ ಮೇ 14ರಿಂದ 24ರ ವರೆಗೆ ಮಲಪ್ರಭಾ ಜಲಾಶಯದಿಂದ ಕುಡಿಯುವ ನೀರಿಗೆಂದು ಕಾಲುವೆಗಳಿಗೆ ನೀರು ಹರಿಸಿದ ಸಂದರ್ಭದಲ್ಲಿ ರೈತರು ತಮ್ಮ ಕೃಷಿ ಹೊಂಡಗಳನ್ನು ತುಂಬಿಸಿಕೊಂಡಿದ್ದರು. ಇಂದು ಅದೇ ಸಂಗ್ರಹವಿರುವ ನೀರನ್ನು ಪಂಪ್‌ಸೆಟ್‌ಗಳ ಮೂಲಕ ನೀರು ಎತ್ತಿ ಬಿತ್ತನೆ ಮಾಡಿದ ಹೆಸರು ಬೆಳೆ ರಕ್ಷಣೆ ಮಾಡುತ್ತಿದ್ದಾರೆ. ಕೃಷಿಹೊಂಡ ಇಲ್ಲದ ರೈತರು ಮಳೆಗಾಗಿ ಆಕಾಶ ನೋಡುವ ಸ್ಥಿತಿ ಬಂದಿದೆ.ಬಿತ್ತನೆ ವಿವರ: ತಾಲೂಕಿನಲ್ಲಿ ರೈತರು ಈಗಾಗಲೇ 10ರಿಂದ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ. ತೇವಾಂಶಭರಿತ ಮಳೆಯಾಗದೆ ರೈತ ಮಳೆಗಾಗಿ ಕಾಯುತ್ತಿದ್ದಾನೆ ಎಂದು ಕೃಷಿ ಅಧಿಕಾರಿಗಳು ಹೇಳಿದರು.
ಮುಂಗಾರು ಅಲ್ಪಸ್ವಲ್ಪ ಆಗಿದ್ದರಲ್ಲಿ ಹೆಸರು ಬಿತ್ತನೆ ಮಾಡಿದ್ದೇವೆ, ಮಳೆಯಾಗದೇ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸುತ್ತಿದ್ದೇವೆ ಎಂದು ರೈತ ಯಲ್ಲಪ್ಪ ಚಲವಣ್ಣವರ ಹೇಳಿದರು.ಹಿಂದಿನ ವರ್ಷ ಹಾನಿಗೊಳಗಾದ ರೈತರಿಗೆ ಪರಿಹಾರ ವಿತರಿಸುವಲ್ಲಿ ತಾರತಮ್ಯವಾಗಿದೆ. ಎಲ್ಲ ರೈತರಿಗೆ ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಬಿಡುಗಡೆ ಮಾಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ರೈತ ಸಂಘಟನೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಹನುಮಂತ ಮಡಿವಾಳರ ಹೇಳಿದರು.